ದೆಹಲಿ ಅಬಕಾರಿ ನೀತಿ ಪ್ರಕರಣ: ಎಎಪಿ ಮತ್ತು ಕೇಜ್ರಿವಾಲ್ ಅವರನ್ನು ಆರೋಪಿಗಳನ್ನಾಗಿಸಿ ಚಾರ್ಜ್‌ಶೀಟ್‌ ಸಲ್ಲಿಸಿದ ಇ ಡಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದೆ. ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಇ ಡಿ ಬಂಧಿಸಿತ್ತು.
Arvind Kejriwal with Excise Policy Case
Arvind Kejriwal with Excise Policy Case

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಔಪಚಾರಿಕವಾಗಿ ಆರೋಪಿಗಳನ್ನಾಗಿಸಿ ಜಾರಿ ನಿರ್ದೇಶನಾಲಯ (ಇ ಡಿ) ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯಕ್ಕೆ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ.

ಇದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಎಂಟನೇ ಆರೋಪಪಟ್ಟಿಯಾಗಿದೆ. ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ನಾಯಕಿ ಕೆ ಕವಿತಾ ಹಾಗೂ ಇತರ ನಾಲ್ವರನ್ನು ಆರೋಪಿಗಳೆಂದು ಹೆಸರಿಸಿ ಮೇ 10ರಂದು ಇ ಡಿ ಏಳನೇ ಆರೋಪಪಟ್ಟಿ ಸಲ್ಲಿಸಿತ್ತು.

ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಬಳಿಕ ತಿಹಾರ್ ಜೈಲಿನಲ್ಲಿದ್ದ ಅವರನ್ನು ಲೋಕಸಭೆ ಚುನಾವಣೆಯ ಸಮಯದಲ್ಲಿ ಎಎಪಿ ಪರ ಪ್ರಚಾರ ಮಾಡಲು ಅನುವು ಮಾಡಿಕೊಡುವ ಸಲುವಾಗಿ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕವಿತಾ ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಾರ್ಚ್ 15ರಂದು ಹೈದರಾಬಾದ್‌ನಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಅವರನ್ನು ಬಂಧಿಸಿತ್ತು.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ನೀಡಿದ ದೂರಿನ ಮೇರೆಗೆ 2022ರಲ್ಲಿ ಸಿಬಿಐ ದಾಖಲಿಸಿದ ಪ್ರಕರಣದಿಂದ ಇ ಡಿಯ ಅಕ್ರಮ ಹಣ ವರ್ಗಾವಣೆ ತನಿಖೆ ಆರಂಭವಾಗಿತ್ತು.

ಕೆಲವು ಮದ್ಯ ಮಾರಾಟಗಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ 2021-22ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಇತರ ಎಎಪಿ ನಾಯಕರು ಕ್ರಿಮಿನಲ್ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು.

ಸಿಬಿಐ ಮತ್ತು ಇ ಡಿ ಪ್ರಕಾರ, ದಕ್ಷಿಣ ಭಾರತದ ಕೆಲ ವ್ಯಕ್ತಿಗಳು ಇಲ್ಲವೇ ಗುಂಪು ಈ ಪ್ರಕ್ರಿಯೆಯಲ್ಲಿ ಲಾಭ ಪಡೆದಿದ್ದು ಆ ಲಾಭದ ಸ್ವಲ್ಪ ಮೊತ್ತವನ್ನು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ನೀಡಲಾಯಿತು. ಪಕ್ಷ ಆ ಮೊತ್ತವನ್ನು ಗೋವಾ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಬಳಸಿತು.

Kannada Bar & Bench
kannada.barandbench.com