ಸಮನ್ಸ್‌ಗೆ ಉತ್ತರಿಸಿದ ಪಿಎಂಎಲ್ಎ ಆರೋಪಿಗಳನ್ನು ಬಂಧಿಸಲು ಇ ಡಿಗೆ ವಿಶೇಷ ನ್ಯಾಯಾಲಯದ ಅನುಮತಿ ಅಗತ್ಯ: ಸುಪ್ರೀಂ

ಮೂಲಭೂತವಾಗಿ, ತನಿಖೆಯ ಸಮಯದಲ್ಲಿ ಬಂಧಿಸದೆ ಇದ್ದ ಆರೋಪಿಯ ವಿರುದ್ಧ ದೂರು ಸಲ್ಲಿಸಿದ ನಂತರ ಪಿಎಂಎಲ್ಎ ಸೆಕ್ಷನ್ 19ರ ಅಡಿಯಲ್ಲಿ ಬಂಧಿಸಲು ಇ ಡಿ ಅಧಿಕಾರಿಗಳು ವಿಶೇಷ ಅಧಿಕಾರ ಬಳಸುವಂತಿಲ್ಲ.
Supreme Court and ED
Supreme Court and ED
Published on

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ದೂರಿನಲ್ಲಿ ವಿಶೇಷ ನ್ಯಾಯಾಲಯ ಸಮನ್ಸ್‌ ನೀಡಿದ ಬಳಿಕ ಹಾಜರಾಗುವ ಆರೋಪಿಯನ್ನು ಆ ನ್ಯಾಯಾಲಯದ ಅನುಮತಿ ಪಡೆಯದೆ ಜಾರಿ ನಿರ್ದೇಶನಾಲಯ (ಇ ಡಿ) ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.

ಅಕ್ರಮ ಹಣ ವರ್ಗಾವಣೆ ತನಿಖೆಯ ಸಂದರ್ಭದಲ್ಲಿ ಇ ಡಿ ಬಂಧಿಸದೆ ಇದ್ದರೂ ವಿಶೇಷ ನ್ಯಾಯಾಲಯ ನೀಡಿದ ಸಮನ್ಸ್‌ಗೆ ಅನುಗುಣವಾಗಿ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವ ಆರೋಪಿ ಪಿಎಂಎಲ್‌ಎ ಸೆಕ್ಷನ್‌ 45ರ ಅಡಿ ಕಠಿಣ ಅವಳಿ ಪರೀಕ್ಷೆ ಈಡೇರಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.

ಸಮನ್ಸ್‌ ಪಡೆದ ವ್ಯಕ್ತಿ ಹಾಜರಾದ ಬಳಿಕ ಇ ಡಿ ಆರೋಪಿಯನ್ನು ವಶಕ್ಕೆ ಪಡೆಯಲು ಬಯಸಿದರೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಅದು ವಶಕ್ಕೆ ಪಡೆಯಬಹುದಾಗಿದೆ.

"ಸಮನ್ಸ್ ಸ್ವೀಕರಿಸಿ ಹಾಜರಾದ ವ್ಯಕ್ತಿಯ ಕಸ್ಟಡಿಯನ್ನು ಇ ಡಿ ಬಯಸಿದರೆ, ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ನಂತರ ಆತನನ್ನು ಕಸ್ಟಡಿಗೆ ಪಡೆಯಬಹುದು. ಕಸ್ಟಡಿ ವಿಚಾರಣೆಯ ಅಗತ್ಯವಿದೆ ಎಂದು ತೃಪ್ತಿಪಡಿಸುವ ಕಾರಣಗಳಿದ್ದರೆ ಮಾತ್ರ ನ್ಯಾಯಾಲಯದ ವಶಕ್ಕೆ ನೀಡಬೇಕು" ಎಂದು ಪೀಠ ಹೇಳಿದೆ.

ಮೂಲಭೂತವಾಗಿ, ತನಿಖೆಯ ಸಮಯದಲ್ಲಿ ಬಂಧಿಸದೆ ಇದ್ದ ಆರೋಪಿಯ ವಿರುದ್ಧ ದೂರು ಸಲ್ಲಿಸಿದ ನಂತರ ಪಿಎಂಎಲ್‌ಎ ಸೆಕ್ಷನ್ 19ರ ಅಡಿಯಲ್ಲಿ ಬಂಧಿಸಲು ಇ ಡಿ ಅಧಿಕಾರಿಗಳು ವಿಶೇಷ ಅಧಿಕಾರ ಬಳಸುವಂತಿಲ್ಲ.

ಕಾಯಿದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧದಲ್ಲಿ ವ್ಯಕ್ತಿ ತಪ್ಪಿತಸ್ಥನೆಂದು "ನಂಬಲು ಕಾರಣ" ಇದ್ದಲ್ಲಿ ಇ ಡಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಬಹುದು ಎಂದು ಸೆಕ್ಷನ್ 19 ಹೇಳುತ್ತದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯು ಇ ಡಿ ದೂರಿನ ಮೇರೆಗೆ ವಿಶೇಷ ನ್ಯಾಯಾಲಯದ ಮುಂದೆ ಹಾಜರಾದ ನಂತರ ಜಾಮೀನಿಗಾಗಿ ಮತ್ತೆಯೂ ಕಠಿಣ ಅವಳಿ ಪರೀಕ್ಷೆ ಎದುರಿಸಬೇಕೇ ಎಂಬ ಪ್ರಶ್ನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ತೀರ್ಪು ಬಂದಿದೆ. ಏಪ್ರಿಲ್ 30ರಂದು ಸುಪ್ರೀಂ ಕೋರ್ಟ್ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.

ಪಿಎಂಎಲ್ಎ ಅಡಿಯಲ್ಲಿ ವಿಶೇಷ ನ್ಯಾಯಾಲಯ ಹೊರಡಿಸಿದ ಸಮನ್ಸ್‌ಗೆ ಅನುಗುಣವಾಗಿ ವಿಶೇಷ ನ್ಯಾಯಾಲಯದ ಮುಂದೆ ಹಾಜರಾದರೆ ಆರೋಪಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ನಿಬಂಧನೆಗಳ ಅಡಿಯಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನೂ ಸುಪ್ರೀಂ ಕೋರ್ಟ್‌ ಆಗ ಎತ್ತಿತ್ತು.

Kannada Bar & Bench
kannada.barandbench.com