ಇ-ಫೈಲಿಂಗ್‌ನಿಂದ ಜೀವನೋಪಾಯ ನಷ್ಟ: ಸಿಜೆಐ ರಮಣಗೆ ಕೇರಳ ವಕೀಲ ಗುಮಾಸ್ತರ ಸಂಸ್ಥೆಯಿಂದ ಪತ್ರ

ಇ-ಫೈಲಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಕೇರಳ ಹೈಕೋರ್ಟ್ ಹೊರಡಿಸಿರುವ ನಿಯಮಗಳ ಅಧಿಸೂಚನೆಯು ರಾಜ್ಯದಲ್ಲಿ 10,000ಕ್ಕೂ ಹೆಚ್ಚು ವಕೀಲ ಗುಮಾಸ್ತರ ಪಾತ್ರ ಮತ್ತು ಜೀವನೋಪಾಯವನ್ನು ನಿರ್ಲಕ್ಷಿಸುತ್ತದೆ ಎಂದು ಕೆಎಸಿಎ ಹೇಳಿದೆ.
KACA, e-filing
KACA, e-filing

ರಾಜ್ಯದ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿರುವ ರೀತಿಗೆ ಆಕ್ಷೇಪಿಸಿ ತಮ್ಮ ಅಹವಾಲುಗಳನ್ನು ಒಳಗೊಂಡ ಪತ್ರವನ್ನು ಕೇರಳ ವಕೀಲ ಗುಮಾಸ್ತರ ಸಂಸ್ಥೆಯು (ಕೆಎಸಿಎ) ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರಿಗೆ ಬರೆದಿದೆ.

ಹೈಕೋರ್ಟ್‌ ಹೊರಡಿಸಿರುವ ಇ-ಫೈಲಿಂಗ್‌ ಅಧಿಸೂಚನೆಯಲ್ಲಿ ವಕೀಲ ಗುಮಾಸ್ತರ (ಅಡ್ವೊಕೇಟ್‌ ಕ್ಲರ್ಕ್ಸ್‌) ಪಾತ್ರವನ್ನು ನಗಣ್ಯವಾಗಿಸಲಾಗಿದೆ. ಇದರಿಂದ ಕೇರಳದ 10,000 ವಕೀಲ ಗುಮಾಸ್ತರ ಜೀವನೋಪಾಯ ಅತಂತ್ರಕ್ಕೆ ಸಿಲುಕಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಸಮರ್ಥ ನ್ಯಾಯದಾನ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಯಾವುದೇ ಸುಧಾರಣೆಯನ್ನು ವಕೀಲ ಗುಮಾಸ್ತರು ವಿರೋಧಿಸುವುದಿಲ್ಲ. ರಾಜ್ಯ ಮತ್ತು ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಸಾಕ್ಷರತೆ ಇನ್ನೂ ಪ್ರಾಥಮಿಕ ಹಂತದಲ್ಲಿರುವಾಗ ಇದರ ಪರಿಣಾಮದ ಕುರಿತು ತಮಗೆ ಗಂಭೀರ ಕಳಕಳಿ ಇದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

“ಇ-ಫೈಲಿಂಗ್‌ ವ್ಯವಸ್ಥೆಯಿಂದ ಮಾತ್ರ ಪ್ರಕರಣಗಳ ವಿಲೇವಾರಿ ಸಮಸ್ಯೆ ಪರಿಹಾರವಾಗುವುದಿಲ್ಲ. ಮೂಲಸೌಕರ್ಯ, ನ್ಯಾಯಮೂರ್ತಿಗಳು ಮತ್ತು ಸಿಬ್ಬಂದಿಯ ಕೊರತೆಯಂಥ ಗಂಭೀರ ಸಮಸ್ಯೆಗಳು ಪ್ರಕರಣಗಳ ವಿಲೇವಾರಿ ವಿಳಂಬವಾಗುವುದಕ್ಕೆ ಕಾರಣವಾಗಿದೆ. ಈ ಅಹವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಗ್ರವಾದ ಕ್ರಮಕೈಗೊಂಡಾಗ ಮಾತ್ರ ಪ್ರಕರಣಗಳು ಬಾಕಿ ಉಳಿಯುವ ಸಮಸ್ಯೆಯನ್ನು ಪರಿಹರಿಸಬಹುದು. ಇ-ಫೈಲಿಂಗ್‌ನಿಂದ ನಮ್ಮ ಉದ್ಯೋಗಕ್ಕೆ ಕುತ್ತು ಉಂಟಾಗಲಿದ್ದು, ಸಾವಿರಾರು ನಮ್ಮಂಥ ಜನರು ಜೀವನೋಪಾಯ ಕಳೆದುಕೊಳ್ಳಲಿದ್ದಾರೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕೆಎಸಿಎದ ಕೆಲವು ಸದಸ್ಯರು ಸೂಕ್ತ ತರಬೇತಿಯ ಮೂಲಕ ಇ-ಫೈಲಿಂಗ್‌ ಕೆಲಸ ಮಾಡಲು ಸಮರ್ಥರಾಗಬಹುದು. ಆದರೆ, ಕೆಲಸದ ಪರಿಮಾಣ ಮತ್ತು ವೃತ್ತಿಯ ಸಂಕೀರ್ಣತೆಗಳನ್ನು ಪರಿಗಣಿಸಿ ಇನ್ನೂ ಹೆಚ್ಚಿನ ಸದಸ್ಯರು ಇದರಿಂದ ಹೊರಗುಳಿಯವ ಸಾಧ್ಯತೆ ಇದೆ. ನಿರ್ಣಯಗೊಳ್ಳುವ ಪ್ರಕ್ರಿಯೆಯಿಂದ ವಕೀಲ ಗುಮಾಸ್ತರನ್ನು ಕೈಬಿಡಲಾಗಿದ್ದು, ಅವರ ಅಹವಾಲನ್ನು ಆಲಿಸಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಲಾಗಿದೆ.

ಹೀಗಾಗಿ, ಕೆಎಸಿಎನ ಈ ಮನವಿಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಇ-ಫೈಲಿಂಗ್‌ ಜೊತೆಗೆ ಭೌತಿಕವಾಗಿಯೂ ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಇ-ಫೈಲಿಂಗ್‌ ಅನ್ನು ಕಡ್ಡಾಯ ಮಾಡಿದರೆ ವಕೀಲರ ಗುಮಾಸ್ತರನ್ನು ಭೌತಿಕ ದಾಖಲೆ ಸಂಗ್ರಹಕಾರರು ಎಂದು ಪರಿಗಣಿಸಬೇಕು. ಇ-ಫೈಲಿಂಗ್‌ ವ್ಯವಸ್ಥೆಯಿಂದ ಉದ್ಯೋಗ ಕಳೆದುಕೊಳ್ಳುವವರಿಗೆ ಪುನರ್‌ವಸತಿ ಕಲ್ಪಿಸಲು ಸೂಕ್ತ ಯೋಜನೆ ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬುದು ಸೇರಿದಂತೆ ಹಲವು ಅಹವಾಲುಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.

Related Stories

No stories found.
Kannada Bar & Bench
kannada.barandbench.com