"ಎರಡು ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂಬುದು ಸುಲಭ ಆದರೆ..." ಪ್ರಕರಣಗಳ ಬಾಕಿ ಕುರಿತು ಸಚಿವ ರಿಜಿಜು ಮಾತು

ಕಾರ್ಯಾಂಗದ ಸಕ್ರಿಯ ಪಾತ್ರವಿಲ್ಲದೆ ನ್ಯಾಯಾಂಗ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವುದು ಕಷ್ಟ ಎಂದು ರಿಜಿಜು ಅಭಿಪ್ರಾಯಪಟ್ಟರು.
"ಎರಡು ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂಬುದು ಸುಲಭ ಆದರೆ..." ಪ್ರಕರಣಗಳ ಬಾಕಿ ಕುರಿತು ಸಚಿವ ರಿಜಿಜು ಮಾತು
A1

ನ್ಯಾಯಾಂಗ ಎರಡು ವರ್ಷಗಳಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಎಂದು ನೋಡುಗರಾಗಿ ಹೇಳುವುದು ಸುಲಭ, ಆದರೆ ಅದರ ಒತ್ತಡ ಅನುಭವಿಸುವವರು ಹಾಗೆ ಹೇಳುವುದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಹೇಳಿದರು.

“ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಅದನ್ನು ಮಾಡಬೇಕು ಇದನ್ನು ಮಾಡಬೇಕು, ನ್ಯಾಯಾಂಗ 2 ವರ್ಷಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂದು ಆ ಸಂದಿಗ್ಧ ಅನುಭವಿಸದೆಯೇ ಎಲ್ಲವನ್ನೂ ಹೇಳುವುದು ಸುಲಭ. ಆದರೆ, ಬೇರಾವುದೇ ದೇಶದಲ್ಲಿ ನ್ಯಾಯಾಧೀಶರಿಗೆ ಈ ಪರಿ ಕಾರ್ಯಭಾರ ಇಲ್ಲ” ಎಂದು ಅವರು ನ್ಯಾಯಾಧೀಶರು ಎದುರಿಸುವ ಸವಾಲಿಗೆ ಕನ್ನಡಿ ಹಿಡಿದರು.

Also Read
ನ್ಯಾಯಾಂಗದಲ್ಲಿನ ಭ್ರಷ್ಟಾಚಾರಕ್ಕೆ ನ್ಯಾಯಾಂಗವೇ ಪರಿಹಾರ ಕಂಡುಕೊಳ್ಳಬೇಕು: ಕಾನೂನು ಸಚಿವ ಕಿರೆನ್‌ ರಿಜಿಜು

"ಕಾರ್ಯಾಂಗಕ್ಕೆ ದೊಡ್ಡ ಜವಾಬ್ದಾರಿ ಇದ್ದು ಸರ್ಕಾರದ ಸಕ್ರಿಯ ಪಾತ್ರವಿಲ್ಲದೆ, ನ್ಯಾಯಾಂಗ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದು ಕಷ್ಟಕರ. ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸೇತುವೆಯಾಗಿ ನನಗೆ ಸ್ಪಷ್ಟವಾದ ಪಾತ್ರವಿದೆ" ಎಂದು ಅವರು ಹೇಳಿದರು.

ನ್ಯಾಯದಾನದಲ್ಲಿನ ವಿಳಂಬದ ಬಗ್ಗೆ, ಬಾಕಿ ಉಳಿದಿರುವ ಬೃಹತ್‌ ಪ್ರಮಾಣದ ಪ್ರಕರಣಗಳ ಬಗ್ಗೆ ಸಾಮಾನ್ಯ ನಾಗರಿಕರು, ಸಹ ಸಂಸದೀಯ ಪಟುಗಳು ಪ್ರಶ್ನೆ ಕೇಳಿದಾಗ ತಾವು ನಿಸ್ಸಹಾಯಕರಾಗುವುದಾಗಿ ಹೇಳಿದ ರಿಜಿಜು, "ನಾನು ನ್ಯಾಯಾಂಗವನ್ನು ಗೌರವಿಸುತ್ತೇನೆ, ಆದರೆ ಅಸಹಾಯಕನಾಗಿದ್ದೇನೆ. ನನ್ನ ಹುದ್ದೆಯ ಲಾಭ ಬಳಸಿಕೊಂಡು ನಾನು ಹೇಳಿಕೆಗಳನ್ನು ನೀಡಬಹುದು. ಆದರೆ ಲಕ್ಷ್ಮಣ ರೇಖೆಯನ್ನು ದಾಟಲು ನಾನು ಬಯಸುವುದಿಲ್ಲ," ಎಂದು ಅವರು ವಿವರಿಸಿದರು".

ಮುಂದುವರೆದು, "ದೇಶದ ಯಾವುದೇ ಅಂಗಗಳು ಕಡಿಮೆ ಕೆಲಸ ಮಾಡುತ್ತಿವೆ ಎಂದಲ್ಲ. ಇಲ್ಲಿ (ದೇಶದಲ್ಲಿ) ಪ್ರತಿದಿನ ನ್ಯಾಯಾಧೀಶರು 40-50 ಪ್ರಕರಣಗಳನ್ನು ವಿಲೇವಾರಿ ಮಾಡುತ್ತಾರೆ. ಜಗತ್ತಿನ ಯಾವುದೇ ದೇಶದ ನ್ಯಾಯಾಧೀಶರು ನಮ್ಮಲ್ಲಿರುವಷ್ಟು ಕೆಲಸದ ಒತ್ತಡ ಹೊಂದಿಲ್ಲ," ಎಂದು ನ್ಯಾಯಾಂಗದ ಮೇಲಿರುವ ಕಾರ್ಯಬಾಹುಳ್ಯದ ಬಗ್ಗೆ ಬೆರಳು ಮಾಡಿದರು.

ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ಆಯೋಜಿಸಿದ್ದ 76ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಭಾಗವಹಿಸಿದ್ದರು, ಸಿಜೆಐ ನಿಯೋಜಿತ ನ್ಯಾಯಮೂರ್ತಿ ಯು ಯು ಲಲಿತ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com