ಅಬಕಾರಿ ಸನ್ನದುಗಳ ಇ-ಹರಾಜು: ಅಬಕಾರಿ ಎರಡನೇ ತಿದ್ದುಪಡಿ ನಿಯಮಕ್ಕೆ ಹೈಕೋರ್ಟ್‌ ತಡೆ

ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 5 ಮತ್ತು 5ಎ ಕರಡನ್ನು ಸರ್ಕಾರ ಪ್ರಕಟಿಸಿತ್ತು. ಆನಂತರ ಅದನ್ನು ಅಂತಿಮಗೊಳಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಅದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
Justice K S Hemalekha
Justice K S Hemalekha
Published on

ರಾಜ್ಯದಲ್ಲಿ ಅಬಕಾರಿ ಸನ್ನದುಗಳನ್ನು ಇ-ಹರಾಜು ಮಾಡುವ ಉದ್ದೇಶದಿಂದ ಸರ್ಕಾರ 2025 ನವೆಂಬರ್‌ 3ರಂದು ಹೊರಡಿಸಿದ್ದ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 2025ಗೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಇದರಿಂದ ತಿಂಗಳಾಂತ್ಯದಲ್ಲಿ ಸರ್ಕಾರ ಮಾಡಲು ಉದ್ದೇಶಿಸಿದ್ದ ಬಾಕಿ ಅಬಕಾರಿ ಪರವಾನಗಿಗಳ ಇ-ಹರಾಜಿಗೆ ತಡೆ ಬಿದ್ದಿದೆ.

ಕರ್ನಾಟಕ ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ  ಎಸ್‌ ಗುರುಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಬಿ ಗೋವಿಂದರಾಜ್‌ ಹೆಗ್ಡೆ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮುಂದಿನ ಆದೇಶವರೆಗೆ 2005ರ ನಿಯಮ 5 ಮತ್ತು ನಿಯಮ 5ಎ ಜಾರಿಗೆ ತಡೆ ನೀಡಿ ವಿಚಾರಣೆಯನ್ನು ಡಿಸೆಂಬರ್‌ 12ಕ್ಕೆ ಮುಂದೂಡಿದೆ. ರಾಜ್ಯ ಸರ್ಕಾರವು ಮಧ್ಯಂತರ ಆದೇಶದ ಮಾರ್ಪಾಡು ಅಥವಾ ತೆರವಿಗೆ ಅರ್ಜಿ ಸಲ್ಲಿಸಲು ಸ್ವತಂತ್ರವಿದೆ ಎಂದು ಹೇಳಿರುವ ಪೀಠವು ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಆದೇಶಿಸಿದೆ.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯವು “ಮೇಲ್ನೋಟಕ್ಕೆ  ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 5 ಮತ್ತು 5ಎ ಅಡಿಯಲ್ಲಿ ಪ್ರಸ್ತಾಪಿಸಿರುವ ಹೊಸ ಷರತ್ತುಗಳು, ಮೀಸಲು ಮತ್ತು ಅರ್ಹತಾ ಮಾನದಂಡ ಮತ್ತಿತರ ಅಂಶಗಳು ಮೂಲ ಕರ್ನಾಟಕ ಅಬಕಾರಿ ಕಾಯಿದೆ 1965ರ ನಿಬಂಧನೆಗಳ ವ್ಯಾಪ್ತಿಯ ಹೊರಗಿದ್ದಂತಿವೆ. ಹೀಗಾಗಿ, ಈ ಬಗ್ಗೆ ವಿಸ್ತೃತವಾದ ವಿಚಾರಣೆ ಅಗತ್ಯ ಮತ್ತು ಪರಿಶೀಲನೆ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಅವರು “ಸರ್ಕಾರ ಹಿಂದೆ ನವೀಕರಣವಾಗದ ಮತ್ತು ರದ್ದುಗೊಳಿಸಲಾದ ಅಬಕಾರಿ ಸನ್ನದುಗಳನ್ನು ಇ-ಹರಾಜು ಮಾಡಲು ಮುಂದಾಗಿದೆ. ಅದಕ್ಕಾಗಿ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 5 ಮತ್ತು 5ಎ ಪರಿಚಯಿಸಲಾಗಿದ್ದು, ಅದು ಮೂಲ ಅಬಕಾರಿ ಕಾಯಿದೆ ವ್ಯಾಪ್ತಿಯನ್ನು ಉಲ್ಲಂಘಿಸುತ್ತದೆ” ಎಂದರು.

ಅಲ್ಲದೇ, “ನಿಯಮ 5ರಲ್ಲಿ ಮೂಲ ಕಾಯಿದೆಗೆ ವಿರುದ್ಧವಾಗಿ ಪರವಾನಗಿ ಹಂಚಿಕೆಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಅವು ಹಿಂದಿನ ಆದೇಶಗಳಿಗೆ ವಿರುದ್ಧ” ಎಂದರು.

ಸರ್ಕಾರ ಹೆಚ್ಚುವರಿ ಅಬಕಾರಿ ಆದಾಯವನ್ನು ಸಂಗ್ರಹಿಸುವ ಸಲುವಾಗಿ 2025-26ನೇ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಪರವಾನಗಿಗಳಿಗೆ ಇ-ಹರಾಜು ಪರಿಚಯಿಸುವುದಾಗಿ ಘೋಷಿಸಿತ್ತು. ಅದರಂತೆ ಇಲಾಖೆ ಹಿಂದೆ ನವೀಕರಣವಾಗದ ಸುಮಾರು 500 ಅಬಕಾರಿ ಸನ್ನದುಗಳನ್ನು ಪಟ್ಟಿ ಮಾಡಿ ಅವುಗಳನ್ನು ಹರಾಜು ಮಾಡಲು ಸಿದ್ಧತೆ ನಡೆಸಿದೆ. ಅದಕ್ಕೆ ಅನುಕೂಲವಾಗುವಂತೆ ಸರ್ಕಾರ ಕಳೆದ ನವೆಂಬರ್‌ನಲ್ಲಿ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 5 ಮತ್ತು 5ಎ ಕರಡು ಪ್ರಕಟಿಸಿತ್ತು. ಆನಂತರ ಅದನ್ನು ಅಂತಿಮಗೊಳಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಅದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ‘ಒಮ್ಮೆ ಲ್ಯಾಫ್ಸ್‌ ಆದ ಅಥವಾ ನವೀಕರಣವಾಗದೇ ಇದ್ದ ಲೈಸನ್ಸ್‌ಗಳು ಸಹಜವಾಗಿಯೇ ರದ್ದಾಗುತ್ತವೆ. ಆದರೆ ಸರ್ಕಾರ ಇಲ್ಲದ ಸನ್ನದುಗಳನ್ನು ಹರಾಜು ಮಾಡಲು ಹೊರಟಿದೆ. ತಿದ್ದುಪಡಿ ನಿಯಮಗಳು ಕಾನೂನು ಬಾಹಿರವಾಗಿವೆ ಎಂದು ಸಂಘ ಆಕ್ಷೇಪಿಸಿದೆ.

Kannada Bar & Bench
kannada.barandbench.com