ದುಬೈ ಬಾರ್‌ನಲ್ಲಿ ಮಹಿಳೆಯ ಶೋಷಣೆ, ಗ್ರಾಹಕರ ಜೊತೆ ಸಹಕರಿಸಲು ಒತ್ತಾಯ: ಆರೋಪಿಗೆ ಜಾಮೀನು ನಿರಾಕರಣೆ

ದುಬೈನ ರಾಗಿಣಿ ಬಾರ್‌ನ ಮೇಲ್ವಿಚಾರಕ ಮತ್ತು ವ್ಯವಸ್ಥಾಪಕರು ನೃತ್ಯ ಮಾಡುವಂತೆ ಬಲವಂತ ಮಾಡಿದ್ದರು. ಅಲ್ಲದೇ, ಗ್ರಾಹಕರಿಗೆ ಸಹಕರಿಸುವಂತೆ ಒತ್ತಾಯ ಮಾಡಿದ್ದರು ಎಂದು ದೂರುದಾರೆ ಆರೋಪಿಸಿದ್ದಾರೆ.
ದುಬೈ ಬಾರ್‌ನಲ್ಲಿ ಮಹಿಳೆಯ ಶೋಷಣೆ, ಗ್ರಾಹಕರ ಜೊತೆ ಸಹಕರಿಸಲು ಒತ್ತಾಯ: ಆರೋಪಿಗೆ ಜಾಮೀನು ನಿರಾಕರಣೆ
Published on

ಹಣ ಪಡೆದು ಮಹಿಳೆಗೆ ದುಬೈನಲ್ಲಿ ಕೆಲಸ ಕೊಡಿಸಿ, ಅಲ್ಲಿ ಆಕೆಯನ್ನು ಸಮಸ್ಯೆಗೆ ಸಿಲುಕಿಸಿದ್ದಲ್ಲದೇ ಆಕೆ ಭಾರತಕ್ಕೆ ಮರಳಿದಾಗ ಪಾಸ್‌ಪೋರ್ಟ್‌ ಕಸಿದುಕೊಂಡು ಬೆದರಿಕೆ ಹಾಕಿದ್ದ ಆರೋಪಿಗೆ ಜಾಮೀನು ನೀಡಲು ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಈಚೆಗೆ ನಿರಾಕರಿಸಿದೆ.

ಕೊಪ್ಪಳ ಜಿಲ್ಲೆಯ ಆರೋಪಿ ಬಸವರಾಜ ಕಳಸದ್‌ ಸಲ್ಲಿಸಿದ್ದ ಜಾಮೀನು ಮನವಿಯ ವಿಚಾರಣೆಯನ್ನು 71ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್‌ ಅವರು ವಜಾಗೊಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ದುಬೈನಲ್ಲಿ ಕೆಲಸ ಕೊಡಿಸಲು ದೂರುದಾರೆ ಅರ್ಚನಾ ಅವರಿಂದ ಆರೋಪಿ ಬಸವರಾಜ ಕಳಸದ್‌ ಅವರು 60 ಸಾವಿರ ರೂಪಾಯಿ ಪಡೆದುಕೊಂಡಿದ್ದರು. ಬಳಿಕ ದುಬೈನ ರಾಗಿಣಿ ಬಾರ್‌ನಲ್ಲಿ ಕೆಲಸ ಕೊಡಿಸಲಾಗಿತ್ತು. ರಾಗಿಣಿ ಬಾರ್‌ನ ಮೇಲ್ವಿಚಾರಕ ಮತ್ತು ವ್ಯವಸ್ಥಾಪಕರು ನೃತ್ಯ ಮಾಡುವಂತೆ ಅರ್ಚನಾ ಅವರಿಗೆ ಬಲವಂತ ಮಾಡಿದ್ದರು. ಅಲ್ಲದೇ, ಗ್ರಾಹಕರಿಗೆ ಸಹಕರಿಸುವಂತೆ ಒತ್ತಾಯ ಮಾಡಿದ್ದರು. ಕೆಲಸ ಬಿಡುವುದಾದರೆ ಬಾರ್‌ಗೆ 80 ಸಾವಿರ ರೂಪಾಯಿ ಪಾವತಿಸುವಂತೆ ನಿರ್ದೇಶಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ರಾಗಿಣಿ ಬಾರ್‌ನಲ್ಲಿ ಮೂರು ತಿಂಗಳು ಕೆಲಸ ಮಾಡಿ, 30 ಸಾವಿರ ರೂಪಾಯಿ ಪಾವತಿಸಿ ಅರ್ಚನಾ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಆಕೆ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಅಲ್ಲಿಗೆ ಬಂದಿದ್ದ ಆರೋಪಿಯು ಆಕೆಯ ಪಾಸ್‌ಪೋರ್ಟ್‌ ಕಸಿದುಕೊಂಡು, 50 ಸಾವಿರ ರೂಪಾಯಿ ಪಾವತಿಸಿದ ನಂತರ ಪಾಸ್‌ಪೋರ್ಟ್‌ ಪಡೆಯುವಂತೆ ಸೂಚಿಸಿದ್ದಲ್ಲದೇ ಆಕೆಗೆ ಬೆದರಿಕೆ ಹಾಕಿದ್ದರು. ಹೀಗಾಗಿ, ಅರ್ಚನಾ ಅವರು ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅದರಂತೆ, ಆರೋಪಿ ಕಳಸದ್‌ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 506, 370, 420 ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಮಾರ್ಚ್‌ 24ರಿಂದ ಆತ ನ್ಯಾಯಾಂಗ ಬಂಧನದಲ್ಲಿದ್ದಾರೆ.

Attachment
PDF
Basavaraj Kalsad Versus State of Karnataka
Preview
Kannada Bar & Bench
kannada.barandbench.com