

ಮರಣ ಪೂರ್ವ ಹೇಳಿಕೆಯು ಮೃತರು ನೀಡುವ ನಿಖರವಾದ ಪದಗಳೊಂದಿಗೆ ಪ್ರಶ್ನೋತ್ತರ ರೂಪದಲ್ಲಿದ್ದು, ಸಂಕ್ಷಿಪ್ತವಾಗಿರಬೇಕು. ಅಂತಹ ಹೇಳಿಕೆ ಸಂಪೂರ್ಣ ವಿಶ್ವಾಸಾರ್ಹ ಮತ್ತು ಸತ್ಯವಾದದ್ದು ಎಂದು ಸಾಬೀತುಪಡಿಸುವಂತಿರಬೇಕು ಎಂದಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ಮಹಿಳೆಯೊಬ್ಬರನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಿದೆ.
ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ನಂತರ ಆಕೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸೋಮಶೇಖರ್ ಅಲಿಯಾಸ್ ಸೋಮ ಅಲಿಯಾಸ್ ಅಪ್ಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಚ್ ಪಿ ಸಂದೇಶ್ ಮತ್ತು ಟಿ ವೆಂಕಟೇಶ್ ನಾಯಕ್ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.
ಮರಣ ಪೂರ್ವ ಹೇಳಿಕೆ ಪ್ರಶ್ನೋತ್ತರ ರೂಪದಲ್ಲಿರಬೇಕು, ಸಂತ್ರಸ್ತರು ಹೇಳಿರುವ ಪದಗಳು ನಿಖರವಾಗಿರಬೇಕು. ಈ ಹೇಳಿಕೆ ಚಿಕ್ಕದಾಗಿ ಸಂಕ್ಷಿಪ್ತವಾಗಿ, ವಿಷಯ ನಿರ್ದಿಷ್ಟವಾಗಿರಬೇಕು. ಆದರೆ, ಹಾಲಿ ಪ್ರಕರಣದಲ್ಲಿ ಮರಣಪೂರ್ವ ಹೇಳಿಕೆ ಎರಡು ಪುಟಗಳಿದ್ದು, ಸಂಪೂರ್ಣವಾಗಿ ವಿಶ್ವಾಸಾರ್ಹವಾಗಿಲ್ಲ. ಆದ್ದರಿಂದ, ಆರೋಪಿಯನ್ನು ಖುಲಾಸೆಗೊಳಿಸುತ್ತಿರುವುದಾಗಿ ಪೀಠ ತಿಳಿಸಿದೆ.
ಮೃತರ ಮುಖ, ತುಟಿ ಸೇರಿ ದೇಹದ ವಿವಿಧ ಭಾಗಗಳಲ್ಲಿ ವ್ಯಾಪಕ ಸುಟ್ಟ ಗಾಯಗಳಾಗಿರುವ ಸ್ಥಿತಿಯಲ್ಲಿ ಅವರ ಮರಣ ಪೂರ್ವ ಹೇಕೆ ದಾಖಲಿಸಲಾಗಿದೆ. ಈ ಹೇಳಿಕೆ ನೀಡಲು ಮೃತರ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯದ ಬಗ್ಗೆ ಸಂದೇಹ ಉಂಟಾಗುತ್ತದೆ. ಮರಣ ಪೂರ್ವ ಹೇಳಿಕೆಯನ್ನು ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ವೈದ್ಯರು ಮತ್ತು ತನಿಖಾಧಿಕಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದಾಖಲಿಸಿಕೊಂಡಿದ್ದು, ಹೇಳಿಕೆ ದಾಖಲಿಸಿರುವ ವಿಧಾನವು ಅನುಮಾನಾಸ್ಪದವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಮರಣ ಪೂರ್ವ ಹೇಳಿಕೆಯನ್ನು ಅಧಾರವಾಗಿಸಿಕೊಂಡು ಆರೋಪಿಗೆ ಶಿಕ್ಷೆ ವಿಧಿಸುವುದಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮರಣ ಪೂರ್ವ ಹೇಳಿಕೆ ದಾಖಲಿಸಿಕೊಳ್ಳವ ಸಂದರ್ಭದಲ್ಲಿ ನಿಯಮಬದ್ಧವಾಗಿ ಸಂಗ್ರಹಿಸಿಲ್ಲ. ಹೀಗಾಗಿ, ಈ ಸಾಕ್ಷ್ಯವನ್ನು ತಿರಸ್ಕರಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.
ಘಟನೆ ಕುರಿತು ಮೃತರ ನೆರೆ ಹೊರೆಯವರು ಸಾಕ್ಷ್ಯ ನುಡಿದಿದ್ದು, ಮೃತಳಿಗೆ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸುಟ್ಟ ಗಾಯಗಳ ಪರಿಣಾಮ ಸಾವು ಸಂಭವಿಸಿದೆ ಎಂದು ಹೇಳಿದ್ದಾರೆ. ಆದರೆ, ಮೃತಳ ಸಾವಿಗೆ ಅರ್ಜಿದಾರ ಆರೋಪಿ ಕಾರಣ ಎಂದು ಹೇಳಿಲ್ಲ. ಹೀಗಾಗಿ, ಅವರು ಘಟನೆ ಬಳಿಕ ಸ್ಥಳಕ್ಕೆ ಬಂದಿದ್ದು, ಪ್ರತ್ಯಕ್ಷದರ್ಶಿಗಳಲ್ಲ. ಬದಲಿಗೆ ಆಕಸ್ಮಿಕ ಸಾಕ್ಷಿಗಳಾಗಿದ್ದಾರೆ. ಜೊತೆಗೆ, ಮೃತರ ತಾಯಿ ಮತ್ತು ಸಹೋದರಿ ಹೇಳಿಕೆ ನೀಡಿದ್ದು, ಅವರಿಗೆ ನಡೆಸಿದ ಪಾಟಿ ಸವಾಲು ಪ್ರಕ್ರಿಯೆಯಲ್ಲಿ ಹಲವಾರು ಲೋಪಗಳಿದ್ದು, ಅವರ ಹೇಳಿಕೆಗಳು ವಿಶ್ವಾಸಾರ್ಹವಾಗಿಲ್ಲ ಎಂದು ಪೀಠ ಹೇಳಿದೆ.
ಬಹುತೇಕ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸಂತ್ರಸ್ತೆ ಹೇಳಿಕೆ ನೀಡಲು ಮಾನಸಿಕ ಮತ್ತು ದೈಹಿಕ ದೃಢತೆಯ ಬಗ್ಗೆ ಸಂಶಯವಿದೆ. ಸಾಂದರ್ಭಿಕ ಸಾಕ್ಷಿಗಳ ಮೂಲಕ ಆರೋಪ ಸಾಬೀತುಪಡಿಸದ ಹೊರತು ಹೇಳಿಕೆಗಳ ಆಧಾರದಲ್ಲಿ ಶಿಕ್ಷೆ ವಿಧಿಸಲಾಗದು ಎಂದು ನ್ಯಾಯಾಲಯ ಹೇಳಿದೆ.