ಫೆಮಾ ಉಲ್ಲಂಘನೆ: ಅಮ್ನೆಸ್ಟಿ ಇಂಟರ್‌ನ್ಯಾಷನಲ್‌, ಆಕಾರ್‌ ಪಟೇಲ್‌ಗೆ ತಲಾ ₹51.72 ಕೋಟಿ, ₹10 ಕೋಟಿ ದಂಡ ವಿಧಿಸಿದ ಇ ಡಿ

ಜಾರಿ ನಿರ್ದೇಶನಾಲಯವು 2018ರ ಅಕ್ಟೋಬರ್‌ನಲ್ಲಿ ಅಮ್ನೆಸ್ಟಿ ಕಚೇರಿಯಲ್ಲಿ ಪರಿಶೀಲನೆ ಮತ್ತು ದಾಳಿ ನಡೆಸಿದ್ದು, ಬಳಿಕ ಖಾತೆಯಿಂದ ಹಣ ಪಡೆಯಲು ಸಾಧ್ಯವಾಗದ ರೀತಿಯಲ್ಲಿ ಅಮ್ನೆಸ್ಟಿ ಖಾತೆಗಳಿಗೆ ನಿರ್ಬಂಧ ವಿಧಿಸುವಂತೆ ಪತ್ರ ಬರೆದಿತ್ತು.
CBI and Aakar Patel
CBI and Aakar Patel

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಮತ್ತು ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಕಾರ್‌ ಪಟೇಲ್‌ ಅವರು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಗೆ (ಫೇಮಾ) ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯವು (ಇ ಡಿ) ತೀರ್ಮಾನಿಸಿದ್ದು, ಇದಕ್ಕೆ ಕ್ರಮವಾಗಿ ₹51.72 ಕೋಟಿ ಮತ್ತು ₹10 ಕೋಟಿ ದಂಡ ವಿಧಿಸಿದೆ.

ಈ ಕುರಿತು ಜಾರಿ ನಿರ್ದೇಶನಾಲಯವು ತನ್ನ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಿದೆ. “ಅಮ್ನೆಸ್ಟಿ ಇಂಡಿಯಾ ಇಂಟರ್‌ನ್ಯಾಷನಲ್‌ ಪ್ರೈ. ಲಿ ಮತ್ತು ಅದರ ಕಾರ್ಯನಿರ್ವಹಣಾಧಿಕಾರಿ ಆಕಾರ್‌ ಪಟೇಲ್‌ ಅವರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಲ್ಲಿನ ನ್ಯಾಯ ನಿರ್ಣಯ ಕ್ರಮಕೈಗೊಳ್ಳುವ ಪ್ರಾಧಿಕಾರವು ಫೇಮಾ ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಹಿನ್ನೆಲೆಯಲ್ಲಿ ಕ್ರಮವಾಗಿ ₹51.72 ಕೋಟಿ ಮತ್ತು ₹10 ಕೋಟಿ ದಂಡ ವಿಧಿಸಿದೆ” ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

2020ರ ಸೆಪ್ಟೆಂಬರ್‌ನಲ್ಲಿ ತನ್ನ ಖಾತೆಗಳನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. 2018ರ ಅಕ್ಟೋಬರ್‌ 25ರಂದು ಶೋಧನಾ ವಾರೆಂಟ್‌ ಆಧರಿಸಿ ಜಾರಿ ನಿರ್ದೇಶನಾಲಯವು ಅಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಕಚೇರಿಯಲ್ಲಿ ಶೋಧನೆ ಮತ್ತು ದಾಳಿ ಮಾಡಿತ್ತು.

ಇದರ ಬೆನ್ನಿಗೇ ಅಮ್ನೆಸ್ಟಿ ಖಾತೆಯಿಂದ ಹಣ ಪಡೆಯಲು ಸಾಧ್ಯವಾಗದ ರೀತಿಯಲ್ಲಿ ಅಮ್ನೆಸ್ಟಿ ಖಾತೆಗಳಿಗೆ ನಿರ್ಬಂಧ ವಿಧಿಸುವಂತೆ ಬ್ಯಾಂಕ್‌ಗಳಿಗೆ ಇ ಡಿ ಪತ್ರ ಬರೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಅಮ್ನೆಸ್ಟಿಗೆ ಯಾವುದೇ ಪತ್ರ ನೀಡಿರಲಿಲ್ಲ ಎಂದು ಸಂಸ್ಥೆಯು ಆರೋಪಿಸಿತ್ತು.

ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದ ಅಮ್ನೆಸ್ಟಿಗೆ ದಿನನಿತ್ಯದ ಖರ್ಚು ಮತ್ತು ವೇತನ, ಇತರೆ ಖರ್ಚುಗಳಿಗೆ ಖಾತೆಯಿಂದ ಹಣ ಪಡೆಯಬಹುದು ಎಂದು 2020ರ ನವೆಂಬರ್‌ನಲ್ಲಿ ಆದೇಶಿಸಿತ್ತು.

ಅಮ್ನೆಸ್ಟಿಯು ಫೇಮಾ ಉಲ್ಲಂಘಿಸಿದೆ ಎಂದು ಮಧ್ಯಂತರ ವರದಿ ಜೊತೆಗೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ 2018ರ ಡಿಸೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯವು ಪತ್ರ ಬರೆದಿತ್ತು. ಇದನ್ನು ಆಧರಿಸಿ ಗೃಹ ಕಾರ್ಯದರ್ಶಿಯು ಕಾನೂನಿನ ಪ್ರಕಾರ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿದ್ದರು. ಇದನ್ನು ಆಧರಿಸಿ 2019ರಲ್ಲಿ ಸಿಬಿಐ ಎಫ್‌ಸಿಆರ್‌ಎ ಸೆಕ್ಷನ್‌ಗಳಾದ 11, 35, ಮತ್ತು 39ರ ಅಡಿ ಪ್ರಕರಣ ದಾಖಲಿಸಿತ್ತು.

Related Stories

No stories found.
Kannada Bar & Bench
kannada.barandbench.com