ದೆಹಲಿ ಅಬಕಾರಿ ನೀತಿ ಪ್ರಕರಣ: ಸಮನ್ಸ್ ಪಾಲಿಸಿಲ್ಲ ಎಂದು ಕೇಜ್ರಿವಾಲ್ ವಿರುದ್ಧ ದೆಹಲಿ ಕೋರ್ಟ್ ಮೆಟ್ಟಿಲೇರಿದ ಇ ಡಿ

ದೆಹಲಿ ಅಬಕಾರಿ ನೀತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ 2023ರ ನವೆಂಬರ್‌ನಿಂದ ವಿವಿಧ ದಿನಾಂಕಗಳಲ್ಲಿ ಇ ಡಿ ಐದು ಸಮನ್ಸ್‌ಗಳನ್ನು ನೀಡಿದ್ದರೂ ಕೇಜ್ರಿವಾಲ್ ಹಾಜರಾಗದೆ ಉಳಿದಿದ್ದಾರೆ.
ED and Arvind Kejriwal
ED and Arvind KejriwalFacebook

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಮನ್ಸ್ ಅನುಪಾಲಿಸದ ಕಾರಣ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ದೆಹಲಿಯ ನ್ಯಾಯಾಲಯದ ಮೆಟ್ಟಿಲೇರಿದೆ.

ಸಮನ್ಸ್, ದಾಖಲೆಗಳ ಸಲ್ಲಿಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ ಅಧಿಕಾರ ನೀಡಿರುವ ಅಕ್ರಮ ಹಣ ವರ್ಗಾವಣೆ ಕಾಯಿದೆಯ ಸೆಕ್ಷನ್ 50 ಅನುಸರಣೆ ಮಾಡದ ಹಿನ್ನೆಲೆಯಲ್ಲಿ ಇ ಡಿ ಪ್ರಕರಣ ದಾಖಲಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಇಂದು ನಡೆಸಿದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಹಾಜರಾಗಿ ಜಾರಿ ನಿರ್ದೇಶನಾಲಯದ ಪರವಾಗಿ ವಾದ ಮಂಡಿಸಿದರು. ನ್ಯಾಯಾಲಯವು ಈ ವಿಷಯವನ್ನು ಫೆಬ್ರವರಿ 7ರಂದು ಹೆಚ್ಚಿನ ಪರಿಗಣನೆಗೆ ಇರಿಸಿದೆ.

ಹಗರಣದ ತನಿಖೆಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರಿಗೆ ವಿವಿಧ ದಿನಾಂಕಗಳಲ್ಲಿ ಐದು ಸಮನ್ಸ್ ನೀಡಿದ್ದರೂ ಕೇಂದ್ರ ಏಜೆನ್ಸಿಯ ಮುಂದೆ ಹಾಜರಾಗಿಲ್ಲ. ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಈಗಾಗಲೇ ಇದೇ ಪ್ರಕರಣದಲ್ಲಿ ಬಂಧನದಲ್ಲಿದ್ದಾರೆ. ಇಡಿ ಹೊರಡಿಸಿದ ಸಮನ್ಸ್ ಅನ್ನು "ರಾಜಕೀಯ ಪ್ರೇರಿತ" ಎಂದು ಎಎಪಿ ಕರೆದಿದ್ದು, ತನಿಖಾ ಸಂಸ್ಥೆಯು ಮುಖ್ಯಮಂತ್ರಿಯವರನ್ನು ಬಂಧಿಸಲು ಯೋಜಿಸುತ್ತಿದೆ ಎಂದು ಆರೋಪಿಸಿದೆ.

2021-22ರ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಆಗಸ್ಟ್ 17, 2022 ರಂದು ದಾಖಲಿಸಿದ ಪ್ರಕರಣದ ನಂತರ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು. ಜುಲೈ 20, 2022ರಂದು ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ನೀಡಿದ ದೂರಿನ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿತ್ತು. ನಂತರ ಆಗಸ್ಟ್ 22, 2022ರಂದು ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಇ ಡಿ ಪ್ರಕರಣ ದಾಖಲಿಸಿದೆ.

Also Read
ಅಬಕಾರಿ ನೀತಿ ಪ್ರಕರಣ: ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಮಧ್ಯಂತರ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ಅಬಕಾರಿ ನೀತಿ ರೂಪಿಸುವ ಹಂತದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಮತ್ತು ಇತರ ಅಪರಿಚಿತ ಮತ್ತು ಅನಾಮಧೇಯ ಖಾಸಗಿ ವ್ಯಕ್ತಿಗಳು / ಸಂಸ್ಥೆಗಳು ಸೇರಿದಂತೆ ಎಎಪಿ ನಾಯಕರು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಬಕಾರಿ ನೀತಿಯಲ್ಲಿ ಉದ್ದೇಶಪೂರ್ವಕವಾಗಿ ಕೈಬಿಟ್ಟ ಅಥವಾ ಸೃಷ್ಟಿಸಲಾದ ನಿಬಂಧನೆಗಳಿಂದ ಈ ಪಿತೂರಿ ಹುಟ್ಟಿಕೊಂಡಿದೆ ಎಂದು ಆರೋಪಿಸಲಾಗಿದೆ. ಟೆಂಡರ್ ಪ್ರಕ್ರಿಯೆಯ ನಂತರ ಕೆಲವು ಪರವಾನಗಿದಾರರು ಮತ್ತು ಸಂಚುದಾರರಿಗೆ ಅನುಕೂಲವಾಗುವಂತೆ ನೀತಿ ರೂಪಿಸಲಾಗಿದೆ ಎಂದು ಆರೋಪಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com