![[ಮಾದಕ ವಸ್ತು ಸೇವನೆ ಪ್ರಕರಣ] ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ಸೇರಿದಂತೆ ಐವರಿಗೆ ಠಾಣಾ ಜಾಮೀನು ಮಂಜೂರು](https://gumlet.assettype.com/barandbench-kannada%2F2022-06%2F65ded4f2-c910-4bc8-a070-dab79f7d9e3a%2FWhatsApp_Image_2022_06_14_at_9_45_02_AM.jpeg?auto=format%2Ccompress&fit=max)
ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ನಡೆದಿದ್ದ ಮೋಜಿನ ಕೂಟದಲ್ಲಿ ಭಾಗಿಯಾಗಿ, ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಸೇರಿದಂತೆ ಐವರಿಗೆ ಸೋಮವಾರ ತಡರಾತ್ರಿ ಹಲಸೂರು ಪೊಲೀಸರು ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನ ಎಂ ಜಿ ರಸ್ತೆಯ ಟ್ರಿನಿಟಿ ವೃತ್ತದ ಸಮೀಪ 'ದಿ ಪಾರ್ಕ್' ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ವೀಕೆಂಡ್ ಪಾರ್ಟಿಯ ಮೇಲೆ ಭಾನುವಾರ ತಡರಾತ್ರಿ ದಾಳಿ ನಡೆಸಿದ್ದ ಪೊಲೀಸರು ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ ಹಾಗೂ ನಟ ಸಿದ್ಧಾಂತ್, ಖಾಸಗಿ ಸಂಸ್ಥೆಯಲ್ಲಿ ವ್ಯವಸ್ಥಾಪಕರಾದ ಅಖಿಲ್ ಸೋನಿ, ಲಾಜಿಸ್ಟಿಕ್ ಸಂಸ್ಥೆಯ ಉದ್ಯೋಗಿ ಹರ್ಜೋತ್ ಸಿಂಗ್, ಹವ್ಯಾಸಿ ಛಾಯಾ ಚಿತ್ರಗಾರ ಅಖಿಲ್ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹನಿ ರಫೀಕ್ ಸೇರಿದಂತೆ 35 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಬಂಧಿತರ ವಿರುದ್ಧ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ ಸೆಕ್ಷನ್ 22ಎ, 22ಬಿ ಮತ್ತು 27ಬಿ ಅಡಿ ಪ್ರಕರಣ ದಾಖಲಿಸಲಾಗಿದೆ.
ಶೋಧದ ಸಂದರ್ಭದಲ್ಲಿ ಕಸದ ಬುಟ್ಟಿಯಲ್ಲಿ ಎರಡು ಪ್ಯಾಕೆಟ್ ಮಾದಕ ವಸ್ತು, ಒಂದು ಪ್ಯಾಕೆಟ್‌ನಲ್ಲಿ ಏಳು ಎಂಡಿಎಂಎ ಟ್ಯಾಬ್ಲೆಟ್‌ಗಳು, 5ರಿಂದ 10 ಗ್ರಾಂ ತೂಕದ ಮತ್ತೊಂದು ಗಾಂಜಾ ಪ್ಯಾಕೆಟ್ ದೊರೆತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದರು.