ಚುನಾವಣಾ ಆಯೋಗ ಪೌರತ್ವ ಪರೀಕ್ಷೆ ನಡೆಸುವಂತಿಲ್ಲ: ಸುಪ್ರೀಂ ಕೋರ್ಟ್‌ನಲ್ಲಿ ಎಸ್ಐಆರ್‌ಗೆ ಅರ್ಜಿದಾರರ ವಿರೋಧ

ಚುನಾವಣಾ ಆಯೋಗ ಅಂತಹ ಪ್ರಕ್ರಿಯೆಗೆ ಆದೇಶಿಸಬೇಕಾದರೆ ಕ್ಷೇತ್ರವಾರು ಕಾರಣ ನೀಡಬೇಕಾಗುತ್ತದೆ ಎಂದು ಹಿರಿಯ ವಕೀಲ ಅಭೀಷೇಕ್‌ ಮನು ಸಿಂಘ್ವಿ ವಾದ.
SIR of electoral rolls
SIR of electoral rolls
Published on

ವಿವಿಧ ರಾಜ್ಯಗಳಲ್ಲಿ ಭಾರತೀಯ ಚುನಾವಣಾ ಆಯೋಗ ನಡೆಸಲು ಉದ್ದೇಶಿಸಿರುವ ಮತದಾರರ ಪಟ್ಟಿ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ಸಂಸತ್ತಿನ ಅನುಮೋದನೆ ಇಲ್ಲದೆ ನಡೆಯುತ್ತಿರುವ ಪರೋಕ್ಷ ರಾಷ್ಟ್ರೀಯ ಪೌರತ್ವ ನೋಂದಣಿ ಎಂದು ಎಸ್‌ಐಆರ್‌ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿದಾರರು ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ನಡೆಸಲು ಆದೇಶಿಸಲಾದ ಎಸ್‌ಐಆರ್‌ ಪ್ರಕ್ರಿಯೆಯ ಸಿಂಧುತ್ವ ಪ್ರಶ್ನಿಸಿರುವ ಅರ್ಜಿ ವಿಚಾರಣೆ ವೇಳೆ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಸಿಜೆಐ ಸೂರ್ಯ ಕಾಂತ್‌ ಮತ್ತು ನ್ಯಾ. ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠದೆದುರು ಈ ವಾದ ಮಂಡಿಸಿದರು.

Also Read
ಎಸ್‌ಐಆರ್‌: ಇಡೀ ಪ್ರಕಿಯೆಯನ್ನು ಚುನಾವಣಾ ಆಯೋಗ ಸಮರ್ಥಿಸಬೇಕಿದೆ ಎಂದ ಸುಪ್ರೀಂ ಕೋರ್ಟ್‌

ಚುನಾವಣೆಗಳಿಗೆ ಮಾರ್ಗಸೂಚಿಗಳಲ್ಲಿ ಅನಿಯಂತ್ರಿತ ಕಾರ್ಯವಿಧಾನಗಳನ್ನು ಪರಿಚಯಿಸುವ ಮೂಲಕ ಪೌರತ್ವ ಪರೀಕ್ಷೆಯನ್ನು ನಡೆಸಲು ಭಾರತೀಯ ಸಂವಿಧಾನದ 324 ನೇ ವಿಧಿಯ ಅಡಿಯಲ್ಲಿ ಇಸಿಐಗೆ ಅಧಿಕಾರವಿಲ್ಲ. ಚುನಾವಣಾ ಆಯೋಗವು ಸಂವಿಧಾನ ಮತ್ತು ಪೌರತ್ವ ಕಾಯ್ದೆಯನ್ನು ಉಲ್ಲಂಘಿಸಿದೆ. ಆಯೋಗ ಜನರನ್ನು "ತಾತ್ಕಾಲಿಕ ಪೌರತ್ವ ಪಟ್ಟಿಗೆ" ಸೇರಿಸುತ್ತಿದೆ ಎಂದು ಸಿಂಘ್ವಿ ವಾದಿಸಿದರು.

ಚುನಾವಣಾ ಆಯೋಗವು ಅಂತಹ ಪ್ರಕ್ರಿಯೆಯನ್ನು ಆದೇಶಿಸಲು ಕ್ಷೇತ್ರವಾರು ಕಾರಣ ನೀಡಬೇಕಾಗುತ್ತದೆ. ಹೀಗಾಗಿ, ಪ್ರಜಾಪ್ರಾತಿನಿಧ್ಯ ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳನ್ನು ಕಟ್ಟುನಿಟ್ಟಾದ ಅರ್ಥದಲ್ಲಿ ಅರ್ಥೈಸಬೇಕಿದೆ ಎಂದರು.

ವಿಶೇಷ ಆಮೂಲಾಗ್ರ ಪರಿಷ್ಕರಣೆ ಹೆಸರಿನಲ್ಲಿ ನಿರ್ದಿಷ್ಟ ಸಮುದಾಯಗಳಿಗೆ ಸೇರಿದ ಮತದಾರರ ಹೆಸರನ್ನೇ ಆಯ್ದು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗುತ್ತಿದೆ ಎಂದ ಅವರು ಉತ್ತರ ಪ್ರದೇಶದ ಠಾಕುರ್‌ದ್ವಾರಾದ ಉದಾಹರಣೆ ನೀಡಿದರು. ಇಲ್ಲಿ ಒಂದು ಸಮುದಾಯಕ್ಕೆ ಸೇರಿದ ಸುಮಾರು 15000 ಮತಗಳನ್ನು ಡಿಲೀಟ್‌ ಮಾಡಲಾಗಿದ್ದು, ಮತ್ತೊಂದು ಸಮುದಾಯಕ್ಕೆ ಸೇರಿದ 21000 ಮತಗಳನ್ನು ಸೇರ್ಪಡೆಗೊಳಿಸಿರುವ ಬಗ್ಗೆ ನ್ಯಾಯಾಲಯದ ಗಮನಸೆಳೆದರು.

ಇಂತಹದ್ದೊಂದು ಪ್ರಕ್ರಿಯೆ ಬಗ್ಗೆ 75 ವರ್ಷಗಳ ಅವಧಿಯಲ್ಲಿ ಯಾರೊಬ್ಬರೂ ಯೋಚನೆ ಮಾಡಿರಲಿಲ್ಲ. ಅಂತಹದ್ದನ್ನು ಸಾಧಿಸಿ ತೋರಿಸಿರುವ ಇಸಿಐಗೆ ಎಡಗಯಿಂದ ಅಭಿನಂದನೆ ಸಲ್ಲಿಸಬೇಕು ಎಂದು ಅವರು ಇದೇ ವೇಳೆ ಎಸ್‌ಐಆರ್‌ ಪ್ರಕ್ರಿಯೆಯ ಬಳಕೆ ಮಾಡುತ್ತಿರುವ ಆಯೋಗಕ್ಕೆ ತಮ್ಮ ವ್ಯಂಗ್ಯಭರಿತ ಮೊನಚು ವಾದದಿಂದ ತಿವಿದರು.

Also Read
ಎಸ್‌ಐಆರ್‌ ಜಗತ್ತಿನ ಇತಿಹಾಸದಲ್ಲಿಯೇ ಅತಿ ದೊಡ್ಡ ಮತದಾನದ ನಿರಾಕರಣೆ: ಸುಪ್ರೀಂನಲ್ಲಿ ಯೋಗೇಂದ್ರ ಯಾದವ್‌ ವಿಶ್ಲೇಷಣೆ

ಮತ್ತೊಬ್ಬ ಅರ್ಜಿದಾರರ ಪರವಾಗಿ ಹಾಜರಾದ ವಕೀಲೆ ವೃಂದಾ ಗ್ರೋವರ್ , ಎಸ್‌ಐಆರ್‌ ಪ್ರಕ್ರಿಯೆಗೆ ಬಳಸುತ್ತಿರುವ ಘೋಷಣಾ ಪತ್ರವನ್ನು ಮತದಾರರನ್ನು ಹೊರಗಿಡಲು ರೂಪಿಸಲಾಗಿದೆ. ಎಸ್‌ಐಆರ್‌ ಮೂಲಕ ಇಸಿಐ ಕಾನೂನಿನಲ್ಲಿ ಇರದ ಅಧಿಕಾರ ಚಲಾಯಿಸಲು ಹೊರಟಿದೆ. ಚುನಾವಣಾ ಆಯೋಗ ಶಾಸಕಾಂಗವನ್ನು ಅತಿಕ್ರಮಿಸುತ್ತಿದೆ ಎಂದು ದೂರಿದರು.   

ಮತ್ತೊಬ್ಬ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪ್ರಶಾಂತ್‌ ಭೂಷಣ್‌, ಈಗ ನಡೆಯುತ್ತಿರುವ ಎಸ್‌ಐಆರ್‌ 2002ರ ಎಸ್‌ಐಆರ್‌ಗಿಂತಲೂ ಭಿನ್ನವಾಗಿದೆ. ಬೂತ್‌ ಮಟ್ಟದ 30 ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಯನ್ನು ಏಕೆ ಸೃಷ್ಟಿಸಲಾಗಿದೆ? ಚುನಾವಣಾ ಆಯೋಗವನ್ನು ನಿರಂಕುಶ ದಬ್ಬಾಳಿಕೆಯ ಸಂಸ್ಥೆಯಂತೆ ಬಹಳಷ್ಟು ಮಂದಿ ಕಾಣುತ್ತಿದ್ದಾರೆ. ಬಿಹಾರದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಬಳಿಕವೂ 5 ಲಕ್ಷಕ್ಕಿಂತ ಹೆಚ್ಚು ನಕಲಿ ಮತದಾರರು ಉಳಿದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 4ರಂದು ನಡೆಯಲಿದೆ.

Kannada Bar & Bench
kannada.barandbench.com