Karnataka HC and BDA
Karnataka HC and BDA

ನಕಲಿ ನಿವೇಶನ ಹಂಚಿಕೆ ಪ್ರಕರಣ: ಬಿಡಿಎ ಎಂಜಿನಿಯರ್‌ಗಳ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದ ಆದೇಶ ವಜಾ ಮಾಡಿದ ಹೈಕೋರ್ಟ್

ಸಿಆರ್‌ಪಿಸಿ ಸೆಕ್ಷನ್ 197ರ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಆದೇಶ ಮಾಡಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಕರಣವನ್ನು ಹಿಂದಿರುಗಿಸಲು ಹೈಕೋರ್ಟ್‌ ಆದೇಶ ಮಾಡಿದೆ.

ನಕಲಿ ನಿವೇಶನಗಳ ಹಂಚಿಕೆಗೆ (fictitious allotment) ಸಂಬಂಧಿಸಿದ ಸೂಕ್ತ ಅಳತೆಯ ಕರಡು ವರದಿಯನ್ನು (ಸಿಡಿಆರ್‌) ಹಂಚಿಕೊಂಡಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎಂಜಿನಿಯರ್‌ಗಳ ವಿರುದ್ಧ ಪೊಲೀಸರು ಸಲ್ಲಿಸಿದ್ದ ಆರೋಪಪಟ್ಟಿಯನ್ನು ಪರಿಗಣಿಸಿ ವಿಚಾರಣಾಧೀನ ನ್ಯಾಯಾಲಯವು ಹೊರಡಿಸಿದ್ದ ವಿಚಾರಣಾ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ.

ಎಂಜಿನಿಯರ್‌ಗಳಾದ ಎ ಕೃಷ್ಣಮೂರ್ತಿ, ಕೆ ಎನ್‌ ರವಿಕುಮಾರ್‌, ಸಿ ಶ್ರೀನಿವಾಸ್‌, ಶಬ್ಬೀರ್‌ ಅಹ್ಮದ್‌, ಫಾರೂಖ್‌ ಅಜಮ್‌ ಎಂ ಎ ಅವರು ಸಲ್ಲಿಸಿದ್ದ ಕ್ರಿಮಿನಲ್‌ ಮನವಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಒಪ್ಪಿದ್ದು, ಸಿಆರ್‌ಪಿಸಿ ಸೆಕ್ಷನ್‌ 197ರ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಆದೇಶ ಮಾಡಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಕರಣವನ್ನು ಹಿಂದಿರುಗಿಸಿ ಆದೇಶ ಮಾಡಿದೆ.

ಎಂಜಿನಿಯರ್‌ಗಳ ಪರ ವಕೀಲರು “ತಮ್ಮನ್ನು ವಿಚಾರಣೆಗೆ ಒಳಪಡಿಸಲು ಸಕ್ಷಮ ಪ್ರಾಧಿಕಾರ ಅನುಮತಿಸಿಲ್ಲ. ಅಲ್ಲದೇ ತಮ್ಮ ವಿರುದ್ಧ ಪ್ರಕ್ರಿಯೆ ಮುಂದುವರಿಸಲು ಯಾವುದೇ ಸಾಕ್ಷಿಯಿಲ್ಲ. ಆರೋಪಪಟ್ಟಿಯಲ್ಲಿ ದಾಖಲಿಸಿರುವ 212 ಸಾಕ್ಷಿಗಳ ಹೇಳಿಕೆಯಲ್ಲಿ ತಮ್ಮ ಹೆಸರೇ ಇಲ್ಲ. ತಮ್ಮ ವಿರುದ್ಧ ವಿಚಾರಣೆ ನಡೆಸುವುದು ಕಾನೂನಿನ ದುರ್ಬಳಕೆ” ಎಂದು ವಾದಿಸಿದ್ದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ಆರೋಪಪಟ್ಟಿಯ ಸಂಕ್ಷಿಪ್ತ ಬರಹದಲ್ಲಿ ಆರೋಪಗಳನ್ನು ಉಲ್ಲೇಖಿಸಲಾಗಿದೆ. ವಿಚಾರಣೆಯಿಂದ ಮಾತ್ರ ಅರ್ಜಿದಾರರು ಆರೋಪಮುಕ್ತಗೊಳ್ಳಲು ಸಾಧ್ಯ” ಎಂದು ವಾದಿಸಿದ್ದರು.

ಘಟನೆಯ ಹಿನ್ನೆಲೆ: ಅರ್ಜಿದಾರರಾದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಮತ್ತು ಸಹಾಯಕ ಎಂಜಿನಿಯರ್‌ಗಳಿಗೆ ಸಿಡಿಆರ್‌ ಸಿದ್ಧಪಡಿಸುವ ಜವಾಬ್ದಾರಿ ನಿಡಲಾಗಿತ್ತು. ಈ ಸಂದರ್ಭದಲ್ಲಿ ಅವರ ವಿರುದ್ಧ ವಿಚಕ್ಷಣಾ ದಳದಲ್ಲಿ ದೂರು ದಾಖಲಿಸಲಾಗಿತ್ತು. ಬಿಡಿಎ ವ್ಯಾಪ್ತಿಗೆ ಬರುವ ನಿವೇಶನಗಳನ್ನು ಕಾಲ್ಪನಿಕ ಹಂಚಿಕೆ ಮಾಡುವುದಕ್ಕೆ ಸಂಬಂಧ ಎರಡನೇ ಆರೋಪಿಯಾದ ಇಂದ್ರ ಕುಮಾರ್‌ ಜೊತೆಗೂಡಿ ಆರೋಪಿಗಳು ಕೆಲವು ದಾಖಲೆಗಳನ್ನು ಸೃಷ್ಟಿ ಮಾಡಿದ್ದರು ಎಂದು ದೂರುದಾರರು ಆರೋಪಿಸಿದ್ದರು.

Also Read
[ಬಿಡಿಎ ಆಯುಕ್ತರ ನೇಮಕ] ಮೇಲ್ನೋಟಕ್ಕೆ ತಪ್ಪು ಕಂಡಾಗ ನಾವೇಕೆ ಸಮಯ ನೀಡಬೇಕು? ನಾವು ಕಣ್ಮುಚ್ಚಿ ಕೂರಲಾಗದು: ಹೈಕೋರ್ಟ್‌

ಇಂದ್ರ ಕುಮಾರ್‌ ಮನೆಯಲ್ಲಿ ಶೋಧ ನಡೆಸಿದ್ದ ಪೊಲೀಸರು ಎಂಜಿನಿಯರ್‌ಗಳು ಸಿದ್ಧಪಡಿಸಿದ್ದ ಕರಡು ಸಿಡಿಆರ್‌ಗಳನ್ನು ವಶಕ್ಕೆ ಪಡೆದಿದ್ದರು. ಈ ಸಂಬಂಧ ಪೊಲೀಸರು 2021ರ ಡಿಸೆಂಬರ್‌ 4ರಂದು ಆರೋಪಪಟ್ಟಿ ಸಲ್ಲಿಸಿದ್ದರು. ಎಂಜಿನಿಯರ್‌ಗಳನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿ ಪೊಲೀಸರು ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಅನುಮತಿ ದೊರೆಯುವುದಕ್ಕೂ ಮುನ್ನವೇ ವಿಚಾರಣಾ ನ್ಯಾಯಾಲಯವು ವಿಚಾರಣೆಗೆ ಅದೇಶಿಸಿತ್ತು. ಇದನ್ನು ಈಗ ಹೈಕೋರ್ಟ್‌ ವಜಾಗೊಳಿಸಿದೆ. ಆರೋಪಿಗಳ ವಿರುದ್ಧದ ವಿಚಾರಣೆಗೆ ಸಂಬಂಧಿಸಿದಂತೆ ಸೂಕ್ತ ಆದೇಶ ನೀಡಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಕರಣವನ್ನು ಮರಳಿಸಿದೆ.

Attachment
PDF
A Krishnamurthy others V. State of Karnataka.pdf
Preview

Related Stories

No stories found.
Kannada Bar & Bench
kannada.barandbench.com