ಆಸ್ತಿಗಳ ನೋಂದಣಿಗೆ ಇ-ಖಾತಾ ಕಡ್ಡಾಯ: ವಿವರಣೆ ನೀಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಎಲ್ಲಾ ಆಸ್ತಿಗಳಿಗೆ ಬಿಬಿಎಂಪಿ ಇ-ಖಾತಾ ಪೂರೈಸುವ ತನಕ ಆಸ್ತಿಗಳ ನೋಂದಣಿಗೆ ಇ-ಖಾತೆ ಕಡ್ಡಾಯಗೊಳಿಸದಂತೆ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿರುವ ಅರ್ಜಿದಾರರು.
Chief Justice N V Anjaria and K V Aravind, Karnataka HC
Chief Justice N V Anjaria and K V Aravind, Karnataka HC
Published on

ರಾಜ್ಯ ಸರ್ಕಾರವು ಎಲ್ಲಾ ಬಗೆಯ ಆಸ್ತಿಗಳ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿರುವುದನ್ನು ಆಕ್ಷೇಪಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಬೆಂಗಳೂರು ನಿವಾಸಿ ಎಸ್ ಗೌರಿಶಂಕರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಈ ಹಂತದಲ್ಲಿ ನೋಟಿಸ್ ಜಾರಿ ಮಾಡಲಾಗುವುದಿಲ್ಲ ಎಂದು ಹೇಳಿತು. ಅಲ್ಲದೇ ಅರ್ಜಿಯಲ್ಲಿ ಆಕ್ಷೇಪಿಸಲಾಗಿರುವ ವಿಷಯದ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರದ ಪರ ವಕೀಲರಿಗೆ ಸೂಚಿಸಿದ ಪೀಠವು ವಿಚಾರಣೆಯನ್ನು ಫೆಬ್ರವರಿ 3ಕ್ಕೆ ಮುಂದೂಡಿತು.

ಅರ್ಜಿದಾರ ಗೌರಿಶಂಕರ್ ಅವರು “ಎಲ್ಲಾ ಬಗೆಯ ಆಸ್ತಿಗಳ ನೋಂದಣಿಗೆ ಸರ್ಕಾರ ಇ-ಖಾತೆ ಕಡ್ಡಾಯಗೊಳಿಸಿದೆ. ಆದರೆ, ಬಿಬಿಎಂಪಿ ಈ ನಿಟ್ಟಿನಲ್ಲಿ ಸನ್ನದ್ದವಾಗಿಲ್ಲ. ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇನ್ನೂ ಇ-ಖಾತಾ ಆಗಿಲ್ಲ. ಇದರಿಂದ ಆಸ್ತಿಗಳ ನೋಂದಣಿಯಲ್ಲಿ ಶೇ.60ರಷ್ಟು ಕುಸಿತವಾಗಿದೆ. ಅಲ್ಲದೇ ಆಸ್ತಿಗಳ ಕ್ರಯ-ವಿಕ್ರಯಕ್ಕೆ ಸಮಸ್ಯೆ ಆಗುತ್ತಿದೆ. ಬ್ಯಾಂಕುಗಳು ಸಾಲ ನೀಡುತ್ತಿಲ್ಲ. ಈ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಆಸ್ತಿಗಳಿಗೆ ಬಿಬಿಎಂಪಿ ಇ-ಖಾತಾ ಪೂರೈಸುವ ತನಕ ಆಸ್ತಿಗಳ ನೋಂದಣಿಗೆ ಇ-ಖಾತ ಕಡ್ಡಾಯಗೊಳಿಸದಂತೆ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಮನವಿ ಮಾಡಿದರು. 

Kannada Bar & Bench
kannada.barandbench.com