ಸುಪ್ರೀಂ ಕೋರ್ಟ್ ಮತ್ತು ಇ ಡಿ
ಸುಪ್ರೀಂ ಕೋರ್ಟ್ ಮತ್ತು ಇ ಡಿ

ವಿಚಾರಣೆ ಇಲ್ಲದೆ ವ್ಯಕ್ತಿಗಳನ್ನು ಇ ಡಿ ಅನಿರ್ದಿಷ್ಟ ಕಾಲ ಜೈಲಿನಲ್ಲಿಡುವಂತಿಲ್ಲ: ಸುಪ್ರೀಂ ಕೋರ್ಟ್

ಅನಿರ್ದಿಷ್ಟವಾಗಿ ತನಿಖೆ ಮುಂದುವರಿಸುವ ಇ ಡಿಯ ಕ್ರಮ ನ್ಯಾಯಾಲಯವನ್ನು ಕಾಡುತ್ತಿದ್ದು ತಾನು ಈ ಅಂಶವನ್ನು ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಎಚ್ಚರಿಕೆ ನೀಡಿತು.

ಪೂರಕ ಆರೋಪಪಟ್ಟಿ ಸಲ್ಲಿಸಿ ತನಿಖೆ ಮುಂದುವರಿಸುವ ಮೂಲಕ ಆರೋಪಿಗಳಿಗೆ ಡಿಫಾಲ್ಟ್ ಜಾಮೀನು ದೊರೆಯದಂತೆ ಮಾಡುವ ಜಾರಿ ನಿರ್ದೇಶನಾಲಯ (ಇ ಡಿ) ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.

ಅನಿರ್ದಿಷ್ಟವಾಗಿ ತನಿಖೆ ಮುಂದುವರಿಸಿ ವಿಚಾರಣೆಯಿಲ್ಲದೆ ಆರೋಪಿಗಳನ್ನು ಜೈಲಿನಲ್ಲಿಡುವ ಇ ಡಿಯ ಅಭ್ಯಾಸವು ನ್ಯಾಯಾಲಯವನ್ನು ಕಾಡುತ್ತಿದ್ದು ತಾನು ಈ ಅಂಶವನ್ನು ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಎಚ್ಚರಿಕೆ ನೀಡಿತು.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಸಹಾಯಕ ಎನ್ನಲಾದ ಪ್ರೇಮ್ ಪ್ರಕಾಶ್ ಎಂಬುವವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಡಿಫಾಲ್ಟ್‌ ಜಾಮೀನಿನ ಪ್ರಮುಖ ಉದ್ದೇಶ ತನಿಖೆ ಪೂರ್ಣಗೊಳ್ಳುವವರೆಗೆ ಬಂಧಿಸಬಾರದು ಎಂದು. ತನಿಖೆ ಮುಗಿಯದೇ ವಿಚಾರಣೆ ಆರಂಭವಾಗದು ಎಂದು ಇ ಡಿ ಹೇಳಲು ಸಾಧ್ಯವಿಲ್ಲ. ಇ ಡಿ ಪೂರಕ ಆರೋಪಪಟ್ಟಿ ಸಲ್ಲಿಸುತ್ತಲೇ ಇದ್ದು ವ್ಯಕ್ತಿ ವಿಚಾರಣೆ ಇಲ್ಲದೇ ಸೆರೆವಾಸ ಅನುಭವಿಸುತ್ತಲೇ ಇರುವಂತಿಲ್ಲ. ಪ್ರಸ್ತುತ ಪ್ರಕರಣದಲ್ಲಿ ವ್ಯಕ್ತಿಯು 18 ತಿಂಗಳ ಕಾಲ ಜೈಲಿನಲ್ಲಿದ್ದಾರೆ. ಇದು ನ್ಯಾಯಾಲಯವನ್ನು ಕಾಡುತ್ತಿರುವ ಸಂಗತಿ. ಯಾವುದಾದರೂ ಪ್ರಕರಣದಲ್ಲಿ ನ್ಯಾಯಾಲಯ ಈ ಅಂಶವನ್ನು ಕೈಗೆತ್ತಿಕೊಳ್ಳಲಿದ್ದು ಆಗ ಅದರಲ್ಲಿ ನಿಮಗೆ ನೋಟಿಸ್‌ ನೀಡಲಾಗುತ್ತದೆ. ವ್ಯಕ್ತಿಯನ್ನು ಬಂಧಿಸುತ್ತಿದ್ದಂತೆಯೇ ವಿಚಾರಣೆ ಆರಂಭವಾಗಬೇಕು ಎಂದು ನ್ಯಾಯಾಲಯ ಇ ಡಿ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರಿಗೆ ತಿಳಿಸಿತು.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ

ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಪ್ರಕಾರ ನಿಗದಿಪಡಿಸಿದ ಗಡುವಿನೊಳಗೆ ಅಂದರೆ ಸಾಮಾನ್ಯವಾಗಿ 60ರಿಂದ 90 ದಿನದೊಳಗೆ ತನಿಖಾಧಿಕಾರಿಗಳು ತನಿಖೆ ಪೂರ್ಣಗೊಳಿಸಲು ಅಥವಾ ಆರೋಪಪಟ್ಟಿ ಇಲ್ಲವೇ ಅಂತಿಮ ವರದಿ ಸಲ್ಲಿಸಲು ಸಾಧ್ಯವಾಗದಿದ್ದಾಗ ಬಂಧಿತ ಆರೋಪಿ ಶಾಸನಬದ್ಧ ಡಿಫಾಲ್ಟ್ ಜಾಮೀನಿಗೆ ಅರ್ಹನಾಗುತ್ತಾನೆ.

ಆದರೆ ತನಿಖೆ ಪೂರ್ಣಗೊಳದಿದ್ದಾಗ ಆರೋಪಿಗೆ ಡಿಫಾಲ್ಟ್‌ ಜಾಮೀನು ದೊರೆಯದಂತೆ ಮಾಡಲು ತನಿಖಾಧಿಕಾರಿ ಅನೇಕ ಸಂದರ್ಭಗಳಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸುವುದುಂಟು.

ತನ್ನ ಸಹವರ್ತಿಗಳೊಂದಿಗೆ ಸೇರಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಭಾರೀ ವಹಿವಾಟು ನಡೆಸಿದ ಆರೋಪ ಪ್ರಕಾಶ್‌ ಅವರ ಮೇಲಿತ್ತು.

ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿರುವ ನ್ಯಾಯಾಲಯ, ಮಧ್ಯಂತರ ಜಾಮೀನು ನೀಡಬೇಕೆ ಅಥವಾ ಬೇಡವೇ ಎಂದು ಅಂದು ನಿರ್ಧರಿಸಲಿದೆ.

Related Stories

No stories found.
Kannada Bar & Bench
kannada.barandbench.com