ಮಾದಕವ್ಯಸನಿ ದಂಪತಿಯ ಮಲಗುವ ಕೋಣೆಯಿಂದ ಗಾಂಜಾ ವಶ; ಕೇವಲ ಪತಿ ಮಾತ್ರವೇ ಹೊಣೆಗಾರನಾಗಲಾರ ಎಂದ ದೆಹಲಿ ಹೈಕೋರ್ಟ್‌

ಪತಿ- ಪತ್ನಿ ಇಬ್ಬರೂ ಮಾದಕ ವಸ್ತುಗಳನ್ನು ಸೇವಿಸಿದ್ದನ್ನು ಒಪ್ಪಿದ್ದು ದಂಪತಿಯಾಗಿ ವಿಶೇಷ ಸಂಬಂಧ ಹಂಚಿಕೊಳ್ಳುವುದರಿಂದ, ಇಬ್ಬರಿಗೂ ಮಲಗುವ ಕೋಣೆಯಲ್ಲಿದ್ದ ನಿಷಿದ್ಧ ವಸ್ತು ಬಗ್ಗೆ ತಿಳಿದಿತ್ತು ಎಂದು ಊಹಿಸಬಹುದು ಎಂಬುದಾಗಿ ನ್ಯಾಯಾಲಯ ಹೇಳಿದೆ.
ಮಾದಕವ್ಯಸನಿ ದಂಪತಿಯ ಮಲಗುವ ಕೋಣೆಯಿಂದ ಗಾಂಜಾ ವಶ; ಕೇವಲ ಪತಿ ಮಾತ್ರವೇ ಹೊಣೆಗಾರನಾಗಲಾರ ಎಂದ ದೆಹಲಿ ಹೈಕೋರ್ಟ್‌
A1
Published on

ಮಾದಕವಸ್ತು ಸೇವನೆಯ ಹವ್ಯಾಸವನ್ನು ದಂಪತಿ ಹೊಂದಿದ್ದರೆ ಆಗ ಅವರ ನಿವಾಸದ ಮಲಗುವ ಕೋಣೆಯಿಂದ ವಶಪಡಿಸಿಕೊಂಡ ಮಾದಕವಸ್ತುವನ್ನು ಅವರಿಬ್ಬರಿಗೂ ಅನ್ವಯಿಸಬಹುದಾಗಿದೆ ಎಂದು ದೆಹಲಿ ಹೈಕೋರ್ಟ್‌ ಈಚೆಗೆ ತಿಳಿಸಿದೆ [ದೀಕ್ಷಿತಾ ಗೋಲ್ವಾಲಾ ಮತ್ತು ಮಾದಕವಸ್ತು ನಿಗ್ರಹ ದಳ ನಡುವಣ ಪ್ರಕರಣ].

ದಂಪತಿ ಮಲಗುವ ಕೋಣೆಯಿಂದ ಗಾಂಜಾ ವಶಪಡಿಸಿಕೊಳ್ಳುವಾಗ ಗಂಡನನ್ನೇ ಹೆಸರಿಸಬಹುದಾದರೂ ಪತಿ, ಪತ್ನಿ ಇಬ್ಬರೂ ಅದನ್ನು ಬಳಸುವ ಸ್ಥಳದಿಂದ ವಶಪಡಿಸಿಕೊಳ್ಳಲಾಗಿರುವುದರಿಂದ ಅದರ ಹೊಣೆಯನ್ನು ಗಂಡನಿಗೆ ಮಾತ್ರ ಹೊರಿಸಲಾಗದು ಎಂದು ನ್ಯಾ. ಜಸ್ಮೀತ್‌ ಸಿಂಗ್‌ ತಿಳಿಸಿದರು.

ಪತಿ ಮತ್ತು ಪತ್ನಿ ಇಬ್ಬರ ವಿರುದ್ಧ ಮಾದಕವಸ್ತು ನಿಗ್ರಹ ದಳ ಮಾದಕವಸ್ತು ಮತ್ತು ಅಮಲು ಪದಾರ್ಥ ಕಾಯಿದೆ (ಎನ್‌ಡಿಪಿಎಸ್‌ ಕಾಯಿದೆ) ಅಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಪತ್ನಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಏಕಸದಸ್ಯ ಪೀಠ ಈ ಅಭಿಪ್ರಾಯವ್ಯಕ್ತಪಡಿಸಿತು.

Also Read
ಎನ್‌ಡಿಪಿಎಸ್‌ ಕಾಯಿದೆಯು ಗಾಂಜಾ ಬೀಜ, ಎಲೆ ಹಾಗೂ ಕಾಂಡದ ತೂಕವನ್ನು ಒಳಗೊಳ್ಳುವುದಿಲ್ಲ: ಬಾಂಬೆ ಹೈಕೋರ್ಟ್

 “ಅರ್ಜಿದಾರೆ ಮತ್ತು ಪತಿ/ ಸಹ ಆರೋಪಿ , ಕೃನಾಲ್ ಗೋಲ್ವಾಲಾ ಇಬ್ಬರೂ ಮಾದಕವಸ್ತು ಸೇವಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ದಂಪತಿಗಳಾಗಿ ವಿಶೇಷ ಸಂಬಂಧ ಹಂಚಿಕೊಳ್ಳುವುದರಿಂದ, ಅರ್ಜಿದಾರೆ ಮತ್ತು ಪತಿ/ ಸಹ ಆರೋಪಿ , ಕೃನಾಲ್ ಗೋಲ್ವಾಲಾ ಅವರಿಬ್ಬರಿಗೂ ತಮ್ಮ ಮಲಗುವ ಕೋಣೆಯಲ್ಲಿ ಇದ್ದ ನಿಷಿದ್ಧ ವಸ್ತುಗಳ ಬಗ್ಗೆ ತಿಳಿದಿತ್ತು ಮತ್ತು ಅದನ್ನು ಪ್ರಜ್ಞಾಪೂರ್ವಕವಾಗಿ ಇರಿಸಿಕೊಂಡಿದ್ದರು” ಎಂದು ನ್ಯಾಯಾಲಯ ನುಡಿದಿದೆ.

ಆದರೂ ಮಧ್ಯಮ ಪ್ರಮಾಣದಲ್ಲಿ ಗಾಂಜಾ ದೊರೆತಿರುವುದರಿಂದ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 37ರ ಅಡಿಯಲ್ಲಿ ಕಠಿಣ ಜಾಮೀನು ಷರತ್ತುಗಳು ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆಕೆಯ ಪತಿಯ ಕಚೇರಿಯಲ್ಲಿ ವಾಣಿಜ್ಯ ಪ್ರಮಾಣದ ಮಾದಕವಸ್ತು ದೊರೆತಿರುವುದರಿಂದ ಮನೆ ಹಾಗೂ ಕಚೇರಿ ಎರಡೂ ಪ್ರತ್ಯೇಕವಾಗಿರುವುದರಿಂದ ಅಲ್ಲಿ ದೊರೆತ ಮಾದಕವಸ್ತುವಿಗೆ ಪತ್ನಿ ಹೊಣೆಗಾರಳಾಗುವುದಿಲ್ಲ. ಮಹಿಳೆ ವಾಣಿಜ್ಯ ಪ್ರಮಾಣದ ಮಾದಕವಸ್ತು ಸೇವಿಸಬಲ್ಲಳು ಎಂದು ಮೊಬೈಲ್‌ ಮಾತುಕತೆಗಳಲ್ಲಿ ತಿಳಿದುಬಂದಿದ್ದರೂ ಅದು ಸಂಭಾವ್ಯತೆ ಮಾತ್ರ ಆಗಿರುವುದರಿಂದ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 37ರ ವ್ಯಾಪ್ತಿಗೆ ಬರುವುದಿಲ್ಲ. ಆಕೆ ಡ್ರಗ್ ಡೀಲರ್ ಆಗಿದ್ದಾರೋ ಇಲ್ಲವೋ ಎಂಬುದು ತನಿಖೆ ಬಳಿಕವಷ್ಟೇ ಖಚಿತವಾಗಬೇಕಿದೆ ಎಂದು ನ್ಯಾಯಾಲಯ ತಿಳಿಸಿತು.

ಮಹಿಳೆ ದೇಶ ತೊರೆಯುವ ಅಪಾಯ ಇಲ್ಲ ಮತ್ತು ಸಾಕ್ಷ್ಯ ಹಾಳುಮಾಡುವ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಯಾವುದೇ ಆತಂಕವಿಲ್ಲ ಎಂಬ ಅಂಶ ಪರಿಗಣಿಸಿ, ನ್ಯಾಯಾಲಯ ಆಕೆಗೆ ಜಾಮೀನು ನೀಡಿದೆ.

Kannada Bar & Bench
kannada.barandbench.com