ಎಐ ಪ್ರಗತಿಯೊಂದಿಗೆ ಹಣ ಅಕ್ರಮ ವರ್ಗಾವಣೆಯಂತಹ ಆರ್ಥಿಕ ಅಪರಾಧಗಳು ನೈಜ ಬೆದರಿಕೆ ಒಡ್ಡುತ್ತಿವೆ: ಸುಪ್ರೀಂ ಕಳವಳ

ಕಾನೂನು ಸಮರ್ಥನೆ ಇಲ್ಲದೆಯೂ ಆರೋಪಿಗೆ ಜಾಮೀನು ನೀಡಿದ್ದ ಮಾತ್ರಕ್ಕೆ ಆತನಂತೆ ತನಗೂ ಸಮಾನತೆಯ ಆಧಾರದಲ್ಲಿ ಪರಿಹಾರ ನೀಡಬೇಕು ಎಂದು ಸಹ ಆರೋಪಿಯೂ ಜಾಮೀನು ಪಡೆಯಲು ಸಾಧ್ಯವಿಲ್ಲ ಎಂದೂ ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಸುಪ್ರೀಂ ಕೋರ್ಟ್, ಪಿಎಂಎಲ್ಎ
ಸುಪ್ರೀಂ ಕೋರ್ಟ್, ಪಿಎಂಎಲ್ಎ

ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನದಲ್ಲಿನ ಪ್ರಗತಿಯೊಂದಿಗೆ ಅಕ್ರಮ ಹಣ ವರ್ಗಾವಣೆಯಂತಹ ಆರ್ಥಿಕ ಅಪರಾಧಗಳು ದೇಶದ ಹಣಕಾಸು ವ್ಯವಸ್ಥೆಗೆ ನೈಜ ಬೆದರಿಕೆಯಾಗಿ ಮಾರ್ಪಟ್ಟಿವೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ತರುಣ್ ಕುಮಾರ್ ಮತ್ತು ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರ ನಡುವಣ ಪ್ರಕರಣ]

ವಹಿವಾಟಿನ ಸಂಕೀರ್ಣ ಸ್ವರೂಪ ಮತ್ತು ಅವುಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಪಾತ್ರವನ್ನು ಪತ್ತೆಹಚ್ಚುವುದು ಮತ್ತು ಅರ್ಥಮಾಡಿಕೊಳ್ಳುವುದು ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿದೆ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

"ಮುಗ್ಧ ವ್ಯಕ್ತಿ ವಿರುದ್ಧ ತಪ್ಪಾಗಿ ಪ್ರಕರಣ ದಾಖಲಾಗದಂತೆ ಮತ್ತು ಅಪರಾಧಿ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ತನಿಖಾ ಸಂಸ್ಥೆ ಸಾಕಷ್ಟು ಸೂಕ್ಷ್ಮ ಕ್ರಮ ಕೈಗೊಳ್ಳುಬೇಕಾಗುತ್ತದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆರ್ಥಿಕ ಅಪರಾಧಗಳ ಒಂದು ವರ್ಗವನ್ನು ಪ್ರತ್ಯೇಕವಾಗಿ ಪರಿಗಣಿಸಿ ಜಾಮೀನು ವಿಷಯದಲ್ಲಿ ವಿಭಿನ್ನ ರೀತಿಯಲ್ಲಿ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಈ ಹಿಂದೆ ನೀಡಿದ್ದ ವಿವಿಧ ತೀರ್ಪುಗಳನ್ನು ಉಲ್ಲೇಖಿಸುವ ವೇಳೆ ತಿಳಿಸಿತು.

ಆಳವಾದ ಪಿತೂರಿಯನ್ನೊಳಗೊಂಡ ಮತ್ತು ಸಾರ್ವಜನಿಕ ಹಣದ ಭಾರಿ ನಷ್ಟವುಳ್ಳ ಆರ್ಥಿಕ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ದೇಶದ ಆರ್ಥಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುವ ಅವುಗಳನ್ನು ದೇಶದ ಒಟ್ಟಾರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಗಂಭೀರ ಅಪರಾಧಗಳು ಎಂದು ಪರಿಗಣಿಸಬೇಕಿದೆ ಎಂದು ಅದು ಹೇಳಿದೆ.

ಶಕ್ತಿ ಭೋಗ್ ಫುಡ್ಸ್‌ ಕಂಪನಿ ವಿರುದ್ಧ ಹೂಡಲಾಗಿದ್ದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಕೋರಿ ಕಂಪೆನಿಯ ಖರೀದಿ ವಿಭಾಗದ ಮಾಜಿ ಉಪಾಧ್ಯಕ್ಷ ತರುಣ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

ಕಾನೂನು ಸಮರ್ಥನೆ ಇಲ್ಲದೆಯೂ ಆರೋಪಿಗೆ ಜಾಮೀನು ನೀಡಿದ್ದ ಮಾತ್ರಕ್ಕೆ ಆತನಂತೆ ತನಗೂ ಸಮಾನತೆಯ ಆಧಾರದಲ್ಲಿ ಪರಿಹಾರ ನೀಡಬೇಕು ಎಂದು ಸಹ ಆರೋಪಿಯೂ ಜಾಮೀನು ಪಡೆಯಲು ಸಾಧ್ಯವಿಲ್ಲ ಎಂದೂ ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಪ್ರಕರಣದ ಉಳಿದ ಆರೋಪಿಗಳಿಗೆ ಜಾಮೀನು ನೀಡಿರುವುದರಿಂದ ತನಗೂ ಜಾಮೀನು ನೀಡಬೇಕು ಎಂದು ಆರೋಪಿ ಕೇಳಿದಾಗ ಪ್ರಕರಣದಲ್ಲಿ ಆತನ ಪಾತ್ರ ಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಮತ್ತವರ ತಂಡ ಅರ್ಜಿದಾರರ ಪರವಾಗಿ ವಾದಿಸಿತು. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಹಾಗೂ ಇನ್ನಿತರ ವಕೀಲರು ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದರು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Tarun Kumar v. Assistant Director Directorate of Enforcement.pdf
Preview

Related Stories

No stories found.
Kannada Bar & Bench
kannada.barandbench.com