ಹಿರಿಯ ವಕೀಲ ದುಶ್ಯಂತ್ ದವೆ ಮತ್ತು ಸಿಜೆಐ ಚಂದ್ರಚೂಡ್
ಹಿರಿಯ ವಕೀಲ ದುಶ್ಯಂತ್ ದವೆ ಮತ್ತು ಸಿಜೆಐ ಚಂದ್ರಚೂಡ್

ಸೂಕ್ಷ್ಮ ಪ್ರಕರಣಗಳಲ್ಲಿ ಪೀಠ ಬದಲಾವಣೆಗೆ ಹಿರಿಯ ವಕೀಲ ದುಶ್ಯಂತ್ ದವೆ ಆಕ್ಷೇಪ: ಸಿಜೆಐಗೆ ಪತ್ರ

ಸುಪ್ರೀಂ ಕೋರ್ಟ್ ನಿಯಮಾವಳಿ ಮತ್ತು ನ್ಯಾಯಾಲಯ ನಡಾವಳಿ ಮತ್ತು ಕಾರ್ಯವಿಧಾನದ ಕೈಪಿಡಿಯನ್ನು ಉಲ್ಲಂಘಿಸಿ ಕೆಲ ಪೀಠಗಳು ವಿಚಾರಣೆ ನಡೆಸುತ್ತಿದ್ದ ಪ್ರಕರಣಗಳನ್ನು ಬೇರೆ ಪೀಠಗಳಿಗೆ ವರ್ಗಾಯಿಸಲಾಗಿದೆ ಎಂದು ದವೆ ದೂರಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಯುತ್ತಿರುವ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹಿರಿಯ ವಕೀಲ ಮತ್ತು ಸುಪ್ರೀಂ ಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷ ದುಶ್ಯಂತ್ ದವೆ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.

ಸುಪ್ರೀಂ ಕೋರ್ಟ್ ನಿಯಮಾವಳಿ ಮತ್ತು ನ್ಯಾಯಾಲಯ ನಡಾವಳಿ ಮತ್ತು ಕಾರ್ಯವಿಧಾನ ಕೈಪಿಡಿಯನ್ನು ಉಲ್ಲಂಘಿಸಿ ಕೆಲ ಪೀಠಗಳು ವಿಚಾರಣೆ ನಡೆಸುತ್ತಿದ್ದ ಪ್ರಕರಣಗಳನ್ನು ಬೇರೆ ಪೀಠಗಳಿಗೆ ವರ್ಗಾಯಿಸಲಾಗಿದೆ ಎಂದು ಪತ್ರದಲ್ಲಿ ದವೆ ದೂರಿದ್ದಾರೆ.

ಪತ್ರದ ಪ್ರಮುಖಾಂಶಗಳು

ಒಂದು ಪೀಠ ವಿಚಾರಣೆಗೆ ಲಭ್ಯವಿದ್ದರೂ ಮತ್ತೊಂದು ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುತ್ತಿದೆ. ನ್ಯಾಯಾಲಯ ಸಂಖ್ಯೆ 2, 4, 6, 7 ರ ಮುಂದೆ ಪಟ್ಟಿ ಮಾಡಲಾದ ಪ್ರಕರಣಗಳನ್ನು ನಿಯಮಾವಳಿ ಕಡೆಗಣಿಸಿ ಬೇರೆ ಪೀಠಗಳಿಗೆ ವರ್ಗಾಯಿಸಲಾಗಿದೆ.

ಮಾನವ ಹಕ್ಕುಗಳು, ಸಾಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆ, ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಇತ್ಯಾದಿ ವಿಚಾರಗಳನ್ನು ವರ್ಗಾಯಿಸಲಾದ ಪ್ರಕರಣಗಳು ಒಳಗೊಂಡಿವೆ.

ಕುತೂಹಲದ ಸಂಗತಿ ಎಂದರೆ ಹೀಗೆ ಮಾಡುವಾಗ ಮೊದಲ ಪೀಠದ ಹಿರಿತನವನ್ನು ಕೂಡ ನಿರ್ಲಕ್ಷಿಸಲಾಗುತ್ತಿದೆ.

ಹೀಗೆ ಪ್ರಕರಣಗಳು ವರ್ಗವಾಗುತ್ತಿರುವ ಬಗ್ಗೆ ವಕೀಲ ಸಮುದಾಯ, ಹಿರಿಯ ನ್ಯಾಯವಾದಿಗಳು ಹಾಗೂ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ನನ್ನ ಗಮನಕ್ಕೆ ತಂದಿದ್ದಾರೆ.

ಒಂದು ಪೀಠದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸುವುದು ಸೂಕ್ತವಲ್ಲ ಎಂದು ನನ್ನ ಅನಿಸಿಕೆ.

ನಿಯಮಾವಳಿಗಳ ಪ್ರಕಾರ ಸಿಜೆಐ ಅವರು ಮಾತ್ರವೇ ಪ್ರಕರಣಗಳನ್ನು ವರ್ಗಾಯಿಸುವ ಅಧಿಕಾರ ಚಲಾಯಿಸಬಹುದು.

ಪೀಠದ ಸದಸ್ಯರು ಲಭ್ಯವಿದ್ದರೆ ಮತ್ತೊಂದು ಪೀಠಕ್ಕೆ ವರ್ಗಾಯಿಸುವ ಅಧಿಕಾರ ಚಲಾಯಿಸುವಂತಿಲ್ಲ.

ಮಾಸ್ಟರ್ ಆಫ್ ರೋಸ್ಟರ್ ಆಗಿರುವ ಸಿಜೆಐ ಅವರು ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ ಟಿಪ್ಪಣಿ 3 ರ ಅಡಿ ಅಧಿಕಾರ ಚಲಾಯಿಸಿಲ್ಲ. ಹೀಗೆ ಪ್ರಕರಣಗಳನ್ನು ವರ್ಗಾಯಿಸುವ ಅಭ್ಯಾಸ ಸಂಸ್ಥೆಗೆ ಒಳ್ಳೆಯದಲ್ಲ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ನ್ಯಾಯಮೂರ್ತಿ ಅನಿರುದ್ಧ ಬೋಸ್ ನೇತೃತ್ವದ ನ್ಯಾಯಪೀಠವು ಈ ಹಿಂದೆ ವಿಚಾರಣೆ ನಡೆಸಿದ ಪ್ರಕರಣಗಳನ್ನು ನ್ಯಾಯಮೂರ್ತಿ ಬೋಸ್ ಅವರಿಗಿಂತ ಕಿರಿಯರಾದ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ನೇತೃತ್ವದ ನ್ಯಾಯಪೀಠಕ್ಕೆ ತಪ್ಪಾಗಿ ವರ್ಗಾಯಿಸಲಾಗುತ್ತಿದೆ ಎಂದು ಹಿರಿಯ ವಕೀಲರು ಮುಕ್ತ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಕೆಲ ದಿನಗಳಲ್ಲಿ ಈ ಪತ್ರ ಬರೆಯಲಾಗಿದೆ.

ಇದಲ್ಲದೆ, ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಮೂರ್ತಿಗಳ ನೇಮಕಾತಿಯನ್ನು ಸೂಚಿಸುವಲ್ಲಿ ಕೇಂದ್ರ ಸರ್ಕಾರ ವಿಳಂಬಕ್ಕೆ ಸಂಬಂಧಿಸಿದ ಪ್ರಕರಣವನ್ನು ಅದನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠದಿಂದ ತೆಗೆದುಹಾಕಲಾಗಿದೆ. ನ್ಯಾ. ಕೌಲ್‌ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ನ್ಯಾ. ಕೌಲ್‌ ಅವರು ಈ ಬಗ್ಗೆ ಮಂಗಳವಾರ ನ್ಯಾಯಾಲಯದಲ್ಲಿ ಪ್ರತಿಕ್ರಿಯಿಸಿ ಪ್ರಕರಣವನ್ನು ತಮ್ಮ ಪೀಠದಿಂದ ತೆಗೆದುಹಾಕಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದರು. ಮುಂದುವರೆದು ಈ ಬಗ್ಗೆ ಸಿಜೆಐ ಅವರಿಗೆ ಮಾಹಿತಿ ಇರಬಹುದು. ಕೆಲವು ಸಂಗತಿಗಳ ಬಗ್ಗೆ ಹೆಚ್ಚು ಹೇಳದೇ ಇರುವುದು ಉತ್ತಮ ಎಂದು ಹೇಳುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು.

[ಪತ್ರವನ್ನು ಇಲ್ಲಿ ಓದಿ]

Attachment
PDF
Letter to CJI Dec 6 2023 by D Dave.pdf
Preview

Related Stories

No stories found.
Kannada Bar & Bench
kannada.barandbench.com