ನ್ಯಾಯಾಧೀಶರ ವೃತ್ತಿಯು ಹೂವಿನ ಹಾಸಿಗೆಯಲ್ಲ, ಬದಲಿಗೆ ಹಗ್ಗದ ಮೇಲಿನ ನಡಿಗೆ: ಹೈಕೋರ್ಟ್‌ಗೆ ನ್ಯಾಯಮೂರ್ತಿ ಉಮಾ ವಿದಾಯ

ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಸೇವಾ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾ. ಉಮಾ ಅವರು ಮಾತನಾಡಿದರು.
ನ್ಯಾಯಾಧೀಶರ ವೃತ್ತಿಯು ಹೂವಿನ ಹಾಸಿಗೆಯಲ್ಲ, ಬದಲಿಗೆ ಹಗ್ಗದ ಮೇಲಿನ ನಡಿಗೆ: ಹೈಕೋರ್ಟ್‌ಗೆ ನ್ಯಾಯಮೂರ್ತಿ ಉಮಾ ವಿದಾಯ
Published on

“ನಾವೆಲ್ಲರೂ ಇಲ್ಲಿ ಸೀಮಿತ ಅವಧಿಗೆ ಇರುತ್ತೇವೆ. ಯಾವುದೂ ಶಾಶ್ವತವಲ್ಲ ಮತ್ತು ಎಲ್ಲವೂ ಮುಗಿದು ಹೋಗುವ ಅವಧಿಯೊಂದಿಗೆ ಬರುತ್ತದೆ. ಆದ್ದರಿಂದ, ಈ ಮಹಾನ್ ಸಂಸ್ಥೆಯ ಘನತೆಯನ್ನು ಎತ್ತಿಹಿಡಿಯಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು” ಎಂದು ಕರ್ನಾಟಕ ಹೈಕೋರ್ಟ್‌ನ ನಿರ್ಗಮಿತ ನ್ಯಾಯಮೂರ್ತಿ ಎಂ ಜಿ ಉಮಾ ಅವರು ಸೋಮವಾರ ಹೇಳಿದರು.

ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಸೇವಾ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

“ಆರಂಭಿಕ ಹಂತದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆಯಾಗಿರುವಾಗ ನ್ಯಾಯಾಧೀಶರ ವೃತ್ತಿಯು ಹೂವಿನ ಹಾಸಿಗೆಯಲ್ಲ, ಬದಲಿಗೆ ಹಗ್ಗದ ಮೇಲಿನ ನಡಿಗೆ ಎಂಬುದು ಮೈಸೂರಿನಲ್ಲೇ ನನಗೆ ಅರ್ಥವಾಗಿತ್ತು. ಅದಾಗ್ಯೂ, ನ್ಯಾಯಾಧೀಶೆಯಾಗಿ ನಾನು ಮಾಡಿರುವ ಕೆಲಸವು ಅಸಾಧಾರಣ ಸಮಾಧಾನ ಮತ್ತು ಸ್ಥೈರ್ಯ ತುಂಬಿದೆ. ಮೈಸೂರು, ಬಳ್ಳಾರಿ, ಮಂಗಳೂರು, ರಾಮನಗರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆಯಾಗಿದ್ದಾಗ ನ್ಯಾಯದಾನ ವ್ಯವಸ್ಥೆಯ ವಾಸ್ತವಕ್ಕೆ ಮುಖಾಮುಖಿಯಾಗಿಸಿತು” ಎಂದು ಸ್ಮರಿಸಿದರು.

“ನ್ಯಾಯಾಧೀಶರ ವೃತ್ತಿಯು ಎಚ್ಚು ಶ್ರಮ ಬೇಡುವುದಾಗಿದೆ. ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೇ ನ್ಯಾಯದಾನ ಮಾಡಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಧೈರ್ಯ ಮತ್ತು ಶಕ್ತಿ ಬೇಕು” ಎಂದು ನ್ಯಾ. ಉಮಾ ಹೇಳಿದರು.

“ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಮೊದಲ ಮಹಿಳಾ ಸದಸ್ಯ ಕಾರ್ಯದರ್ಶಿಯಾಗಿ ನನ್ನ ಕೆಲಸವು ಅತ್ಯಂತ ಸವಾಲಿನಿಂದ ಕೂಡಿದ್ದು, ಪರಿಪೂರ್ಣವಾಗಿತ್ತು. ಇದು ಬದುಕಿನ ಅತ್ಯಂತ ವಾಸ್ತವಿಕ ವಿಚಾರಗಳಿಗೆ ಮುಖಾಮುಖಿಯಾಗಿಸಿದ್ದು, ನನ್ನೊಳಗಿನ ನ್ಯಾಯಾಧೀಶೆಯನ್ನು ಮತ್ತಷ್ಟು ಪರಿಪೂರ್ಣವಾಗಿಸಿತ್ತು” ಎಂದು ನ್ಯಾ. ಉಮಾ ನೆನೆದರು.

“ಶಾರದೆಯ ತವರೂರು ಶೃಂಗೇರಿ ನನ್ನ ಬದುಕಿನ ಮೌಲ್ಯಗಳಿಗೆ ನೆಲೆಯಾಗಿದೆ. ಶಾರದಾ ಪೀಠದ ಆಶೀರ್ವಾದವೂ ನನ್ನ ಮೇಲಿದೆ. ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದಾಗ ಹೈಕೋರ್ಟ್‌ನ ಕಟ್ಟಡವನ್ನು ನೋಡಿದ್ದೆ. ಆದರೆ, ಆ ಸಂದರ್ಭದಲ್ಲಿ ಇಲ್ಲಿಗೆ ನಾನು ಪ್ರವೇಶಿಸುತ್ತೇನೆ ಎಂಬುದನ್ನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ” ಎಂದು ಭಾವುಕರಾದರು.

“ಮೊದಲ ತಲೆಮಾರಿನ ವಕೀಲರೆಲ್ಲರೂ ಎದುರಿಸುವಂತೆ ಅದರಲ್ಲೂ ಮಹಿಳೆಯಾಗಿ ಅತ್ಯಂತ ಸಣ್ಣ ಪ್ರದೇಶವಳಾದ ನನಗೆ ಪದೇಪದೇ ಪ್ರಾಕ್ಟೀಸ್‌ ಮಾಡುವ ಸ್ಥಳವನ್ನು ಆಗಾಗ್ಗೆ ಬದಲಾಯಿಸುವುದು ಅನಿವಾರ್ಯವಾಗಿತ್ತು. ವೃತ್ತಿಯಲ್ಲಿ ಉಳಿಯಲು ಸಾಕಷ್ಟು ಶ್ರಮಪಟ್ಟಿದ್ದೇನೆ. ಕಠಿಣ ಪರಿಶ್ರಮ, ಬದ್ಧತೆಯಿಂದ ಇಲ್ಲಿಗೆ ತಲುಪಿದ್ದೇನೆ ಎಂಬುದು ನಿರ್ಭಿಡೆ ಮತ್ತು ಹೆಮ್ಮೆಯಿಂದ ಹೇಳಲು ಬಯಸುತ್ತೇನೆ” ಎಂದರು.

Kannada Bar & Bench
kannada.barandbench.com