ಕರ್ನಾಟಕ ಹೈಕೋರ್ಟ್‌ಗೆ ಅಕ್ಟೋಬರ್‌ 16ರಿಂದ 21ರವರೆಗೆ ದಸರಾ ರಜೆ; ತುರ್ತು ವಿಚಾರಣೆಗೆ ರಜಾಕಾಲೀನ ಪೀಠಗಳ ರಚನೆ

ತುರ್ತಾಗಿ ಆಗಬೇಕಾದ ಮಧ್ಯಂತರ ತಡೆಯಾಜ್ಞೆ, ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶದಂಥ ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Karnataka High Court
Karnataka High Court
Published on

ದಸರಾ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಅಕ್ಟೋಬರ್‌ 16ರಿಂದ 21ರವರೆಗೆ ರಜೆ ಇರಲಿದೆ. ಈ ವೇಳೆ, ರಜಾಕಾಲೀನ ಪೀಠಗಳು ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಕರ್ತವ್ಯ ನಿರ್ವಹಸಲಿವೆ.

ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್‌ ಪ್ರಸಾದ್‌ ಮತ್ತು ಟಿ ವೆಂಕಟೇಶ್‌ ನಾಯ್ಕ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಲಿದ್ದು, ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇ ಗೌಡ ಅವರ ನೇತೃತ್ವದ ಏಕಸದಸ್ಯ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ.

ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೆ ಎಸ್‌ ಹೇಮಲೇಖಾ ಮತ್ತು ಅನಿಲ್‌ ಬಿ. ಕಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳನ್ನು ವಿಚಾರಣೆ ನಡೆಸಲಿದೆ. ಆನಂತರ ಉಭಯ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ಏಕಸದಸ್ಯ ಪೀಠದಲ್ಲಿ ಕುಳಿತು ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.

ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಚ್‌ ಟಿ ನರೇಂದ್ರ ಪ್ರಸಾದ್‌ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದ್ದು, ಆನಂತರ ಏಕಸದಸ್ಯ ಪೀಠಗಳು ಪ್ರತ್ಯೇಕವಾಗಿ ಪ್ರಕರಣಗಳ ವಿಚಾರಣೆ ನಡೆಸಲಿದೆ.

ತುರ್ತಾಗಿ ಆಗಬೇಕಾದ ಮಧ್ಯಂತರ ತಡೆಯಾಜ್ಞೆ, ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶದಂಥ ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ರಜಾಕಾಲೀನ ಪೀಠದ ವಿಚಾರಣೆಯ ದಿನ ಹೊರತುಪಡಿಸಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಸಲ್ಲಿಸಬಹುದಾಗಿದೆ. ರಜಾಕಾಲೀನ ಪೀಠದ ವಿಚಾರಣೆಯ ದಿನದಂದು ಅರ್ಜಿ ಸಲ್ಲಿಕೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 3.30 ರವರೆಗೆ ಅವಕಾಶ ಇರಲಿದೆ. ಇದರೊಂದಿಗೆ ಇ-ಫೈಲಿಂಗ್‌ ಪೋರ್ಟಲ್‌ ಮೂಲಕ ಇ-ಫೈಲಿಂಗ್‌ ಮಾಡಬಹುದಾಗಿದೆ ಎಂದು ನ್ಯಾಯಿಕ ರಿಜಿಸ್ಟ್ರಾರ್‌ ಎಂ ಚಂದ್ರಶೇಖರ್‌ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Attachment
PDF
Dasara VacationNotn.pdf
Preview
Kannada Bar & Bench
kannada.barandbench.com