
ಜಾರಿ ನಿರ್ದೇಶನಾಲಯವು (ಇ ಡಿ) ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಪ್ರಸರಣ ಮಾಡುವ ಮಾಹಿತಿಯು ನಿಖರವಾಗಿಯೂ, ರೋಚಕತೆಯಿಂದ ಹೊರತಾಗಿಯೂ ಇರುವಂತೆ ಖಾತರಿಪಡಿಸಿಕೊಳ್ಳುವ ಮೂಲಕ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ದೆಹಲಿ ನ್ಯಾಯಾಲಯವೊಂದು ಇ ಡಿ ಗೆ ಎಚ್ಚರಿಸಿದೆ.
ವಾಸ್ತವಾಂಶಗಳನ್ನು ಪ್ರಸ್ತುತಪಡಿಸುವಾಗ ದಾರಿತಪ್ಪಿಸುವ ರೀತಿಯಲ್ಲಿ ಅಥವಾ ಮಾನಹಾನಿಕರ ರೀತಿಯಲ್ಲಿ ಅವುಗಳನ್ನು ಪ್ರಸ್ತುತಪಡಿಸಿದರೆ ಅದು ಸಂಸ್ಥೆಯ (ಇ ಡಿ) ಘನತೆಗೆ ಧಕ್ಕೆ ತರುವುದರ ಜೊತೆಗೆ ಸಂಬಂಧಪಟ್ಟ ವ್ಯಕ್ತಿಯ ಘನತೆಯ ಹಕ್ಕಿನ ಮೇಲೂ ಪರಿಣಾಮ ಬೀರುತ್ತದೆ ಎಂದು ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ (ಸಂಸದ/ಶಾಸಕ ಪ್ರಕರಣಗಳು) ಜಿತೇಂದ್ರ ಸಿಂಗ್ ಹೇಳಿದ್ದಾರೆ.
"ಇ ಡಿ ಯಂತಹ ತನಿಖಾ ಸಂಸ್ಥೆಯು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದು ಹಾಗೂ ನ್ಯಾಯಯುತವೂ, ಸಮಂಜಸವೂ ಅದ ಪ್ರಕ್ರಿಯೆಗಳನ್ನು ಅನುಸರಿಸುವ ಹೊಣೆಗಾರಿಕೆಯನ್ನು ಹೊಂದಿದೆ. ಇ ಡಿಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಾಗೂ ಅಷ್ಟಕ್ಕೇ ಸೀಮಿತಗೊಳ್ಳದೆ ಇನ್ನಾವುದೇ ವಿಧಾನದಲ್ಲಿ ಪ್ರಸರಣ ಮಾಡುವ ಮಾಹಿತಿಯು ನಿಖರವಾಗಿರಬೇಕು, ದಾರಿತಪ್ಪಿಸದ ರೀತಿ ಇರಬೇಕು ಹಾಗೂ ರೋಚಕತೆಯಿಂದ ಮುಕ್ತವಾಗಿರಬೇಕು. ದಾರಿತಪ್ಪಿಸುವಂತಹ, ಹಗರಣಕ್ಕೆಳೆಸುವಂತಹ ಅಥವಾ ಯಾವುದೇ ವ್ಯಕ್ತಿಯ ಮಾನಹಾನಿ ಮಾಡುವಂತಹ ಇಲ್ಲವೇ ರಾಜಕೀಯ ಪೂರ್ವಾಗ್ರಹ ಪೀಡಿತ ಉದ್ದೇಶದಿಂದ ವಾಸ್ತವಾಂಶಗಳನ್ನು ಪ್ರಸ್ತುತಿ ಮಾಡುವುದು ಸಂಸ್ಥೆಯ ಸಮಗ್ರತೆಯನ್ನು ಹಾಳುಮಾಡುವುದಲ್ಲದೆ, ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಘನತೆಯ ಹಕ್ಕನ್ನು ಒಳಗೊಂಡಂತೆ ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು" ಎಂದು ನ್ಯಾಯಾಲಯ ಹೇಳಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿಯ ಮಾಜಿ ಸಚಿವ ಸತ್ಯೇಂದರ್ ಜೈನ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಬಾನ್ಸುರಿ ಸ್ವರಾಜ್ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ತಿರಸ್ಕರಿಸುವಾಗ ನ್ಯಾಯಾಲಯ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಆಜ್ ತಕ್ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಬಾನ್ಸುರಿ ಸ್ವರಾಜ್ ಅವರು ಜೈನ್ ಅವರ ಮನೆಯಿಂದ ಇ ಡಿಯು 1.8 ಕೆಜಿ ಚಿನ್ನ, 133 ಚಿನ್ನದ ನಾಣ್ಯಗಳು ಮತ್ತು ₹3 ಕೋಟಿ ನಗದು ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಬಾನ್ಸುರಿ ಅವರ ವಿರುದ್ಧ ಜೈನ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಸ್ವರಾಜ್ ಅವರ ಹೇಳಿಕೆಯು ಇ ಡಿ ಮಾಡಿದ ಟ್ವೀಟ್ ಅನ್ನು ಆಧರಿಸಿತ್ತು. ಇಡಿಯು ತನ್ನ ಟ್ವೀಟ್‌ನಲ್ಲಿ, "ಸತ್ಯೇಂದ್ರ ಕುಮಾರ್ ಜೈನ್ ಮತ್ತು ಇತರರ ಮನೆಯಲ್ಲಿ ಇ ಡಿಯು 6.6.2022 ರಂದು ಪಿಎಂಎಲ್‌ಎ ಅಡಿಯಲ್ಲಿ ಶೋಧ ನಡೆಸಿದೆ. ಈ ವೇಳೆ ವಿವಿಧ ಶಂಖಾಸ್ಪದ ದಾಖಲೆಗಳು, ಡಿಜಿಟಲ್ ದಾಖಲೆಗಳು, ರೂ. 2.85 ಕೋಟಿ ನಗದು ಮತ್ತು ವಿವರಿಸಲಾಗದ ಮೂಲದಿಂದ ಗಳಿಸಿರುವ ಒಟ್ಟು 1.80 ಕೆಜಿ ತೂಕದ 133 ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಮಾಹಿತಿ ನೀಡಿತ್ತು.
ಆದರೆ, ಜೈನ್ ಅವರು ತಮ್ಮ ಮನೆಯಿಂದ ಇ ಡಿಯು ಯಾವುದೇ ನಗದು ಅಥವಾ ಚಿನ್ನವನ್ನು ವಶಪಡಿಸಿಕೊಂಡಿಲ್ಲ ಎಂದು ತಿಳಿಸಿದ್ದರು. ಇ ಡಿ ನಡೆಸಿರುವ ಪಂಚನಾಮೆಯಲ್ಲಿಯೂ ಈ ಅಂಶ ಸ್ಪಷ್ಟವಾಗಿ ದಾಖಲಾಗಿದೆ. ಆದಾಗ್ಯೂ ಬಾನ್ಸುರಿ ಸ್ವರಾಜ್ ತಮ್ಮ ಮನೆಯಿಂದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ಆಪಾದಿಸಿದ್ದರು.
ಪ್ರಕರಣವನ್ನು ಪರಿಗಣಿಸಿದ ನಂತರ, ನ್ಯಾಯಾಧೀಶ ಸಿಂಗ್ ಅವರು ಇ ಡಿಯ ಟ್ವೀಟ್ ಮೂಲಕ ನೀಡಿರುವ ಮಾಹಿತಿಯು ಜೈನ್ ಅವರ ಸ್ಥಳದಿಂದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವ ಅರ್ಥವನ್ನು ಮೇಲ್ನೋಟಕ್ಕೆ ಹೊಮ್ಮಿಸುತ್ತದೆ ಎನ್ನುವುದನ್ನು ಗಮನಿಸಿದರು. ಈ ಹಿನ್ನೆಲೆಯಲ್ಲಿ, ಬಾನ್ಸುರಿ ಸ್ವರಾಜ್ ವಿರುದ್ಧ ಜೈನ್ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದರು.
ಇದೇ ವೇಳೆ, ನ್ಯಾಯಾಧೀಶರು, ಇ ಡಿಗೆ ಇಂತಹ ವಿಷಯಗಳಲ್ಲಿ ವಹಿಸಬೇಕಾದ ಜಾಗ್ರತೆಯ ಕುರಿತು ಎಚ್ಚರಿಕೆ ನೀಡಿದರು. ಜಾರಿ ನಿರ್ದೇಶನಾಲಯ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಮತ್ತು ಮಾಹಿತಿಯ ಯಾವುದೇ ಸ್ವರೂಪದ ಪ್ರಸರಣವು ನಿಖರವಾಗಿರಬೇಕು, ದಾರಿತಪ್ಪಿಸುವಂತಿರಬಾರದು ಮತ್ತು ರೋಚಕತೆಯಿಂದ ಮುಕ್ತವಾಗಿರಬೇಕು ಎಂದು ಹೇಳಿದರು.