
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯಾಗಿರುವುದು ಹೊರಬರುವವರೆಗೆ ಜಾರಿ ನಿರ್ದೇಶನಾಲಯ ಕಾಯಬೇಕು. ಆದರೆ, ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ನಿವೇಶನ ಹಂಚಿಕೆಯನ್ನು ಇ ಡಿ ತನಿಖೆ ಮಾಡಲು ಸಾಧ್ಯವೇ ಇಲ್ಲ ಎಂದು ಹಿರಿಯ ವಕೀಲ ಸಂದೇಶ್ ಚೌಟ ಮಂಗಳವಾರ ಪ್ರಬಲವಾಗಿ ವಾದಿಸಿದರು.
ಜಾರಿ ನಿರ್ದೇಶನಾಲಯವು ತನ್ನ ಮನೆಯಲ್ಲಿ ನಡೆಸಿರುವ ಶೋಧ ಕಾರ್ಯ ಹಾಗೂ ಇದಕ್ಕೆ ಸಂಬಂಧಿಸಿದಂತೆ ದಾಖಲು ಮಾಡಿಕೊಂಡಿರುವ ತನ್ನ ಹೇಳಿಕೆ ಕಾನೂನು ಬಾಹಿರ ಎಂದು ಆದೇಶಿಸುವಂತೆ ಕೋರಿ ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ನಟೇಶ್ ಅವರನ್ನು ಪ್ರತಿನಿಧಿಸಿದ್ದ ಸಂದೇಶ್ ಚೌಟ ಅವರು “ಜಾರಿ ನಿರ್ದೇಶನಾಲಯವು ಮೊದಲಿಗೆ ಸಮನ್ಸ್ ನೀಡದೇ ಕಾನೂನುಬಾಹಿರವಾಗಿ ಅಕ್ಟೋಬರ್ 28 ಮತ್ತು 29ರಂದು ಶೋಧ ಮತ್ತು ಜಪ್ತಿ ಮಾಡಿದೆ. ಆನಂತರ ಅಕ್ಟೋಬರ್ 29ರ ಸಂಜೆ 4 ಗಂಟೆಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಇದು ಕಾನೂನುಬಾಹಿರವಾಗಿದೆ” ಎಂದರು.
“ಪಿಎಂಎಲ್‌ಎ ಸೆಕ್ಷನ್ 17ರ ಅಡಿ ಅಡಿ ಶೋಧ ಮತ್ತು ಜಪ್ತಿ ಮಾಡಲು ಅಧಿಕಾರಿಗಳಿಗೆ ಜಾರಿ ನಿರ್ದೇಶನಾಲಯದ ನಿರ್ದೇಶಕರು ಅಥವಾ ಉಪನಿರ್ದೇಶಕರು ಮಾತ್ರ ಅನುಮತಿಸಬಹುದು. ಆದರೆ, ಇಲ್ಲಿ ಜಂಟಿ ನಿರ್ದೇಶಕರು ಅನುಮತಿ ನೀಡಿದ್ದಾರೆ. ಹೀಗಾಗಿ, ಇದು ಅಕ್ರಮವಾಗಿದೆ” ಎಂದರು.
“ಅಕ್ಟೋಬರ್ 28ರಂದು ಇ ಡಿಯ ಸಹಾಯಕ ನಿರ್ದೇಶಕರು ನಟೇಶ್ ಅವರಿಗೆ ಶೋಧ ವಾರೆಂಟ್ ತೋರಿಸಿದ್ದಾರೆ. ಅಕ್ಟೋಬರ್ 29ರಂದು ಪಿಎಂಎಲ್ ಕಾಯಿದೆ ಸೆಕ್ಷನ್ 17ರ ಅಡಿ ನಟೇಶ್ ಅವರ ಪ್ರಮಾಣಿತ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನಟೇಶ್ ಮನೆಯಲ್ಲಿ ಏನನ್ನೂ ಜಪ್ತಿ ಮಾಡದೇ ಅವರ ಹೇಳಿಕೆ ದಾಖಲಿಸಿಕೊಂಡಿರುವುದು ಕಾನೂನುಬಾಹಿರವಾಗಿದೆ. ಇಲ್ಲಿ ಒಂದರ ಹಿಂದೆ ಒಂದರಂತೆ ಕಾನೂನುಬಾಹಿರ ಕ್ರಮ ಮುಂದುವರಿಸಲಾಗಿದೆ” ಎಂದು ಆಕ್ಷೇಪಿಸಿದರು.
“ಅಕ್ಟೋಬರ್ 29ರಂದು ಶೋಧ ಕಾರ್ಯ ಮುಗಿದ ಬಳಿಕ ಸಂಜೆ 4 ಗಂಟೆಗೆ ಇ ಡಿ ಕಾರ್ಯಾಲಯಕ್ಕೆ ವಿಚಾರಣೆಗೆ ಬರುವಂತೆ ಮೊದಲ ಬಾರಿಗೆ ಹ್ಯಾಂಡ್ ಸಮನ್ಸ್ ನೀಡಲಾಗಿತ್ತು. ಈ ಸಮನ್ಸ್ ಏತಕ್ಕಾಗಿ ನೀಡಲಾಗಿದೆ? ಸಾಕ್ಷ್ಯ ನೀಡಲೋ ಅಥವಾ ದಾಖಲೆ ಸಲ್ಲಿಸಲೋ ಎಂಬುದನ್ನು ಹೇಳಿಲ್ಲ. ಇದು ಪಿಎಂಎಲ್‌ಎ ಸೆಕ್ಷನ್ 50ಕ್ಕೆ ವಿರುದ್ಧವಾಗಿದೆ. ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ಅಕ್ಟೋಬರ್ 29ರಂದು ಸಂಜೆ 5.30ಕ್ಕೆ ಇಡಿ ಕಾರ್ಯಾಲಯಕ್ಕೆ ಹೋದರೂ ಯಾವುದೇ ಸಾಕ್ಷ್ಯ ದಾಖಲಿಸಿಲ್ಲ. ಆನಂತರ ನವೆಂಬರ್ 6ರಂದು ಇ ಡಿ ಎರಡನೇ ಸಮನ್ಸ್ ನೀಡಿತ್ತು. ಅಂದು ಇ ಡಿ ಕಚೇರಿಗೆ ಹೋದಾಗಲು ಹಳೆಯ ಪ್ರಶ್ನೆಗಳನ್ನು ಕೇಳಿದ್ದರು. ಮೂರನೇ ಬಾರಿಗೆ ತನಿಖೆಗೆ ಬರುವಂತೆ ಇ ಡಿ ಕಚೇರಿಯಿಂದ ಕರೆ ಬಂದಿತ್ತು. ಹೀಗಾಗಿ, ನ್ಯಾಯಾಲಯದ ಮೆಟ್ಟಿಲೇರಿದ್ದೇವೆ” ಎಂದು ನ್ಯಾಯಾಲಯಕ್ಕೆ ವಿವರಿಸಿದರು.
“ವ್ಯಾಪ್ತಿ ಹೊಂದಿದ ಅಧಿಕಾರಿಗೆ ವ್ಯಾಪ್ತಿ ಹೊಂದಿರುವ ಅಧಿಕಾರಿ ತನಿಖೆಗೆ ಅನುಮತಿಸಬೇಕು ಮತ್ತು ಅಪರಾಧದ ತನಿಖಾ ಪ್ರಕ್ರಿಯೆ ಮುಂದುವರಿಸಲು ಸಕಾರಣಗಳನ್ನು ಒದಗಿಸಬೇಕು. ನಿರ್ದಿಷ್ಟ ದಾಖಲೆ ಮತ್ತು ವಸ್ತು ಇಟ್ಟುಕೊಂಡು ನಟೇಶ್ ಅವರ ಹೇಳಿಕೆ ದಾಖಲಿಸಬೇಕಿತ್ತು. ಅದನ್ನು ಮಾಡಲಾಗಿಲ್ಲ. ಹೀಗಾಗಿ, ಇದು ಕಾನೂನುಬಾಹಿರ” ಎಂದು ವಾದಿಸಿದರು.
ಸಮಯದ ಅಭಾವದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿದೆ.