ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪೊಲೀಸ್‌ ಅಧಿಕಾರಿಗಳಲ್ಲ: ಕಲ್ಕತ್ತಾ ಹೈಕೋರ್ಟ್‌

ಪಿಎಂಎಲ್‌ಎ ಅಡಿ ಶೋಧವು ವಿಚಾರಣೆಯಷ್ಟೆ, ಅದು ತನಿಖೆಯಲ್ಲ ಎಂದು ಈಚೆಗೆ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಹೈಕೋರ್ಟ್‌ ಉಲ್ಲೇಖಿಸಿದೆ.
Calcutta High Court
Calcutta High Court

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪೊಲೀಸ್‌ ಅಧಿಕಾರಿಗಳಲ್ಲ ಮತ್ತು ಅವರ ನಡೆಸುವ ಶೋಧವು ವಿಚಾರಣೆಯಷ್ಟೆ ಹೊರತು ಅದು ತನಿಖೆಯಲ್ಲ ಎಂದು ಈಚೆಗೆ ಕಲ್ಕತ್ತಾ ಹೈಕೋರ್ಟ್‌ ಹೇಳಿದೆ [ಜಾರಿ ನಿರ್ದೇಶನಾಲಯ ವರ್ಸಸ್‌ ಮೇನಕಾ ಗಂಭೀರ್‌].

ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು ಮೇನಕಾ ಗಂಭೀರ್‌ ಎನ್ನುವವರಿಗೆ ಜಾರಿ ಮಾಡಿದ್ದ ಸಮನ್ಸ್‌ ವಜಾ ಮಾಡಿರುವ ಏಕಸದಸ್ಯ ಪೀಠಕ್ಕೆ ಹಾಗೆ ಮಾಡಲು ಯಾವುದೇ ವ್ಯಾಪ್ತಿ ಇಲ್ಲ ಎಂಬ ವಾದವನ್ನು ಮುಖ್ಯ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಅನನ್ಯಾ ಭಂಡೋಪಾಧ್ಯಾಯ ಅವರ ನೇತೃತ್ವದ ವಿಭಾಗೀಯ ಪೀಠವು ನಿರಾಕರಿಸಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್‌ ವೈಫಲ್ಯ ಇಲ್ಲದಿರುವುದರಿಂದ ಇ ಡಿ ಅಧಿಕಾರಿ ನೀಡಿದ್ದ ಸಮನ್ಸ್‌ನಿಂದ ಮೇನಕಾ ಅವರಿಗೆ ನ್ಯಾಯಾಲಯವು ರಕ್ಷಣೆ ನೀಡಿತ್ತು.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯಿದೆಯ (ಪಿಎಂಎಲ್‌ಎ) ಸಿಂಧುತ್ವವನ್ನು ವಿಜಯ್‌ ಮದನ್‌ಲಾಲ್‌ ಚೌಧರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿರುವುದನ್ನು ಪೀಠವು ಉಲ್ಲೇಖಿಸಿದೆ.

“ಪೊಲೀಸ್‌ ವೈಫಲ್ಯ ವಿಭಾಗದಲ್ಲಿ ಹಾಲಿ ಪ್ರಕರಣ ಬರುವುದರಿಂದ ಏಕಸದಸ್ಯ ಪೀಠದ ವ್ಯಾಪ್ತಿಯನ್ನು ಪ್ರಶ್ನಿಸಲಾಗಿದೆ. ವಿಜಯ್‌ ಮದನ್‌ಲಾಲ್‌ ಚೌಧರಿ ಪ್ರಕರಣದಲ್ಲಿ ಪಿಎಂಎಲ್‌ಎ ಸೆಕ್ಷನ್‌ 50ರ ಅಡಿ ನಡೆಯುವ ಪ್ರಕ್ರಿಯೆಯು ವಿಚಾರಣೆಯ ಸ್ವರೂಪದ್ದೇ ಹೊರತು ಕಾನೂನು ಕ್ರಮವನ್ನು ಆರಂಭಿಸುವ ಸ್ಪಷ್ಟ ಅರ್ಥವನ್ನು ಹೊರಹೊಮ್ಮಿಸುವ 'ತನಿಖೆ' ಅಲ್ಲ. ಪಿಎಂಎಲ್‌ಎ ಅಡಿಯಲ್ಲಿ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳಲ್ಲ. ಹೀಗಾಗಿ, ಕೋರಿಕೆಯನ್ನು ಒಪ್ಪಲಾಗದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಥಾಯ್ಲೆಂಡ್‌ ಪ್ರಜೆಯಾದ ಮೇನಕಾ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಯು ಜಾರಿ ಮಾಡಿದ್ದ ಸಮನ್ಸ್‌ ಅನ್ನು ಏಕಸದಸ್ಯ ಪೀಠವು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ವಿಭಾಗೀಯ ಪೀಠವು ವಿಲೇವಾರಿ ಮಾಡಿದೆ.

ಜಾರಿ ನಿರ್ದೇಶನಾಲಯದ ಸಮನ್ಸ್‌ ವಜಾ ಮಾಡಿದ್ದ ಏಕಸದಸ್ಯ ಪೀಠವು ಕೋಲ್ಕತ್ತಾದಲ್ಲಿರುವ ಇ ಡಿ ವಲಯ ಕಚೇರಿಯಲ್ಲಿ ವಿಚಾರಣೆ ಎದುರಿಸುವಂತೆ ಮೇನಕಾ ಅವರಿಗೆ ಆದೇಶಿಸಿತ್ತು. ಆಕೆಯ ವಿರುದ್ಧ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಇದೇ ವೇಳೆ ಏಕಸದಸ್ಯ ಪೀಠವು ಇ ಡಿಗೆ ಆದೇಶಿಸಿತ್ತು.

ಅಕ್ರಮ ಕಲ್ಲಿದ್ದಲು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿಸದಂತೆ 2020ರ ನವೆಂಬರ್‌ನಲ್ಲಿ ಸಿಬಿಐ ಹಲವರ ವಿರುದ್ಧ ಎಫ್‌ಐಆರ್‌ ದಾಖಲಿಸಿತ್ತು. ಇದರಲ್ಲಿ ಮೇನಕಾ ಅವರ ಹೆಸರು ಉಲ್ಲೇಖಿಸಿರಲಿಲ್ಲ. ಆದರೆ, ಆನಂತರ ಇ ಡಿ ದಾಖಲಿಸಿದ್ದ ಪ್ರಕರಣದಲ್ಲಿ ಅವರ ಹೆಸರು ಉಲ್ಲೇಖಿಸಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ ಡಿಯು 2022ರ ಜುಲೈ ಮತ್ತು ಆಗಸ್ಟ್‌ನಲ್ಲಿ ಅವರಿಗೆ ಸಮನ್ಸ್‌ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ಇ ಡಿ ಮುಂದೆ ಹಾಜರಾಗಿದ್ದರು ಎಂಬುದನ್ನು ಪರಿಗಣಿಸಿರುವ ಪೀಠವು ಅರ್ಜಿ ವಿಲೇವಾರಿ ಮಾಡಿದೆ.

Related Stories

No stories found.
Kannada Bar & Bench
kannada.barandbench.com