ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ನೀಡಬಾರದು: ಸುಪ್ರೀಂನಲ್ಲಿ ಇ ಡಿ ಪ್ರಬಲ ವಾದ

ಚುನಾವಣಾ ಪ್ರಚಾರದ ಹಕ್ಕು ಮೂಲಭೂತ, ಕಾನೂನಾತ್ಮಕ ಅಥವಾ ಸಾಂವಿಧಾನಿಕ ಹಕ್ಕಲ್ಲ ಎಂದು ಇ ಡಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿದೆ.
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ನೀಡಬಾರದು: ಸುಪ್ರೀಂನಲ್ಲಿ ಇ ಡಿ ಪ್ರಬಲ ವಾದ
Published on

ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವ ಸುಪ್ರೀಂ ಕೋರ್ಟ್‌ನ ಸಲಹೆಗೆ ಜಾರಿ ನಿರ್ದೇಶನಾಲಯ (ಇ ಡಿ) ಗುರುವಾರ ಬಲವಾಗಿ ವಿರೋಧ ವ್ಯಕ್ತಪಡಿಸಿದೆ [ಅರವಿಂದ್ ಕೇಜ್ರಿವಾಲ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಚುನಾವಣಾ ಪ್ರಚಾರದ ಹಕ್ಕು ಮೂಲಭೂತ, ಕಾನೂನಾತ್ಮಕ ಅಥವಾ ಸಾಂವಿಧಾನಿಕ ಹಕ್ಕಲ್ಲ ಎಂದು  ಇ ಡಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿದೆ.

ಅಫಿಡವಿಟ್‌ನ ಪ್ರಮುಖಾಂಶಗಳು

  • ಕೇಜ್ರಿವಾಲ್‌ ಅಭ್ಯರ್ಥಿಯಲ್ಲದಿದ್ದರೂ ಅವರು ಬೇರೆ ರಾಜಕೀಯ ಮುಖಂಡರಿಗಾಗಿ ಪ್ರಚಾರ ನಡೆಸಲು ಮಧ್ಯಂತರ ಜಾಮೀನು ನೀಡಬಾರದು.

  • ಕಳೆದ 5 ವರ್ಷಗಳಲ್ಲಿ123 ಚುನಾವಣೆಗಳು ನಡೆದಿದ್ದು ಪ್ರಚಾರದ ಉದ್ದೇಶಕ್ಕಾಗಿ ಮಧ್ಯಂತರ ಜಾಮೀನು ನೀಡಿದರೆ ವರ್ಷಪೂರ್ತಿ ಚುನಾವಣೆ ಇರುವುದರಿಂದ ಯಾವುದೇ ರಾಜಕಾರಣಿಯನ್ನು ಬಂಧಿಸಿಡುವುದು ಸಾಧ್ಯವಾಗದು.

  •  ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಚುನಾವಣೆಗಿಂತ ಇನ್ನೊಂದು ಮಿಗಿಲಲ್ಲ.

  •  ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡದಿದ್ದಲ್ಲಿ, ತಮಗೆ ಸರಿಪಡಿಸಲಾಗದಷ್ಟು ಪರಿಣಾಮಗಳನ್ನು ಉಂಟಾಗಲಿದೆ ಎಂದು ಪ್ರತಿ ಹಂತದಲ್ಲೂ ಪ್ರತಿ ರಾಜಕಾರಣಿ ವಾದಿಸುತ್ತಾರೆ.

  • ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಪ್ರಸ್ತುತ ಅನೇಕ ರಾಜಕಾರಣಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪಿಎಂಎಲ್‌ಎ ಅಲ್ಲದ ಅಪರಾಧಗಳಲ್ಲಿ ದೇಶದಾದ್ಯಂತ ಹಲವು ರಾಜಕೀಯ ನಾಯಕರು ಬಂಧನದಲ್ಲಿದ್ದಾರೆ. ಅರ್ಜಿದಾರರಾದ ಕೇಜ್ರಿವಾಲ್‌ ಅವರನ್ನು ವಿಶೇಷವಾಗಿ ಏಕೆ ನಡೆಸಿಕೊಳ್ಳಬೇಕು?

  • ರಾಜಕೀಯ ಪ್ರಚಾರಕ್ಕಾಗಿ ನೀಡುವ ಯಾವುದೇ ಮಧ್ಯಂತರ ಜಾಮೀನು ಸಮಾನತೆಯ ತತ್ವಕ್ಕೆ ವಿರುದ್ಧ ಮತ್ತು ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ.

  • ಸ್ಪರ್ಧೆ ಮಾಡದ ರಾಜಕೀಯ ನಾಯಕನ ರಾಜಕೀಯ ಪ್ರಚಾರಕ್ಕಿಂತ ಸಣ್ಣ ರೈತ ಅಥವಾ ಸಣ್ಣ ವ್ಯಾಪಾರಿಯ ಕೆಲಸವು ಕಡಿಮೆ ಮಹತ್ವದ್ದಾಗಿದೆ ಎಂದು ಹೇಳಲು ಸಾಧ್ಯವಿಲ್ಲ ... ಒಬ್ಬ ರಾಜಕಾರಣಿ ಸಾಮಾನ್ಯ ವ್ಯಕ್ತಿಗಿಂತ ಹೆಚ್ಚಿನ ವಿಶೇಷ ಸ್ಥಾನಮಾನವನ್ನು ಪಡೆಯಲು ಸಾಧ್ಯವಿಲ್ಲ.   

  •  ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಪರಿಹಾರ  ನೀಡಿದರೆ, ಎಲ್ಲಾ ಬಂಧಿತ ರಾಜಕಾರಣಿಗಳು ತಮಗೂ ಜಾಮೀನು ನೀಡುವಂತೆ ಕೇಳುತ್ತಾರೆ.

  • ಸಿಎಂ ಪರವಾಗಿ ಯಾವುದೇ ವಿಶೇಷ ರಿಯಾಯತಿ ನೀಡಿದರೆ ಅದು ಕಾನೂನುಬದ್ಧ ಅಡಳಿತಕ್ಕೆ ವಿರುದ್ಧವಾಗುತ್ತದೆ.

Kannada Bar & Bench
kannada.barandbench.com