ಅಪಘಾತದಿಂದ ವೈವಾಹಿಕ ಜೀವನ ನಷ್ಟ: ಯುವಕನಿಗೆ ₹38 ಲಕ್ಷ ಪರಿಹಾರ ವಿತರಿಸಲು ಹೈಕೋರ್ಟ್‌ ಆದೇಶ

ಮೇಲ್ಮನವಿದಾರ ಯುವಕನಿಗೆ 26 ವರ್ಷ ವಯಸ್ಸಾಗಿದ್ದು, ಕಾಲು ಬದಲಾವಣೆ ಮಾಡಿರುವುದರಿಂದ ಅವರು ಭವಿಷ್ಯದ ಸಂತೋಷ, ಭರವಸೆ ಕಳೆದುಕೊಂಡಿದ್ದು, ಜೀವನದಿಂದ ನಿರೀಕ್ಷೆಯೂ ಅವರಿಗೆ ಇಲ್ಲವಾಗಿದೆ ಎಂದು ವಿವರಿಸಿದ ನ್ಯಾಯಾಲಯ.
High Court of Karnataka, Dharwad Bench
High Court of Karnataka, Dharwad Bench

ರಸ್ತೆ ಅಪಘಾತದಲ್ಲಿ ಬಲಗಾಲು ತೆಗೆದಿರುವುದರಿಂದ (ಆಂಪ್ಯುಟೇಶನ್‌) ಬದುಕಿನ ಎಲ್ಲಾ ಭರವಸೆಗಳನ್ನೂ ಕಳೆದುಕೊಂಡಿರುವ ಮತ್ತು ವೈವಾಹಿಕ ಜೀವನ ನಡೆಸಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿರುವ 26 ವರ್ಷದ ಯುವಕನಿಗೆ ನ್ಯಾಯಾಧಿಕರಣ ಮಂಜೂರು ಮಾಡಿದ್ದ ₹ 22 ಲಕ್ಷ ಪರಿಹಾರವನ್ನು ಕರ್ನಾಟಕ ಹೈಕೊರ್ಟ್‌ನ ಧಾರವಾಡ ಪೀಠವು ಈಚೆಗೆ ₹38 ಲಕ್ಷಕ್ಕೆ ಹೆಚ್ಚಿಸಿದೆ.

ಪರಿಹಾರ ಹೆಚ್ಚಳ ಕೋರಿ ಶಿವಮೊಗ್ಗ ಜಿಲ್ಲೆಯ ಯುವಕ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ವಿಜಯ್‌ಕುಮಾರ್ ಎ.ಪಾಟೀಲ್ ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.

Vijaykumar Adagouda Patil
Vijaykumar Adagouda Patil

“ಮೇಲ್ಮನವಿದಾರ ಯುವಕನಿಗೆ 26 ವರ್ಷ ವಯಸ್ಸಾಗಿದ್ದು, ಕಾಲು ಬದಲಾವಣೆ ಮಾಡಿರುವುದರಿಂದ ಅವರು ಭವಿಷ್ಯದ ಸಂತೋಷ, ಭರವಸೆ ಕಳೆದುಕೊಂಡಿದ್ದು, ಜೀವನದಿಂದ ನಿರೀಕ್ಷೆಯೂ ಅವರಿಗೆ ಇಲ್ಲವಾಗಿದೆ. ಇದಲ್ಲದೇ, ವೈವಾಹಿಕ ಜೀವನವನ್ನೂ ಅನುಭವಿಸುವ ಸ್ಥಿತಿಯಲ್ಲಿ ಅವರಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಅಪಘಾತದಿಂದ ಆಗಿರುವ ದೈಹಿಕ ಮತ್ತು ಮಾನಸಿಕ ನಷ್ಟವನ್ನು ಹಣದ ರೂಪದಲ್ಲಿ ಲೆಕ್ಕ ಹಾಕಲಾಗದು. ದೈಹಿಕ ನಷ್ಟಕ್ಕೆ ಪರಿಹಾರ ಪರ್ಯಾಯವಾಗುವುದಿಲ್ಲ. ಮನುಷ್ಯನಿಗೆ ಆಗಿರುವ ನೋವನ್ನು ಹಣದ ಮೂಲಕ ಸಮೀಕರಣ ಮಾಡಲಾಗದು. ಆದರೂ, ನೊಂದವರಿಗೆ ನಷ್ಟ ಪರಿಹಾರ ನೀಡದೆ ಅನ್ಯ ಮಾರ್ಗವಿಲ್ಲ” ಎಂದು ಪೀಠ ತಿಳಿಸಿದೆ.

“ಮೇಲ್ಮನವಿದಾರ ಕೃಷಿಕರಾಗಿದ್ದು, ಅಪಘಾತದಲ್ಲಿ ಆತನ ಬಲಗಾಲು ತೆಗೆಯಲಾಗಿದೆ. ಇದರಿಂದ ಮತ್ತೆ ಕೃಷಿ ಚಟುವಟಿಕೆ ಕೈಗೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ದುಡಿಮೆಯೂ ಇಲ್ಲವಾಗಲಿದ್ದು, ಜೀವನ ನಡೆಸುವುದು ಕಷ್ಟಕರವಾಗಲಿದೆ” ಎಂದು ಪೀಠ ತಿಳಿಸಿದೆ.

ಭಾದಿತರಿಗೆ ಪರಿಹಾರ ನೀಡುವ ಈ ಸಂದರ್ಭಕ್ಕೆ ಹೋಲಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಹಣದ ಮೌಲ್ಯ ಕಡಿಮೆಯಾಗಲಿದೆ. ಗಾಯಾಳುವಿನ ಜೀವಿತಾವಧಿಯೂ ಕಡಿಮೆಯಾಗಲಿದೆ. ಹೀಗಾಗಿ, ಅಪಘಾತಕ್ಕೀಡಾದ ವ್ಯಕ್ತಿಯ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಆತನ ಶೇ.90ರಷ್ಟು ಅಂಗವೈಕಲ್ಯವನ್ನು ಪರಿಗಣನೆಗೆ ತೆಗೆದುಕೊಂಡು ಪರಿಹಾರ ಮೊತ್ತ ಹೆಚ್ಚಳ ಮಾಡಲಾಗಿದೆ” ಎಂದು ಪೀಠ ಸಮರ್ಥನೆ ನೀಡಿದೆ.

ಮೇಲ್ಮನವಿದಾರನ ಮಾಸಿಕ ಗಳಿಕೆ ₹ 13,250, ಶೇ.40ರಷ್ಟು ಭವಿಷ್ಯದ ನಿರೀಕ್ಷೆಗಳು ಮತ್ತು ಶೇ.90ರಷ್ಟು ಅಂಗವೈಕಲ್ಯವನ್ನು ಪರಿಗಣನೆಗೆ ತೆಗೆದುಕೊಂಡರೆ ₹ 34,05,780 ಆಗಲಿದೆ. ಘಟನೆಯಿಂದ ಅನುಭವಿಸಿರುವ ನೋವಿಗೆ ಪರಿಹಾರವಾಗಿ ನೀಡಿದ್ದ ₹ 50 ಸಾವಿರವನ್ನು ₹ 1 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ ನ್ಯಾಯಾಲಯ ಆದೇಶಿಸಿದೆ. ವೈದ್ಯಕೀಯ ವೆಚ್ಚದ ಭಾಗವಾಗಿ ₹ 94 ಸಾವಿರ, ಘಟನೆ ನಡೆದ ಸಂದರ್ಭದಲ್ಲಿ ಆಗಿರುವ ನಷ್ಟದ ಭಾಗವಾಗಿ ₹ 79,500, ನೋವು ಅನುಭವಿಸುವುದಕ್ಕಾಗಿ ₹ 1 ಲಕ್ಷ ಮತ್ತು ಮದುವೆ ಆಗಲು ಸಾಧ್ಯವಾಗದ ಪರಿಹಾರದ ಭಾಗವಾಗಿ ₹ 50 ಸಾವಿರ ಸೇರಿ ಒಟ್ಟು ₹ 38,29,280 ಪರಿಹಾರ ಪಾವತಿ ಮಾಡಬೇಕು ಎಂದು ಪೀಠ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2019ರ ಸೆಪ್ಟೆಂಬರ್ 25ರಂದು ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದ ಮೇಲ್ಮನವಿದಾರರಿಗೆ ಎದುರು ದಿಕ್ಕಿನಿಂದ ಬಂದ ನಿಸಾನ್‌ ಕಾರಿನ ಚಾಲಕ ಅಜಾಗರೂಕ ಚಾಲನೆಯಿಂದ ಡಿಕ್ಕಿ ಹೊಡೆದಿದ್ದ. ಇದರಿಂದ ಮೇಲ್ಮನವಿದಾರರ ಬಲಗಾಲಿಗೆ ಪೆಟ್ಟುಬಿದ್ದಿತ್ತು. ಪರಿಣಾಮ ಕಾಲನ್ನು ಮೊಣಕಾಲಿನಿಂದ ಮೇಲ್ಭಾಗಕ್ಕೆ ತೆಗೆದು ಹಾಕಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ₹22,15,600 ಪರಿಹಾರ ನೀಡಲು ಕಾರಿನ ವಿಮಾ ಕಂಪೆನಿ ಐಸಿಐಸಿಐ ಲಾಂಬಾರ್ಡ್‌ ಜನರಲ್ ಇನ್ಯೂರೆನ್ಸ್ ಕಂಪೆನಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಬಾಧಿತ ಯುವಕ ಹೆಚ್ಚಿನ ಪರಿಹಾರ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com