ಇ-ಕೋರ್ಟ್‌ ಯೋಜನೆ ಮೂರನೇ ಹಂತದ ಸಿದ್ಧತೆ; ಸ್ವಂತ ಸರ್ವರ್‌ನಿಂದ ಸ್ಟ್ರೀಮಿಂಗ್‌, ರೆಕಾರ್ಡಿಂಗ್‌: ನ್ಯಾ. ಚಂದ್ರಚೂಡ್‌

ಸುಪ್ರೀಂ ಕೋರ್ಟ್ ವರ್ಚುವಲ್‌ ವಿಚಾರಣೆ ಹಾಗೂ ಲೈವ್‌ ಸ್ಟ್ರೀಮಿಂಗ್‌ ರೆಕಾರ್ಡಿಂಗ್‌ಗಳನ್ನು ಬೇರೆಯ ಸರ್ವರ್‌ಗಳ ಮೂಲಕವಲ್ಲದೆ ಸುಪ್ರೀಂ ಕೋರ್ಟ್‌ನ ಸ್ವಂತ ಸರ್ವರ್‌ ಮೂಲಕ ಕೈಗೊಳ್ಳುವ ಉದ್ದೇಶ ಹೊಂದಿರುವ ಬಗ್ಗೆ ಮಾಹಿತಿ.
E committee chairperson Justice DY Chandrachud and Supreme Court

E committee chairperson Justice DY Chandrachud and Supreme Court

ಸುಪ್ರೀಂ ಕೋರ್ಟ್‌ನ ಇ-ಸಮಿತಿಯು ಇ-ನ್ಯಾಯಾಲಯಗಳ ಮೂರನೇ ಹಂತದ ಯೋಜನೆಯನ್ನು ರೂಪಿಸುವುದರಲ್ಲಿ ಪ್ರಸ್ತುತ ಕಾರ್ಯನಿರತವಾಗಿದೆ ಎಂದು ಇ-ಸಮಿತಿಯ ಅಧ್ಯಕ್ಷರೂ ಆದ ಸುಪ್ರೀಂ ಕೋರ್ಟ್‌ ನ್ಯಾ. ಚಂದ್ರಚೂಡ್‌ ಅವರು ಶುಕ್ರವಾರ ತಿಳಿಸಿದ್ದಾರೆ. ಈ ಸಂಬಂಧ ಶೀಘ್ರದಲ್ಲಿಯೇ ಮುನ್ನೋಟದ ವರದಿಯೊಂದನ್ನು ಹೊರತರಲಿರುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ಕೆಲಸದ ವೇಳೆಯನ್ನು ಮಧ್ಯಾಹ್ನ 12ರಿಂದ 3ರವರೆಗೆ ಮಿತಿಗೊಳಿಸಿ ಬಾಂಬೆ ಹೈಕೋರ್ಟ್‌ ಹೊರಡಿಸಿದ್ದ ಅಡಳಿತಾತ್ಮಕ ಸುತ್ತೋಲೆಯನ್ನು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾ. ಚಂದ್ರಚೂಡ್‌ ಈ ಮಾಹಿತಿ ನೀಡಿದರು. ನ್ಯಾಯಾಲಯದ ಕಲಾಪವನ್ನು ಲೈವ್ ಸ್ಟ್ರೀಮಿಂಗ್ ಮಾಡುವ ಸಂಬಂಧ ಮೂಲಸೌಕರ್ಯವನ್ನು ರೂಪಿಸುವ ಕುರಿತು ಪ್ರಸ್ತಾಪಿಸುತ್ತಿರುವ ಬಗ್ಗೆ ಅವರು ತಿಳಿಸಿದರು.

ಇದೇ ವೇಳೆ ಅವರು, ಸುಪ್ರೀಂ ಕೋರ್ಟ್ ವರ್ಚುವಲ್‌ ವಿಚಾರಣೆ ಹಾಗೂ ಲೈವ್‌ ಸ್ಟ್ರೀಮಿಂಗ್‌ ರೆಕಾರ್ಡಿಂಗ್‌ಗಳನ್ನು ಬೇರೆಯ ಸರ್ವರ್‌ಗಳ ಮೂಲಕವಲ್ಲದೆ (ಥರ್ಡ್‌ಪಾರ್ಟಿ ಸರ್ವರ್‌) ಸುಪ್ರೀಂ ಕೋರ್ಟ್‌ನ ಸ್ವಂತ ಸರ್ವರ್‌ ಮೂಲಕ ಕೈಗೊಳ್ಳುವ ಉದ್ದೇಶ ಹೊಂದಿರುವುದಾಗಿ ಹೇಳಿದರು. "ಶೀಘ್ರದಲ್ಲಿಯೇ ನಾವು ಇ-ಕೋರ್ಟ್‌ ಯೋಜನೆಯ ಮೂರನೇ ಹಂತದ ಕುರಿತಾದ ಮುನ್ನೋಟ ವರದಿಯೊಂದನ್ನು ತರಲಿದ್ದೇವೆ. ಪ್ರಸ್ತುತ ನಾವು ಇದಕ್ಕೆ ಸಂಬಂಧಿಸಿದಂತೆ ಆಯವ್ಯಯ ನಿಗದಿಯ ಹಂತದಲ್ಲಿದ್ದೇವೆ. ಲೈವ್ ಸ್ಟ್ರೀಮಿಂಗ್‌ಗೆ ಅಗತ್ಯವಾದ ಕ್ಲೌಡ್‌ ಮೂಲಸೌಕರ್ಯವನ್ನು ಇದಕ್ಕಾಗಿ ನಾವು ಕಲ್ಪಿಸಬೇಕಿದೆ. ನಾವೇ (ಸುಪ್ರೀಂ ಕೋರ್ಟ್‌) ಹೋಸ್ಟ್‌ (ಪ್ರಸರಣ) ಮಾಡಲಿದ್ದೇವೆ. ಬೇರೆ ಸರ್ವರ್‌ಗಳ (ಥರ್ಡ್‌ಪಾರ್ಟಿ ಸರ್ವರ್‌) ಬದಲಿಗೆ ವರ್ಚುವಲ್‌ ಕಲಾಪಗಳ ರೆಕಾರ್ಡಿಂಗ್‌ಗಳನ್ನು ನಮ್ಮದೇ ಸರ್ವರ್‌ನಲ್ಲಿ ಹೋಸ್ಟ್‌ ಮಾಡುವ ಉದ್ದೇಶ ಹೊಂದಿದ್ದೇವೆ" ಎಂದು ಅವರು ವಿವರಿಸಿದರು.

Kannada Bar & Bench
kannada.barandbench.com