
ಪಿಎಂಎಲ್‌ಎ ಸಿಂಧುತ್ವ ಪ್ರಶ್ನಿಸಿ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಸಲ್ಲಿಸಿದ್ದ ಅರ್ಜಿ ಹಾಗೂ ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್‌ಗೆ (ಬಿಪಿಎಸ್ಎಲ್) ಸಂಬಂಧಿಸಿದ ಪ್ರಕರಣವನ್ನು ಗುರುವಾರ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇ ಡಿ ತನಿಖೆ ನಡೆಸಿದ ಪ್ರಕರಣಗಳಲ್ಲಿ ಶಿಕ್ಷೆ ದೊರೆಯುತ್ತಿರುವ ಪ್ರಮಾಣ ಕಡಿಮೆ ಇರುವುದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ವಿವಿಧ ಪ್ರಶ್ನೆಗಳನ್ನು ಕೇಳಿತು. ಅಲ್ಲದೆ ಇ ಡಿ ವಂಚಕನಂತೆ ವರ್ತಿಸಲು ಸಾಧ್ಯವಿಲ್ಲ ಅದರ ವರ್ಚಸ್ಸಿನ ಬಗ್ಗೆ ತನಗೆ ಕಳವಳ ಇದೆ ಎಂದಿತು.
ಬಿಪಿಎಸ್ಎಲ್ ಪ್ರಕರಣ
ಭೂಷಣ್ ಪವರ್ ಅಂಡ್ ಸ್ಟೀಲ್ ಲಿಮಿಟೆಡ್‌ಗಾಗಿ (ಬಿಪಿಎಸ್ಎಲ್) ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪೆನಿಗೆ ದೊರೆಯಬೇಕಿದ್ದ ಪರಿಹಾರ ಯೋಜನೆಯನ್ನು ತಿರಸ್ಕರಿಸಿದ್ದ ಆದೇಶದ ವಿರುದ್ಧದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಹಾಗೂ ವಿನೋದ್ ಚಂದ್ರನ್ ಅವರಿದ್ದ ಪೀಠ ಅಪರಾಧ ಸಾಬೀತಾಗದಿದ್ದರೂ ಇ ಡಿ ಆರೋಪಿಗಳನ್ನು ವರ್ಷಗಟ್ಟಲೆ ಜೈಲಿನಲ್ಲಿಡುತ್ತಿದೆ ಎಂದು ಟೀಕಿಸಿತು.
ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗದಿದ್ದರೂ ಇ ಡಿ ವರ್ಷಗಟ್ಟಲೆ ವಿಚಾರಣೆ ಇಲ್ಲದೆ ಅವರಿಗೆ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಸಿಜೆಐ ಬಿ ಆರ್ ಗವಾಯಿ ಟೀಕಿಸಿದರು. ಇ ಡಿ ನಡೆಯನ್ನು ಸಾಲಿಸಿಟರ್ ಜನರಲ್ ಸಮರ್ಥಿಸಿಕೊಂಡರು. ಆದರೆ ಇದರಿಂದ ನ್ಯಾಯಾಲಯ ತೃಪ್ತವಾಗಲಿಲ್ಲ.
ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗದಿದ್ದರೂ ಇ ಡಿ ವರ್ಷಗಟ್ಟಲೆ ವಿಚಾರಣೆ ಇಲ್ಲದೆ ಅವರಿಗೆ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗುತ್ತಿದೆ.
ಸುಪ್ರೀಂ ಕೋರ್ಟ್
ಪಿಎಂಎಲ್‌ಎ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ
ಪಿಎಂಎಲ್‌ಎ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು, ಜಾರಿ ನಿರ್ದೇಶನಾಲಯ ಕಪಟಿಯಂತೆ ವರ್ತಿಸಬಾರದು. ಅದರ ವರ್ತನೆ ಕಾನೂನಿನ ಚೌಕಟ್ಟಿನೊಳಗೆ ಇರಬೇಕು ಎಂದು ಸುಪ್ರೀಂ ಕೋರ್ಟ್ ನುಡಿಯಿತು.
ಹಣ ವರ್ಗಾವಣೆ ತಡೆ ಕಾಯಿದೆ ಅಡಿಯಲ್ಲಿ ಇಡಿಗೆ ನೀಡಿದ್ದ ವ್ಯಾಪಕ ಅಧಿಕಾರದ ಸಾಂವಿಧಾನಿಕ ಸಿಂಧುತ್ವ ಎತ್ತಿಹಿದಿದ್ದ ವಿಜಯ್ ಮದನ್‌ಲಾಲ್ ಚೌಧರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದ ತೀರ್ಪಿನ ವಿರುದ್ಧದ ಮರುಪರಿಶೀಲನಾ ಅರ್ಜಿ ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ , ಉಜ್ಜಲ್ ಭುಯಾನ್ ಹಾಗೂ ಎನ್ ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ಇ ಡಿಯ ವರ್ಚಸ್ಸಿನ ಬಗ್ಗೆ ಆತಂಕ ಇದೆ ಎಂದಿತು.
ಇ ಡಿ ವಂಚಕನಂತೆ ವರ್ತಿಸಬಾರದು ಅದು ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ಕಾನೂನು ಜಾರಿ ಅಧಿಕಾರಿಗಳು ಮತ್ತು ಕಾನೂನು ಉಲ್ಲಂಘಿಸುವವರ ನಡುವೆ ವ್ಯತ್ಯಾಸ ಇದೆ.
ಇ ಡಿ ವಂಚಕನಂತೆ ವರ್ತಿಸಬಾರದು ಅದು ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ಕಾನೂನು ಜಾರಿ ಅಧಿಕಾರಿಗಳು ಮತ್ತು ಕಾನೂನು ಉಲ್ಲಂಘಿಸುವವರ ನಡುವೆ ವ್ಯತ್ಯಾಸ ಇದೆ ಸಂಸತ್ತಿನಲ್ಲಿ ಸಚಿವರೊಬ್ಬರು ಹೇಳಿದ್ದ ಮಾತು ನಿಜವಾಗುವಂತಹ ಪ್ರಕರಣಗಳು ನ್ಯಾಯಾಲಯಕ್ಕೆ ಕಂಡುಬರುತ್ತಿವೆ. 5000 ಪ್ರಕರಣಗಳಲ್ಲಿ 10ಕ್ಕಿಂತ ಕಡಿಮೆ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ದೊರೆತಿದೆ. ಇ ಡಿ ವರ್ಚಸ್ಸಿನ ಬಗ್ಗೆಯೂ ಆತಂಕ ವ್ಯಕ್ತವಾಗುತ್ತಿದೆ ಎಂದು ಅದು ಮಾರ್ಮಿಕವಾಗಿ ನುಡಿಯಿತು. ಇ ಡಿ ನಡೆಯನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಸಮರ್ಥಿಸಿಕೊಂಡರು.