ಮಾದಕ ದ್ರವ್ಯ ಸಂಗ್ರಹಣೆ, ಮಾರಾಟವು ರಾಜ್ಯದ ಆರ್ಥಿಕತೆ, ಸಮಾಜದ ವಿರುದ್ಧದ ಅಪರಾಧ: ಹೈಕೋರ್ಟ್

ಘಟನೆಯನ್ನು ಲಘುವಾಗಿ ಪರಿಗಣಿಸಲಾಗದು, ಕಬ್ಬಿಣದ ಕೈಗಳಿಂದ ವ್ಯವಹರಿಸಬೇಕಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಲು ಅರ್ಹ ಪ್ರಕರಣ ಇದಾಗಿಲ್ಲ. ಪ್ರಕರಣದ ಸ್ವರೂಪ, ಗಂಭೀರತೆ ಆಧರಿಸಿ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದ ಪೀಠ.
Karnataka HC and Justice Rajendra Badamikar
Karnataka HC and Justice Rajendra Badamikar
Published on

ಮಾದಕ ದ್ರವ್ಯ ಸಂಗ್ರಹಣೆ ಹಾಗೂ ಮಾರಾಟವು ರಾಜ್ಯದ ಆರ್ಥಿಕತೆ ಹಾಗೂ ಸಮಾಜದ ವಿರುದ್ಧದ ಅಪರಾಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದ್ದು, ಎಂಡಿಎಂ ಮಾದಕ ದ್ರವ್ಯ ಹೊಂದಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಇಬ್ಬರಿಗೆ ಜಾಮೀನು ನಿರಾಕರಿಸಿದೆ.

ಜಾಮೀನು ಕೋರಿ ರಾಜಸ್ಥಾನದ ಸುನೀಲ್‌ ಕುಮಾರ್‌ (28) ಮತ್ತು ಬೆಂಗಳೂರಿನ ಕೊಡಿಗೆಹಳ್ಳಿ ನಿವಾಸಿ ಅಶೋಕ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿದೆ.

ಪ್ರಕರಣದಲ್ಲಿ ದಾಖಲೆ ಪರಿರಿಶೀಲಿಸಿದಾಗ ವಾಣಿಜ್ಯ ಪ್ರಮಾಣದಲ್ಲಿ ಮಾದಕ ದ್ರವ್ಯವಾದ ಎಂಡಿಎಂ ಅನ್ನು ಆರೋಪಿಗಳಿಂದ ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮಾದಕ ದ್ರವ್ಯ ಮಾರಾಟವು ಸಮಾಜ ಮತ್ತು ರಾಜ್ಯದ ಆರ್ಥಿಕತೆ ವಿರುದ್ಧದ ಅಪರಾಧವಾಗಿದೆ. ಮಾದಕ ದ್ರವ್ಯ ಮಾರಾಟಕ್ಕೆ ವಿಶೇಷವಾಗಿ ಶಾಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಜನಾಂಗವನ್ನು ಗುರಿಯಾಗಿಸಿಕೊಳ್ಳಲಾಗಿದೆ. ಈ ಘಟನೆಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ, ಉಕ್ಕಿನ ಕೈಗಳಿಂದ ವ್ಯವಹರಿಸಬೇಕಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಲು ಅರ್ಹ ಪ್ರಕರಣ ಇದಾಗಿಲ್ಲ. ಪ್ರಕರಣದ ಸ್ವರೂಪ ಹಾಗೂ ಗಂಭೀರತೆ ಆಧರಿಸಿ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ದಾವಣಗೆರೆ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ-48ರ ಸರ್ವಿಸ್‌ ರಸ್ತೆಯ ಪಕ್ಕದಲ್ಲಿರುವ ಮಯೂರ್‌ ಗ್ಲೋಬಲ್‌ ಶಾಲೆ ಸಮೀಪ ಕೆಲ ವ್ಯಕ್ತಿಗಳು ಅಕ್ರಮವಾಗಿ ಎಂಡಿಎಂ ಮಾದಕ ದ್ರವ್ಯ ಸಂಗ್ರಹಿಸಿಕೊಂಡು ಸೇವನೆ ಮಾಡುತ್ತಿದ್ದ ಬಗ್ಗೆ 2023ರ ನವೆಂಬರ್‌ 5ರಂದು ಸಂಜೆ 4 ಗಟೆಗೆ ಸಿಇಎನ್‌ ಠಾಣೆಯ ಇನ್ಸ್‌ ಪೆಕ್ಟರ್‌ಗೆ ಮಾಹಿತಿ ಲಭ್ಯವಾಗಿತ್ತು. ಪೊಲೀಸ್‌ ಅಧೀಕ್ಷಕರ ಅನುಮತಿ ಪಡೆದು ಪೊಲೀಸರು ಸಂಜೆ 4.40ಕ್ಕೆ ದಾಳಿ ನಡೆಸಿದ್ದರು. ಕಾರಿನಲ್ಲಿದ್ದ ಐವರು ನಡೆ ಅನುಮಾನಸ್ಪದವಾಗಿತ್ತು. ಅವರನ್ನು ಬಂಧಿಸಿದ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಅವರ ಪೈಕಿ ಓರ್ವ ಆರೋಪಿ ರಾಮ್‌ ರತನ್‌ ನೀಡಿದ್ದ ಮಾಹಿತಿ ಮೇರೆಗೆ ಬೆಂಗಳೂರಿನ ಬಸವೇಶ್ವರ ಬಡಾವಣೆಯಲ್ಲಿನ ಏಳನೇ ಆರೋಪಿಯಾದ ಸುನೀಲ್‌ ಕುಮಾರ್‌ ಮನೆಯ ಮೇಲೆ 2023ರ ಡಿಸೆಂಬರ್‌ 3ರಂದು ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಎಂಟನೇ ಆರೋಪಿ ಅಶೋಕ್‌ ಕುಮಾರ್‌ ಸ್ಥಳದಲ್ಲಿದ್ದ. ಅವರಿಂದ 27 ಗ್ರಾಂ ಎಂಡಿಎಂ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. ಅವರ ವಿರುದ್ಧದ ಪ್ರಕರಣ ದಾಖಲಾಗಿತ್ತು. ವಿಚಾರಣಾಧೀನ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿತ್ತು. ಇದರಿಂದ ಆರೋಪಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು.

Kannada Bar & Bench
kannada.barandbench.com