ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಬೈಪಾಸ್ ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಕೋರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎಂ ಎಂ ಸುಂದರೇಶ್ ಅವರಿದ್ದ ಪೀಠದೆದುರು ಪ್ರಸ್ತಾಪಿಸಿದರು. ಪ್ರಕರಣವನ್ನು ಬುಧವಾರ ವಿಚಾರಣೆ ನಡೆಸುವುದಾಗಿ ಪೀಠ ತಿಳಿಸಿತು.
ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರದಲ್ಲಿ ಸಂಪುಟ ಸಚಿವರಾಗಿರುವ ಬಾಲಾಜ ಅವರನ್ನು ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಲಂಚ ಪಡೆದಿದ್ದ ಪ್ರಕರಣದಲ್ಲಿ ಇ ಡಿ ಬಂಧಿಸಿತ್ತು. 2011ರಿಂದ 2015ರವರೆಗೆ ಎಐಎಡಿಎಂಕೆ ಸರ್ಕಾರದ ಸಚಿವರಾಗಿದ್ದ ವೇಳೆ ಅವರ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು.
ಬಂಧನಕ್ಕೊಳಗಾದ ತಕ್ಷಣ ಬಾಲಾಜಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಕರೋನರಿ ಆಂಜಿಯೋಗ್ರಾಂ ಪರೀಕ್ಷೆ ನಡೆಸಲಾಗಿತ್ತು. ನ್ಯಾಯಾಧೀಶ ಅಳ್ಳಿ ಅವರು ಸಚಿವರನ್ನು ಜೂನ್ 28ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲು ಆದೇಶಿಸುವುದಕ್ಕೂ ಮುನ್ನ ಬಾಲಾಜಿ ಅವರ ಆರೋಗ್ಯ ಸ್ಥಿತಿ ಪರಿಶೀಲಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಸಚಿವ ಬಾಲಾಜಿ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ಅವರು ಅನುಮತಿಸಿದ್ದರು.
ಇತ್ತ ಬಾಲಾಜಿ ಅವರ ಪತ್ನಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಜೂನ್ 15ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ನೀಡಿದ ಅನುಮತಿಯಂತೆ ಸಚಿವರು ಖಾಸಗಿ ವೈದ್ಯಕೀಯ ಸಂಸ್ಥೆಯಾದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.
ತರುವಾಯ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಸಚಿವರನ್ನು ಕಸ್ಟಡಿ ವಿಚಾರಣೆಗೆ ಒಳಪಡಿಸಲು ಇ ಡಿಗೆ ಅನುಮತಿ ನೀಡಿದರು. ಆದರೆ ವಿಚಾರಣೆ ಆಸ್ಪತ್ರೆಯಲ್ಲಿಯೇ ನಡೆಯಬೇಕು ಎಂದು ಅವರು ಸೂಚಿಸಿದ್ದರು.