ಅಪರಿಚಿತ ಸಂಖ್ಯೆಯಿಂದ ಕರೆ ಮಾಡುವವರ ಗುರುತನ್ನು ತಿಳಿಸುವ ಟ್ರೂಕಾಲರ್ ಮೊಬೈಲ್ ಅಪ್ಲಿಕೇಷನ್ ನಿಷೇಧಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ (ಅಜಯ್ ಶುಕ್ಲಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).
ಫೋನ್ ಸಂಖ್ಯೆಗಳ ಹೆಸರುಗಳು ಮತ್ತು ಇಮೇಲ್‌ಗಳಂತಹ ಸೇವೆಗಳು ಸೌಲಭ್ಯವಾಗಿದ್ದುಈ ಹಿಂದೆಯೂ ಜನರ ಹೆಸರುಗಳು ಮತ್ತು ಫೋನ್ ಸಂಖ್ಯೆಯನ್ನು ಹೊಂದಿರುವ ದೂರವಾಣಿ ಡೈರೆಕ್ಟರಿಗಳನ್ನು ಪ್ರಕಟಿಸಲಾಗುತ್ತಿತ್ತು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
"ಈ ಹಿಂದೆ ಫೋನ್ ಡೈರೆಕ್ಟರಿಗಳನ್ನು ಪ್ರಕಟಿಸಲಾಗುತ್ತಿತ್ತು. ಇದು ಒಂದು ಸೌಲಭ್ಯ" ಎಂದು ನ್ಯಾಯಾಲಯ ಹೇಳಿದೆ.
ಮೂರನೇ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅವರ ಒಪ್ಪಿಗೆಯಿಲ್ಲದೆ ಒದಗಿಸುವುದರಿಂದ ಟ್ರೂಕಾಲರ್ ಖಾಸಗಿತನ ಉಲ್ಲಂಘಿಸಿದೆ ಎಂದು ಆರೋಪಿಸಿ ಅಜಯ್ ಶುಕ್ಲಾ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಬಳಕೆದಾರರ ಫೋನ್‌ಬುಕ್‌ಅನ್ನು ಟ್ರೂಕಾಲರ್ ಓದುತ್ತಿದ್ದು ತನ್ನ ನಿಯಮ ಮತ್ತು ಷರತ್ತುಗಳಿಗೆ ಒಪ್ಪಿಗೆ ನೀಡದವರ ವಿಳಾಸ, ಇಮೇಲ್ ಮತ್ತಿತರ ವಿವರಗಳನ್ನು ಬಹಿರಂಗಪಡಿಸುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಸಂಪರ್ಕ ಸಂಖ್ಯೆಗಳನ್ನು 'ಸ್ಪ್ಯಾಮ್' ಸಂಖ್ಯೆಗಳು ಎಂತಲೂ ಅದು ಗುರುತಿಸಬಹುದಾದ್ದರಿಂದ ಟ್ರೂಕಾಲರ್ ಪ್ರಾಮಾಣಿಕ ವ್ಯಕ್ತಿಗಳ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿದೆ ಎಂದು ಆರೋಪಿಸಲಾಗಿತ್ತು.
ಆದರೆ ಅರ್ಜಿದಾರರು ಈ ಹಿಂದೆ ಸಲ್ಲಿಸಿದ್ದ ಇದೇ ರೀತಿಯ ಅರ್ಜಿ ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ದಾವೆದಾರರಿಗೆ ಹೈಕೋರ್ಟ್ ಸಂಪರ್ಕಿಸುವ ಸ್ವಾತಂತ್ರ್ಯ ನೀಡಿರಲಿಲ್ಲ ಎಂಬ ಟ್ರೂಕಾಲರ್ ವಕೀಲರ ವಾದವನ್ನು ಗಣನೆಗೆ ತೆಗೆದುಕೊಂಡಿತು.
"ಅರ್ಜಿ ಮರು ದಾವೆಗೆ ಸಮನಾಗಿದೆ. ಇದು ವಿಚಾರಣೆಯ ದುರುಪಯೋಗವಾಗುತ್ತದೆ. ರಿಟ್ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಯ ಬಗ್ಗೆ ಏನನ್ನೂ ತಿಳಿಸಿಲ್ಲ. ಅದೇ ಇದರ ಚೆಲುವು" ಎಂದು ಕುಟುಕಿದ ನ್ಯಾಯಾಲಯ ಅದನ್ನು ವಜಾಗೊಳಿಸಿತು.