ದೇಶದಲ್ಲಿ 5ಜಿ ತಂತ್ರಜ್ಞಾನದ ಜಾರಿಯ ಬಗ್ಗೆ ಆಕ್ಷೇಪಿಸಿ ಬಾಲಿವುಡ್ ನಟಿ ಜೂಹಿ ಚಾವ್ಲಾ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿ ನ್ಯಾಯಾಲಯದಿಂದ ರೂ. 20 ಲಕ್ಷ ದಂಡ ಹಾಕಿಸಿಕೊಂಡಿದ್ದನ್ನು ಓದುಗರು ಮರೆತಿಲ್ಲ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂಹಿ ಚಾವ್ಲಾ ಮತ್ತು ಇನ್ನಿಬ್ಬರಿಂದ ರೂ. 20 ಲಕ್ಷ ದಂಡವನ್ನು ವಸೂಲಿ ಮಾಡಲು ದೆಹಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು (ಡಿಎಸ್‌ಎಲ್‌ಎಸ್‌ಎ) ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.
ಹಿಂದಿನ ವರ್ಷ ಜೂನ್‌ನಲ್ಲಿಯೇ ನ್ಯಾಯಾಲಯ ಆದೇಶವನ್ನು ನೀಡಿದ್ದರೂ ಈವರೆಗೆ ಅದರ ಪಾಲನೆಯನ್ನು ಜೂಹಿ ಮತ್ತಿತರರು ಮಾಡಿಲ್ಲ ಎಂದು ಡಿಎಸ್‌ಎಲ್‌ಎಸ್‌ಎ ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿತು. ಇತ್ತ ಜೂಹಿ ಪರ ವಕೀಲರು ಏಕಸದಸ್ಯ ಪೀಠದ ಆದೇಶದ ವಿರುದ್ಧ ವಿಭಾಗೀಯ ಪೀಠದ ಮುಂದೆ ಮನವಿ ಸಲ್ಲಿಸಿದ್ದು ಪ್ರಕರಣದ ಇದೇ ಜ.25ಕ್ಕೆ ನ್ಯಾಯಾಲಯದ ಮುಂದೆ ಬರಲಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಸ್‌ಎಲ್‌ಎಸ್‌ಎ ಪರ ವಕೀಲರು ಮೇಲ್ಮನವಿ ಸಲ್ಲಿಕೆಯಾಗಿದೆಯೇ ಹೊರತು ದಂಡ ವಸೂಲಿಗೆ ತಾವು ನೀಡಿರುವ ನೋಟಿಸ್‌ಗೆ ತಡೆಯಾಜ್ಞೆಯನ್ನು ನ್ಯಾಯಾಲಯ ನೀಡಿಲ್ಲ ಎಂದು ಗಮನಕ್ಕೆ ತಂದರು.
ವಾದ, ಪ್ರತಿವಾದವನ್ನು ಆಲಿಸಿದ ಪೀಠವು ಅಂತಿಮವಾಗಿ ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮುಂದೂಡಿತು.