ಇ ಡಿ ವರ್ತನೆಯು ಪ್ರತೀಕಾರ ತೀರಿಸಿಕೊಳ್ಳುವಂತಿರಬಾರದು, ನ್ಯಾಯಯುತವಾಗಿ ನಡೆದುಕೊಳ್ಳಬೇಕು: ಸುಪ್ರೀಂ ಕೋರ್ಟ್

ಪ್ರಕರಣದಲ್ಲಿ ಇ ಡಿ ಅಧಿಕಾರವನ್ನು ಚಲಾಯಿಸಿರುವ ರೀತಿ ಕಳಪೆಯಾಗಿದ್ದು, ನಿರಂಕುಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪೀಠ.
ಇ ಡಿ ವರ್ತನೆಯು ಪ್ರತೀಕಾರ ತೀರಿಸಿಕೊಳ್ಳುವಂತಿರಬಾರದು, ನ್ಯಾಯಯುತವಾಗಿ ನಡೆದುಕೊಳ್ಳಬೇಕು: ಸುಪ್ರೀಂ ಕೋರ್ಟ್
Published on

ಮಾಜಿ ನ್ಯಾಯಾಧೀಶರರೊಬ್ಬರಿಗೆ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಎಂ3ಎಂ ಕಂಪೆನಿಯ ನಿರ್ದೇಶಕರಾದ ಬಸಂತ್ ಬನ್ಸಾಲ್ ಮತ್ತು ಪಂಕಜ್ ಬನ್ಸಾಲ್ ಅವರ ಬಂಧನ ಮತ್ತು ತನಿಖೆ ಕುರಿತಂತೆ ಜಾರಿ ನಿರ್ದೇಶನಾಲಯವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ [ಪಂಕಜ್ ಬನ್ಸಾಲ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಪ್ರಕರಣದಲ್ಲಿ ಇ ಡಿ ಅಧಿಕಾರವನ್ನು ಚಲಾಯಿಸಿರುವ ರೀತಿ ಕಳಪೆಯಾಗಿದ್ದು, ನಿರಂಕುಶವಾಗಿ ವರ್ತಿಸಿದೆ ಎಂದು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಹೇಳಿದೆ.  

ಮೊದಲ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಅಗಮಿಸಿದ ವೇಳೆ ಎರಡನೇ ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್‌) ಕುರಿತಂತೆ ಆರೋಪಿಗಳಿಗೆ ಸಮನ್ಸ್‌ ನೀಡಲಾಗಿದೆ ಎಂಬುದನ್ನು ಗಮನಿಸಿದ ಪೀಠ ಈ ಘಟನೆಗಳ ಕಾಲಾನುಕ್ರಮವು ಇ ಡಿ ಕಾರ್ಯ ನಿರ್ವಹಣೆಯ ಕಳಪೆ ಶೈಲಿಯ ದ್ಯೋತಕವಾಗಿದ್ದು ಬಹಳಷ್ಟನ್ನು ಹೇಳುತ್ತದೆ ಎಂದಿದೆ.

ಇ ಡಿಯ ಪ್ರತಿಯೊಂದು ಕ್ರಿಯೆಯೂ ಪಾರದರ್ಶಕವಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅನೂಚಾನವಾಗಿ ನಡೆದುಕೊಂಡು ಬಂದಿರುವ ಮಾನದಂಡಗಳಿಗೆ ತಕ್ಕಂತೆ ನ್ಯಾಯಯುತವಾಗಿ ಅದು ನಡೆದುಕೊಳ್ಳಬೇಕು ಮತ್ತು ಅದರ ನಡೆಯಲ್ಲಿ ಪ್ರತೀಕಾರ ಇರುವಂತಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿತು.

ನಿವೃತ್ತ ನ್ಯಾಯಾಧೀಶರಿಗೆ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಎಂ3ಎಂ ಕಂಪೆನಿಯ ನಿರ್ದೇಶಕರಾದ ಬಸಂತ್ ಬನ್ಸಾಲ್ ಮತ್ತು ಪಂಕಜ್ ಬನ್ಸಾಲ್ ಅವರಿಗೆ ಸುಪ್ರೀಂ ಕೋರ್ಟ್ ನಿನ್ನೆ ಜಾಮೀನು ನೀಡಿತ್ತು.

ಇ ಡಿ ಲಿಖಿತವಾಗಿ ಬಂಧನದ ಹಿನ್ನೆಲೆ ತಿಳಿಸಬೇಕು

Supreme Court, PMLA
Supreme Court, PMLAA1

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಆರೋಪಿಗಳಿಗೆ ಬಂಧನದ ಹಿನ್ನೆಲೆಯನ್ನು ಜಾರಿ ನಿರ್ದೇಶನಾಲಯ ಲಿಖಿತವಾಗಿ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಇದೇ ವೇಳೆ ತಿಳಿಸಿತು.

ಆರೋಪಿ ಬಂಧನದ ಕಾರಣವನ್ನು ತಿಳಿಯುವುದು ಸಾಂವಿಧಾನಿಕ ಮತ್ತು ಶಾಸನಬದ್ಧ ಹಕ್ಕು ಎಂದು ಪೀಠ ಹೇಳಿತು. ಬಂಧನದ ಹಿನ್ನೆಲೆಯನ್ನು ಕೇವಲ ಓದಿದರೆ ಅದು ಸಂವಿಧಾನದ 22 (1) ಮತ್ತು ಪಿಎಂಎಲ್‌ಎ ಪರಿಚ್ಛೇದ 19 (1) ರ ಅಡಿಯಲ್ಲಿ ನೀಡಲಾಗಿರುವ ಆದೇಶದ ಸಮರ್ಪಕ ಪಾಲನೆಯಾಗದು ಎಂದು ಇದೇ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ತಿಳಿಸಿದೆ.

Kannada Bar & Bench
kannada.barandbench.com