ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ವಿಚಾರಣೆಗೆ ಅನುಮತಿ ಇದೆ ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಇ ಡಿ

ಕೇಜ್ರಿವಾಲ್ ಸೇರಿದಂತೆ ಹಲವು ಎಎಪಿ ನಾಯಕರು ಮದ್ಯದ ಕಂಪನಿಗಳಿಂದ ಹಣ ಪಡೆದು ಅಬಕಾರಿ ನೀತಿಯಲ್ಲಿ ಉದ್ದೇಶಪೂರ್ವಕವಾಗಿ ಲೋಪದೋಷ ಉಳಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
Arvind Kejriwal, ED and Delhi High Court
Arvind Kejriwal, ED and Delhi High Court
Published on

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಆರ್‌ಪಿಸಿ ಸೆಕ್ಷನ್‌ 197ರ ಅಡಿಯಲ್ಲಿ ಅಧಿಕೃತ ಅನುಮತಿ ಇದೆ ಎಂದು ಜಾರಿ ನಿರ್ದೇಶನಾಲಯ (ಇ ಡಿ) ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ

ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರೆದುರು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಈ ವಾದ ಮಂಡಿಸಿದರು.

Also Read
ಪಿಎಂಎಲ್ಎ ಅಡಿ ಸರ್ಕಾರಿ ನೌಕರನ ವಿಚಾರಣೆಗೆ ಸಿಆರ್‌ಪಿಸಿ ಸೆಕ್ಷನ್ 197ರ ಅಡಿ ಅನುಮತಿ ಪಡೆಯಬೇಕು: ಸುಪ್ರೀಂ ಕೋರ್ಟ್‌

ಕೇಜ್ರಿವಾಲ್ ಅವರನ್ನು ಆರೋಪಿ ಎಂದು ಹೆಸರಿಸುವ ಪೂರಕ ಆರೋಪ ಪಟ್ಟಿಯನ್ನು ಪರಿಗಣಿಸಲು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಕೇಜ್ರಿವಾಲ್‌ ಸಲ್ಲಿಸಿದ್ದ ಮನವಿಯ ವಿಚಾರಣೆ ಏಕಸದಸ್ಯ ಪೀಠದಲ್ಲಿ ನಡೆಯಿತು.

ಸಾರ್ವಜನಿಕ ಹುದ್ದೆಯಲ್ಲಿರುವವರು ತಮ್ಮ ಕರ್ತವ್ಯ ನಿರ್ವಹಿಸುವಾಗ ಅಪರಾಧ ಎಸಗಿರುವ ಆರೋಪ ಕೇಳಿ ಬಂದರೆ ಆಗ ಅವರನ್ನು ಕಾನೂನು ಕ್ರಮದಿಂದ ಸಿಆರ್‌ಪಿಸಿ ಸೆಕ್ಷನ್ 197 ರಕ್ಷಿಸುತ್ತದೆ. ಸಾರ್ವಜನಿಕ ಹುದ್ದೆಯಲ್ಲಿರುವವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವ ಮುನ್ನ ಸಂಬಂಧಪಟ್ಟ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂದು ಅದು ಹೇಳುತ್ತದೆ.

ಅನುಮತಿ ದೊರೆತಿರುವುದನ್ನು ದಾಖಲೆಯಲ್ಲಿ ಸಲ್ಲಿಸಲಾಗುವುದು ಎಂದು ಎಸ್‌ಜಿ ಹೇಳಿದರು. ಆದರೆ ವಿಚಾರಣಾ ನ್ಯಾಯಾಲಯದ ಎದುರು ಅನುಮತಿ ದಾಖಲೆ ಸಲ್ಲಿಸಿರಲಿಲ್ಲ ಎಂಬುದು ಕೇಜ್ರಿವಾಲ್‌ ಪರ ವಕೀಲರ ವಾದವಾಗಿತ್ತು. ಆಗ ಅದಕ್ಕೆ ಸಂಬಂಧಿಸಿದ ಅಫಿಡವಿಟ್‌ ಸಲ್ಲಿಸುವುದಾಗಿ ಮೆಹ್ತಾ ತಿಳಿಸಿದರು.

Also Read
'ಜೈಲಿನಲ್ಲಿರುವ ಮುಖ್ಯಮಂತ್ರಿ ಕೇಜ್ರಿವಾಲ್‌ ಕ್ಷಮಾದಾನದ ಕಡತಗಳಿಗೆ ಸಹಿ ಮಾಡಲಾಗದೇ?' ಸುಪ್ರೀಂ ಕೋರ್ಟ್‌ ಪ್ರಶ್ನೆ

ಪಿಎಂಎಲ್ಎ ಅಡಿ ಸಾರ್ವಜನಿಕ  ಹುದ್ದೆಯಲ್ಲಿರುವವರ ವಿಚಾರಣೆ ನಡೆಸುವುದಕ್ಕಾಗಿ ಸಿಆರ್‌ಪಿಸಿ ಸೆಕ್ಷನ್ 197ರ ಅಡಿ ಅನುಮತಿ ಪಡೆಯಬೇಕು ಎಂದು  ಜಾರಿ ನಿರ್ದೇಶನಾಲಯ ಮತ್ತು ಬಿಭು ಪ್ರಸಾದ್‌ ಆಚಾರ್ಯ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಕೆಲ ದಿನಗಳ ಹಿಂದಷ್ಟೇ ನೀಡಿದ ತೀರ್ಪನ್ನು ಕೇಜ್ರಿವಾಲ್‌ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಎನ್‌ ಹರಿಹರನ್‌ ಪ್ರಸ್ತಾಪಿಸಿದರು. ಪೂರಕ ಆರೋಪ ಪಟ್ಟಿ ಸಲ್ಲಿಸಿದಾಗ ಕೇಜ್ರಿವಾಲ್‌ ವಿರುದ್ಧ ವಿಚಾರಣೆ ನಡೆಸಲು ಅನುಮತಿ ಪಡೆದಿರಲಿಲ್ಲ ಎಂದು ಅವರು ಹೇಳಿದರು.

ಎಸ್‌ಜಿ ಅವರ ಹೇಳಿಕೆ ಪರಿಗಣಿಸಿದ ನ್ಯಾ. ಓಹ್ರಿ ಅಫಿಡವಿಟ್‌ ಸಲ್ಲಿಸಲು ಅವರಿಗೆ ಸಮಯಾವಕಾಶ ನೀಡಿತು. ಅಂತೆಯೇ ಕೇಜ್ರಿವಾಲ್‌ ಅವರಿಗೆ ನೋಟಿಸ್‌ ನೀಡಿದ ಪೀಠ ಡಿಸೆಂಬರ್ 20ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.

Kannada Bar & Bench
kannada.barandbench.com