ಗಣೇಶ ಚತುರ್ಥಿ ಆಚರಣೆ ವೇಳೆ ಮುಂಬೈನ ಪರಿಸರ ಸೂಕ್ಷ್ಮ ಪ್ರದೇಶವಾದ ಆರೆ ಕಾಲೋನಿಯ ಕೆರೆಗಳಲ್ಲಿ ಗಣೇಶ ವಿಗ್ರಹ ವಿಸರ್ಜನೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ವಿವರಿಸುವಂತೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ (ಬಿಎಂಸಿ) ಬಾಂಬೆ ಹೈಕೋರ್ಟ್ ಸೋಮವಾರ ಸೂಚಿಸಿದೆ [ವನಶಕ್ತಿ ಮತ್ತಿತರರು ಹಾಗೂ ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಇನ್ನಿತರರ ನಡುವಣ ಪ್ರಕರಣ].
ಆರೆ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ವಿಗ್ರಹ ವಿಸರ್ಜಿಸಲು ಸ್ಥಳೀಯ ಶಾಸಕರೊಬ್ಬರು ಬಿಎಂಸಿಯ ಅನುಮತಿ ಕೋರಿದ್ದರು ಎಂಬ ಸಂಗತಿಯನ್ನು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರಿದ್ದ ಪೀಠಕ್ಕೆ ತಿಳಿಸಲಾಯಿತು.
ಆರೆ ಪ್ರದೇಶದಲ್ಲಿ ವಿಗ್ರಹ ವಿಸರ್ಜನೆಗೆ ಬಿಎಂಸಿ ನೀಡಿದ ಅನುಮತಿ ಪ್ರಶ್ನಿಸಿ ವನಶಕ್ತಿ ಹೆಸರಿನ ಸರ್ಕಾರೇತರ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿತ್ತು.
ನೈಸರ್ಗಿಕ ಜಲಮೂಲಗಳಲ್ಲಿ ಜೈವಿಕ ವಿಘಟನೀಯವಲ್ಲದ ವಸ್ತುಗಳಿಂದ ತಯಾರಿಸಿದ ವಿಗ್ರಹ ವಿಸರ್ಜನೆ ನಿರ್ಬಂಧಿಸಿ 2008ರಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪು ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಮಾರ್ಗಸೂಚಿಗಳಿದ್ದರೂ ಅನುಮತಿ ನೀಡಿರುವುದಕ್ಕೆ ಪೀಠ ಆಶ್ಚರ್ಯ ವ್ಯಕ್ತಪಡಿಸಿತು. ಆರೆ ಕಾಲೋನಿಯಲ್ಲಿ ವಿಗ್ರಹ ವಿಸರ್ಜನೆಗೆ ಕೆರೆಯಂಗಳದಲ್ಲಿ ಕೃತಕ ಕೊಳಗಳನ್ನು ನಿರ್ಮಿಸುವಂತೆ ನೋಡಿಕೊಳ್ಳಬೇಕು ಎಂದು ಬಿಎಂಸಿಗೆ ಸೂಚಿಸಿದ ನ್ಯಾಯಾಲಯ ಪ್ರಕರಣವನ್ನು ಸೆ. 8ಕ್ಕೆ ಮುಂದೂಡಿದೆ.