

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (ಪಿಎಂಎಲ್‌ಎ) ಬಂಧಿತರಾಗಿದ್ದ ಗೇಮಿಂಗ್ ಕಂಪನಿ ವಿನ್ಜೊ ಪ್ರೈವೇಟ್ ಲಿಮಿಟೆಡ್‌ನ ಸಹ ಸಂಸ್ಥಾಪಕಿ ಸೌಮ್ಯಾ ಸಿಂಗ್ ರಾಥೋಡ್ ಅವರಿಗೆ ಬೆಂಗಳೂರಿನ ವಿಶೇಷ ಜಾರಿ ನಿರ್ದೇಶನಾಲಯ (ಇ ಡಿ) ನ್ಯಾಯಾಲಯವು ಈಚೆಗೆ ಜಾಮೀನು ಮಂಜೂರು ಮಾಡಿದೆ. ಆದರೆ, ಪ್ರಕರಣದಲ್ಲಿ ಎರಡನೇ ಆರೋಪಿ ಪವನ್ ನಂದಾಗೆ ಜಾಮೀನು ನಿರಾಕರಿಸಿದ್ದು, ಅವರನ್ನು ಡಿಸೆಂಬರ್ 30ರವೆರೆಗೆ ನಾಲ್ಕು ದಿನ ಇ ಡಿ ಕಸ್ಟಡಿಗೆ ನೀಡಿದೆ.
ಜಾಮೀನು ಕೋರಿ ಸೌಮ್ಯಾ ಸಿಂಗ್ ಮತ್ತು ಪವನ್ ನಂದಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರಾದ ಎಂ ಚಂದ್ರಶೇಖರ್ ರೆಡ್ಡಿ ಅವರು ನಡೆಸಿದರು.
“ಜಾರಿ ನಿರ್ದೇಶನಾಲಯವು ಮೊದಲನೇ ಆರೋಪಿಯಾದ ಸೌಮ್ಯಾ ಸಿಂಗ್ ಅವರನ್ನು ಕಸ್ಟಡಿಯಲ್ಲಿ ಇಟ್ಟುಕೊಳ್ಳದೇ ಯಾವುದೇ ಹೇಳಿಕೆ ಅಥವಾ ಸಾಕ್ಷಿಗೆ ಎದುರಾಗಿಸಲು ಅಥವಾ ಹೆಚ್ಚುವರಿ ಹೇಳಿಕೆ ದಾಖಲಿಸಲು ಅವರ ಹಾಜರಾತಿಗೆ ಸೂಚಿಸಬಹುದಾಗಿದೆ. ಈ ನೆಲೆಯಲ್ಲಿ ಆಕೆಯನ್ನು ಪವನ್ ನಂದಾ ಅವರ ಜೊತೆ ಹೋಲಿಕೆ ಮಾಡಲಾಗದು” ಎಂದು ನ್ಯಾಯಾಲಯ ಹೇಳಿದೆ.
“ಬಹುಮುಖ್ಯವಾದ ಡಿಜಿಟಲ್ ಸಾಕ್ಷ್ಯವನ್ನು ಸೌಮ್ಯಾ ಸಿಂಗ್ ರಾಥೋಡ್ ಅವರು ತಿರುಚಿ, ಸಾಕ್ಷಿಗಳನ್ನು ಆಕೆ ಪ್ರಭಾವಿಸಬಹುದು ಎಂಬ ಇ ಡಿ ಆತಂಕಕ್ಕೆ ಕಠಿಣ ಷರತ್ತುಗಳನ್ನು ವಿಧಿಸಿ ಪರಿಹರಿಸಬಹುದಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
“ಸೌಮ್ಯಾ ಸಿಂಗ್ ರಾಥೋಡ್ ₹5 ಲಕ್ಷ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು, ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು. ಸಾಕ್ಷ್ಯಗಳನ್ನು ತಿರುಚಬಾರದು, ನ್ಯಾಯಾಲಯದ ವ್ಯಾಪ್ತಿ ತೊರೆಯಬಾರದು” ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
“ತನಿಖೆಯು ವಿದೇಶಕ್ಕೂ ವಿಸ್ತರಿಸಿದ್ದು, ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹಿಸಿರುವ ದಾಖಲೆಯನ್ನು ನೋಡಿದರೆ ಪವನ್ ನಂದಾ ಜಾಮೀನಿಗೆ ಅರ್ಹರಾಗುತ್ತಾರೆ ಎನಿಸುವುದಿಲ್ಲ. ಹೀಗಾಗಿ ಪವನ್ ನಂದಾ ಅವರನ್ನು ಡಿಸೆಂಬರ್ 30ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಲಾಗಿದೆ” ಎಂದು ಹೇಳಿದೆ.
ಸೌಮ್ಯಾ ಸಿಂಗ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜನ್ ಪೂವಯ್ಯ ಅವರು “ಪ್ರೆಡಿಕೇಟ್ (ಅಕ್ರಮ ಹಣ ಗಳಿಕೆಗೆ ಕಾರಣವಾದ ಮೂಲ ಅಪರಾಧ) ಅಪರಾಧಕ್ಕೆ ಸಂಬಂಧಿಸಿದಂತೆ ವಿನ್ಜೊ ಕಂಪನಿಯನ್ನು ತಳುಕು ಹಾಕಲು ಯಾವುದೇ ದಾಖಲೆ ಇಲ್ಲ. ಗುರುಗ್ರಾಮದಲ್ಲಿ ದಾಖಲಾಗಿರುವ ನಾಲ್ಕನೇ ಎಫ್‌ಐಆರ್ 2025ರ ನವೆಂಬರ್ 24ರಂದು ದಾಖಲಾಗಿದ್ದು, ಅದಕ್ಕೂ ಮುನ್ನವೇ ಹಾಲಿ ಪ್ರಕರಣದಲ್ಲಿ ಶೋಧ ಮತ್ತು ಜಫ್ತಿ ನಡೆದಿತ್ತು. ಹೀಗಾಗಿ, ಗುರುಗ್ರಾಮದಲ್ಲಿ ದಾಖಲಾಗಿರುವ ಪ್ರಕರಣವನ್ನು ಇ ಡಿ ಆಧರಿಸಲಾಗದು” ಎಂದರು.
“ಸೌಮ್ಯಾ ಸಿಂಗ್ ಮಹಿಳೆಯಾಗಿರುವುದರಿಂದ ಪಿಎಂಎಲ್‌ಎ ಸೆಕ್ಷನ್ 45(1)(ii)ರ ಅಡಿ ಉಲ್ಲೇಖಿಸಿರುವ ಅವಳಿ ಪರೀಕ್ಷೆಯು ಅವರಿಗೆ ಅನ್ವಯಿಸುವುದಿಲ್ಲ. ಸೂಕ್ತ ಷರತ್ತುಗಳನ್ನು ವಿಧಿಸಿ ಅವರಿಗೆ ಜಾಮೀನು ಮಂಜೂರು ಮಾಡಬಹುದಾಗಿದೆ. ಸೌಮ್ಯಾ ಅವರು ಸಮಾಜದ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಪರಾರಿಯಾಗುತ್ತಾರೆ ಎನ್ನಲಾಗದು ಮತ್ತು ಅವರಿಗೆ ಅವರ ಪೂರ್ವಾಪರ ಶುದ್ಧವಾಗಿದೆ. ಹೀಗಾಗಿ, ಜಾಮೀನು ಪಡೆಯಲು ಅರ್ಹರಾಗಿದ್ದಾರೆ” ಎಂದಿದ್ದರು.
ಅಲ್ಲದೇ, “ಕಳೆದ ವರ್ಷ ವಿನ್ಜೊ ಕಂಪನಿಯು ₹870 ಕೋಟಿ ಜಿಎಸ್‌ಟಿ ಪಾವತಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಆದಾಯ ತೆರಿಗೆಯನ್ನೂ ಪಾವತಿಸಿದೆ. ಆನ್‌ಲೈನ್ ಗೇಮ್‌ಗಳನ್ನು ಕೇಂದ್ರ ಸರ್ಕಾರವು ನಿಷೇಧಿಸಿದ್ದು, ಅದರ ಅಧಿಸೂಚನೆಯನ್ನು ಇನ್ನಷ್ಟೇ ಪ್ರಕಟಿಸಬೇಕಿದ್ದರೂ ವಿನ್ಜೊ ಸಂಸ್ಥೆಯು ಎಲ್ಲಾ ಗೇಮಿಂಗ್ ಚಟುವಟಿಕೆಗಳನ್ನು ನಿಲ್ಲಿಸಿದೆ. ಜಾರಿ ನಿರ್ದೇಶನಾಲಯ ಬೆರಳು ಮಾಡುತ್ತಿರುವ ₹43 ಕೋಟಿ ಹಣವನ್ನು ತಟಸ್ಥವಾಗಿ ಇರಿಸಲಾಗಿದೆ. ಇ ಡಿ ನೀಡಿರುವ ನಂಬಲರ್ಹ ಕಾರಣಗಳು ವಾಸ್ತವಿಕ ಮತ್ತು ಕಾನೂನಾತ್ಮಕವಾಗಿ ಸರಿಯಾಗಿಲ್ಲ. ಈಗಾಗಲೇ ಶೋಧ ನಡೆಸಿ, ದತ್ತಾಂಶ ಸಂಗ್ರಹಿಸಿ, ಆರೋಪಿಗಳು ಮತ್ತು ಸಂಸ್ಥೆಯ ಸಿಬ್ಬಂದಿಯ ಹೇಳಿಕೆ ದಾಖಲಿಸಲಾಗಿದೆ. ಅಲ್ಲದೇ, 11 ದಿನ ಸೌಮ್ಯಾ ಅವರನ್ನು ಕಸ್ಟಡಿಗೆ ಪಡೆಯಲಾಗಿದೆ” ಎಂದಿದ್ದರು.
“ಡಿಜಿಟಲ್ ದತ್ತಾಂಶವನ್ನು ಈಗಾಗಲೇ ಜಫ್ತಿ ಮಾಡಲಾಗಿದ್ದು, ಸೌಮ್ಯಾ ಅವರು ಈಗಾಗಲೇ ತನಿಖೆಗೆ ಸಹಕರಿಸಿದ್ದಾರೆ. ಹೀಗಾಗಿ, ಅವರನ್ನು ಪುನಾ ಇ ಡಿ ಕಸ್ಟಡಿ ಪಡೆಯುವ ಅಗತ್ಯವಿಲ್ಲ” ಎಂದಿದ್ದರು.
ಪವನ್ ನಂದಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್ ಶ್ಯಾಮ್ ಸುಂದರ್ ಅವರು “ಮೂರು ಎಫ್‌ಐಆರ್‌ಗಳಲ್ಲಿ ವಿನ್ಜೊ ಅಥವಾ ಅದರ ನಿರ್ದೇಶಕರ ಹೆಸರಿಲ್ಲ. ನಾಲ್ಕನೇ ಎಫ್‌ಐಆರ್ ಆನಂತರ ದಾಖಲಿಸಲಾಗಿದೆ. ಪಿಎಂಎಲ್‌ಎ ವ್ಯಾಪ್ತಿ ಮೀರಿ ಇ ಡಿ ತನಿಖೆ ನಡೆಸಲಾಗದು ಮತ್ತು ಸೂಪರ್ ಪೊಲೀಸ್ ರೀತಿಯಲ್ಲಿ ವರ್ತಿಸಲಾಗದು” ಎಂದರು.
“₹177 ಕೋಟಿ ಅಪರಾಧ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇ ಡಿಯು ಯಾವುದೇ ಮಾಹಿತಿ ಅಥವಾ ದಾಖಲೆ ನೀಡಿಲ್ಲ. ಆಲ್ಗಾರಿದಮ್ ತಿರುಚಿ ಅಥವಾ ಬೋಟ್ ಬಳಸಲಾಗಿದೆ ಎಂಬ ಅನುಮಾದ ಆರೋಪದ ತನಿಖೆ ನಡೆಸುತ್ತಿದೆ. ಅನುಮಾನವು ಸಾಕ್ಷಿಯಾಗುವುದಿಲ್ಲ. ದೆಹಲಿಯ ಗ್ರೇಟರ್ ಕೈಲಾಶ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪವನ್ ನಂದಾ ಐದನೇ ಆರೋಪಿಯಾಗಿದ್ದು, ದೆಹಲಿ ಸಾರ್ವಜನಿಕ ಜೂಜಾಟ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಅದರಲ್ಲಿ ಅವರಿಗೆ ಜಾಮೀನು ದೊರೆತಿದೆ. ಈ ಪ್ರಕರಣದ ತನಿಖೆಗೆ ದೆಹಲಿ ಹೈಕೋರ್ಟ್ ತಡೆ ನೀಡಿದೆ” ಎಂದರು.
ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಮಧು ಎನ್. ರಾವ್ ಅವರು “ಆಲ್ಗಾರಿದಮ್ ತಿರುಚಿ, ಬೋಟ್ಸ್ ಬಳಕೆ ಮಾಡಿ ಕೋಟ್ಯಂತರ ಮಂದಿಗೆ ವಂಚಿಸಲಾಗಿದೆ. ಇಲ್ಲಿ ಗಳಿಸಿದ ಹಣವನ್ನು ವಿದೇಶದಲ್ಲಿರುವ ನಕಲಿ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿದೆ. ತಟಸ್ಥ ಖಾತೆಯಲ್ಲಿರುವ ₹43 ಕೋಟಿ ಹಣವು ಅಕ್ರಮ ಹಣವಾಗಿದ್ದು,ಕಂಪನಿಗೆ ಸೇರಿದ ₹177 ಕೋಟಿ ಅಪರಾಧದ ಪ್ರಕ್ರಿಯೆ ಭಾಗ ಎಂದು ತನಿಖೆ ಬಹಿರಂಗಗೊಳಿಸಿದೆ” ಎಂದರು.