ಶೋಧ ನಡೆಸುವಾಗ ಜನರ ಚಲನವಲನ ನಿರ್ಬಂಧಿಸುವ, ಅವರನ್ನು ಬಂಧಿಸುವ ಹಕ್ಕು ಇ ಡಿಗೆ ಇಲ್ಲ: ಪಂಜಾಬ್‌ ಹೈಕೋರ್ಟ್‌

ಕಟ್ಟಡದ ನಿವಾಸಿಗೆ ಶೋಧದ ಸಮಯದಲ್ಲಿ ಹಾಜರಾಗಲು ಅಥವಾ ಉಪಸ್ಥಿತರಿರಲು ಅನುವು ಮಾಡಿಕೊಡುವ ಹಕ್ಕು ನಿಯಮಗಳಲ್ಲಿ ಇದೆಯಾದರೂ ಶೋಧದ ವೇಳೆ ಅವರ ಉಪಸ್ಥಿತಿ ಇರಬೇಕೆಂದು ಬೇಡಿಕೆ ಇಡುವ ಹಕ್ಕು ಇ ಡಿಗೆ ಇಲ್ಲ ಎಂದ ಪೀಠ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಜಾರಿ ನಿರ್ದೇಶನಾಲಯ
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಜಾರಿ ನಿರ್ದೇಶನಾಲಯ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಶೋಧ ಮತ್ತು ಮುಟ್ಟುಗೋಲು ಕಾರ್ಯಾಚರಣೆಯ ಸಮಯದಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ವ್ಯಕ್ತಿಗಳನ್ನು ಆವರಣದೊಳಗೆ ಬಂಧಿಸುವಂತಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಹೇಳಿದೆ (ದಿಲ್ಬಾಗ್ ಸಿಂಗ್ @ ದಿಲ್ಬಾಗ್ ಸಂಧು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಮತ್ತು ಇನ್ನೊಂದು).

ಕಾನೂನುಬಾಹಿರ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳದ ಮಾಜಿ ಶಾಸಕ ದಿಲ್ಬಾಗ್ ಸಿಂಗ್ ಮತ್ತು ಇನ್ನೊಬ್ಬ ಆರೋಪಿ ಕುಲ್ವಿಂದರ್ ಸಿಂಗ್ ಅವರ ಬಂಧನ ಆದೇಶವನ್ನು ತಳ್ಳಿಹಾಕುವಾಗ ನ್ಯಾಯಮೂರ್ತಿ ವಿಕಾಸ್ ಬಹ್ಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಆವರಣವನ್ನು ಶೋಧಿಸುತ್ತಿರುವಾಗ ವ್ಯಕ್ತಿಗಳು ತಮ್ಮ ಕಚೇರಿ / ಕೆಲಸದ ಸ್ಥಳಕ್ಕೆ ಹೋಗುವುದು ಸೇರಿದಂತೆ ದೈನಂದಿನ ಕೆಲಸ ಕಾರ್ಯ ನಿರ್ವಹಿಸುವುದನ್ನು ತಡೆಯುವಂತಿಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ವಿಕಾಸ್ ಬಹ್ಲ್
ನ್ಯಾಯಮೂರ್ತಿ ವಿಕಾಸ್ ಬಹ್ಲ್

ತಮ್ಮ ಆದೇಶ ಪಾಲಿಸದ ಸಂದರ್ಭದಲ್ಲಿ ಯಾವುದೇ ಬೀಗ, ಅಲ್ಮೇರಾವನ್ನು ಇಲ್ಲವೇ ವಸ್ತುಗಳನ್ನು ಸುರಕ್ಷಿತವಾಗಿ ತೆರೆಯಲು ವ್ಯಕ್ತಿಗಳನ್ನು ಒತ್ತಾಯಿಸುವ ಹಕ್ಕು ಇ ಡಿ ಅಧಿಕಾರಿಗಳಿಗೆ ಇದ್ದರೂ, "ಆ ವ್ಯಕ್ತಿಗಳ ಚಲನವಲನಗಳನ್ನು ನಿರ್ಬಂಧಿಸುವ ಹಕ್ಕು ಅವರಿಗೆ ಇಲ್ಲ" ಎಂದು ನ್ಯಾಯಾಲಯ ಹೇಳಿದೆ. 

ಅರ್ಜಿದಾರರಾದ ದಿಲ್ಬಾಗ್ ಸಿಂಗ್ ಮತ್ತು ಕುಲ್ವಿಂದರ್ ಸಿಂಗ್ ಅವರು ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿಯಲ್ಲಿ ಈ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿ ಇ ಡಿ ವಶಕ್ಕೆ ನೀಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದರು.

ಬಂಧನ ಕಾನೂನುಬಾಹಿರವೇ ಎಂಬ ಕುರಿತು ನಿಯಮಗಳನ್ನು ಪರಿಶೀಲಿಸಿದ ನ್ಯಾಯಾಲಯ ಕಟ್ಟಡದ ನಿವಾಸಿಗೆ ಶೋಧದ ಸಮಯದಲ್ಲಿ ಹಾಜರಾಗಲು ಅಥವಾ ಉಪಸ್ಥಿತರಿರಲು ಅನುವು ಮಾಡಿಕೊಡುವ ಹಕ್ಕು ನಿಯಮಗಳಲ್ಲಿ ಇದೆಯಾದರೂ ಶೋಧದ ವೇಳೆ ಅವರ ಉಪಸ್ಥಿತಿ ಇರಬೇಕೆಂದು ಬೇಡಿಕೆ ಇಡುವ ಹಕ್ಕು ಇ ಡಿ ಗೆ ಇಲ್ಲ ಎಂದಿತು.

"ಈ ನಿಬಂಧನೆಯನ್ನು ಓದಿದಾಗ ಕಟ್ಟಡದ ನಿವಾಸಿಯನ್ನು ಶೋಧಕ್ಕೆ ಹಾಜರಾಗಿ ಎಂದು ಒತ್ತಾಯಿಸುವಂತಿಲ್ಲ ಮತ್ತು ಶೋಧ ಮುಗಿಯುವವರೆಗೂ ಆವರಣದಲ್ಲೇ ಇರಿ ಎಂದು ಹೇಳುವಂತಿಲ್ಲ" ಎಂದು ಅದು ತಿಳಿಸಿದೆ.

ಕೀಲಿಗಳನ್ನು ಕೊಡಲು ಒಪ್ಪದಿದ್ದಾಗ ಲಾಕರ್‌ ಅಥವಾ ಅಲ್ಮೆರಾದ ಬೀಗವನ್ನು ಸುರಕ್ಷಿತವಾಗಿ ಮುರಿಯವ ಹಕ್ಕು ಈಗಾಗಲೇ ಇ ಡಿಗೆ ಇದೆ ಎಂದು ಅದು ತರ್ಕಿಸಿದೆ.

ಪಿಎಂಎಲ್ಎಯ ಸೆಕ್ಷನ್ 18 ಅನ್ನು (ಇಡಿಯಿಂದ ವೈಯಕ್ತಿಕ ಶೋಧಕ್ಕೆ ಅನುವು ಮಾಡಿಕೊಡುವ ನಿಬಂಧನೆ) ಪರಿಶೀಲಿಸಿದ ನ್ಯಾಯಾಲಯ ಗೆಜೆಟೆಡ್ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸುವ ಮುನ್ನವೇ 24ಗಂಟೆಗಳಿಗಿಂತ ಹೆಚ್ಚು ಕಾಲ ಶೋಧ ನಡೆಸಿ ವ್ಯಕ್ತಿಯನ್ನು ಬಂಧಿಸುವಂತಿಲ್ಲ ಎಂದು ತೀರ್ಮಾನಿಸಿತು.

ಪ್ರಸ್ತುತ ಪ್ರಕರಣದಲ್ಲಿ, ಇ ಡಿ ಸೆಕ್ಷನ್ 18 ಅನ್ನು ಜಾರಿಗೊಳಿಸಿಲ್ಲವಾದ್ದರಿಂದ ಅರ್ಜಿದಾರರನ್ನು ಬಂಧಿಸಲು ಅಥವಾ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ನುಡಿಯಿತು. ಹೀಗಾಗಿ ಅರ್ಜಿದಾರರನ್ನು ಬಂಧಿಸಲಾಗಿದೆ ಎಂದೇ ಪರಿಗಣಿಸಲಾಗುವುದು ಎಂದ ಪೀಠ ಅರ್ಜಿದಾರರು ತಮ್ಮ ಸ್ವಂತ ಇಚ್ಛೆಯಿಂದ ಆವರಣದಲ್ಲಿದ್ದರು ಎಂಬ ವಾದವನ್ನು ತಿರಸ್ಕರಿಸಿತು.

ಪಿಎಂಎಲ್ಎ ಅಡಿಯಲ್ಲಿನ ವಿಶೇಷ ನ್ಯಾಯಾಲಯವು ಆರೋಪಿಗಳನ್ನು ಇ ಡಿ ವಶಕ್ಕೆ ಒಪ್ಪಿಸುವಾಗ, ಇಬ್ಬರು ಅರ್ಜಿದಾರರ ಬಂಧನದಲ್ಲಿ ಪಿಎಂಎಲ್ಎಯ ಸೆಕ್ಷನ್ 19ನ್ನು ಪಾಲಿಸಲಾಗಿದೆಯೇ ಎಂಬುದನ್ನು ಗಮನಿಸಿಲ್ಲ. ಕಾಯಿದೆಯ ಸೆಕ್ಷನ್ 19 ಅನ್ನು ಇ ಡಿ ಸಂಪೂರ್ಣವಾಗಿ ಪಾಲಿಸಿಲ್ಲ ಎಂದು ನ್ಯಾಯಮೂರ್ತಿ ಬಹ್ಲ್ ತಿಳಿಸಿದರು.

ಹೀಗಾಗಿ ಬಂಧನ ಆದೇಶ, ಬಂಧನಕ್ಕೆ ಸಂಬಂಧಿಸಿದ ಜ್ಞಾಪನಾ ಪತ್ರಗಳು ಹಾಗೂ ವಶಕ್ಕೆ ನೀಡುವ ಆದೇಶಗಳನ್ನು ಈ ಕೆಳಗಿನ ಅಂಶಗಳ ಆಧಾರದಲ್ಲಿ ಅದು ಬದಿಗೆ ಸರಿಸಿತು.

ಬಂಧನ ಮತ್ತು ವಶಕ್ಕೆ ಪಡೆಯುವ ಆದೇಶಗಳನ್ನು ಬದಿಗಿಡುವ ಕಾರಣಗಳು
ಬಂಧನ ಮತ್ತು ವಶಕ್ಕೆ ಪಡೆಯುವ ಆದೇಶಗಳನ್ನು ಬದಿಗಿಡುವ ಕಾರಣಗಳು

ಜೊತೆಗೆ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಮನವಿದಾರರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿತು.


[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Dilbag Singh @ Dilbagh Sandhu v Union of India and another.pdf
Preview
Kannada Bar & Bench
kannada.barandbench.com