ಶಿಕ್ಷಣವನ್ನು ಸಮವರ್ತಿ ಪಟ್ಟಿಗೆ ಸೇರಿಸಿರುವಿಕೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆಯೇ? ಮದ್ರಾಸ್ ಹೈಕೋರ್ಟ್ ಪ್ರಶ್ನೆ

ಶಿಕ್ಷಣ ವಿಷಯವನ್ನು ಸಂವಿಧಾನದ ರಾಜ್ಯಪಟ್ಟಿಯಿಂದ ತೆಗೆದು ಸಮವರ್ತಿ ಪಟ್ಟಿಗೆ ವರ್ಗಾಯಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್‌ಗೆ ಸಂಬಂಧಿಸಿದಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
Madras High Court
Madras High Court

ಶಿಕ್ಷಣ ವಿಷಯವನ್ನು ರಾಜ್ಯಪಟ್ಟಿಯಿಂದ ತೆಗೆದು ಸಮವರ್ತಿ ಪಟ್ಟಿಗೆ ಸೇರಿಸಿರುವುದಕ್ಕೆ ಮಿತಿಗೊಳಿಸಿ ಸಂವಿಧಾನದ 42ನೇ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರು ಅರ್ಜಿಗೆ ಸಂಬಂಧಿಸಿದಂತೆ ಮದ್ರಾಸ್‌ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಮಂಗಳವಾರ ನೋಟಿಸ್‌ ನೀಡಿದೆ (ಆರಮ್ ಸೆಯ್ಯ ವಿರುಂಬು ಟ್ರಸ್ಟ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ).

ರಾಜ್ಯ ಪಟ್ಟಿಯಿಂದ (ಪಟ್ಟಿ II) ʼಶಿಕ್ಷಣʼವನ್ನು ತೆಗೆದು ಸಮವರ್ತಿ ಪಟ್ಟಿಗೆ ವರ್ಗಾಯಿಸಿರುವುದು (ಪಟ್ಟಿ III) ಸಂವಿಧಾನದ ಮೂಲ ರಚನೆಯ ಭಾಗವಾದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎನ್ ಆರ್ ಇಳಂಗೊ ಪ್ರತಿಪಾದಿಸಿದರು.

“ತಿದ್ದುಪಡಿಗಳು ಮೂಲಭೂತ ರಚನೆಗೆ ವಿರುದ್ಧವಾಗಿ ಇರುವಂತಿಲ್ಲ ಎಂಬುದು ಸರ್ವ ವಿಧಿತವಾಗಿದ್ದು ಒಕ್ಕೂಟ ವ್ಯವಸ್ಥೆ ಸಂವಿಧಾನದ ಮೂಲ ರಚನೆಯಾಗಿದೆ” ಎಂದು ಅವರು ವಾದಿಸಿದರು. ಈ ಹಂತದಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಒಕ್ಕೂಟ ವ್ಯವಸ್ಥೆ ಮತ್ತು ಅರೆ ಒಕ್ಕೂಟ ವ್ಯವಸ್ಥೆಯ ನಡುವಣ ವ್ಯತ್ಯಾಸವನ್ನು ತಿಳಿಸಲು ಯತ್ನಿಸಿದರು. ಭಾರತ ಅರೆ ಒಕ್ಕೂಟ ವ್ಯವಸ್ಥೆಯ ಸ್ವರೂಪ ಹೊಂದಿದೆ ಎಂದು ಹೇಳಿದರು.

ಆಗ ಇಳಂಗೊ ಅವರು ಎಸ್‌ ಆರ್‌ ಬೊಮ್ಮಾಯಿ ಪ್ರಕರಣ ದಲ್ಲಿ ಒಕ್ಕೂಟ ವ್ಯವಸ್ಥೆ ಮೂಲ ರಚನೆಯ ಭಾಗವಾಗಿದೆ ಎಂದು ಸುಪ್ರೀಂಕೋರ್ಟ್‌ ಹೇಳಿರುವುದಾಗಿ ತಿಳಿಸಿದರು. ಅದಕ್ಕೆ ಹೌದು ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿದರು. ಅಲ್ಲದೆ ಸಾಂವಿಧಾನಿಕ ಸಭೆ ಸಂಸತ್ತಿಗೆ ತಿದ್ದುಪಡಿಯ ಅಧಿಕಾರ ನೀಡಿರುವುದರಿಂದ ಶಿಕ್ಷಣವನ್ನು ಸಮವರ್ತಿ ಪಟ್ಟಿಗೆ ವರ್ಗಾಯಿಸುವ ತಿದ್ದುಪಡಿಯು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆಯೇ ಎಂಬುದನ್ನು ಗಮನಿಸಬೇಕು ಎಂದರು.

“ಶಿಕ್ಷಣದಂತಹ ವಿಷಯವನ್ನು ಒಂದು ಪಟ್ಟಿಯಿಂದ ಮತ್ತೊಂದು ಪಟ್ಟಿಗೆ ಸೇರಿಸುವುದು ಮೂಲರಚನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಂತಾಗುತದೆಯೇ?... ಏಕೆಂದರೆ (ದೇಶದಲ್ಲಿ) ವೈವಿಧ್ಯತೆ ಇದೆ, ಒಕ್ಕೂಟ ವ್ಯವಸ್ಥೆ ಇದೆ. ಆದರೆ ಒಂದರಿಂದ ಮತ್ತೊಂದಕ್ಕೆ ಬದಲಿಸುವುದರಿಂದ ಮೂಲ ರಚನೆಗೆ ಧಕ್ಕೆ ಬರುತ್ತದೆಯೇ? ಅದು ಹಾಗಲ್ಲದಿರಬಹುದು ... ಹಾಗಿದ್ದರೂ ಪ್ರತಿಕ್ರಿಯೆ ನೀಡುವಂತೆ ನಾವು ಕೇಂದ್ರವನ್ನು ಕೇಳುತ್ತೇವೆ” ಎಂದು ಅವರು ಹೇಳಿದರು.

ತಮಿಳುನಾಡಿಗೆ ನೀಟ್‌ನಿಂದ ವಿನಾಯಿತಿ ನೀಡಬೇಕು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಕೈಗೊಂಡ ನಿರ್ಣಯದಲ್ಲಿ, ಇದೇ ರೀತಿಯ ಪ್ರಶ್ನೆಗಳನ್ನು ಶಾಸನ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಕೂಡ ಮುಖ್ಯ ನ್ಯಾಯಮೂರ್ತಿಗಳು ಮೌಖಿಕವಾಗಿ ತಿಳಿಸಿದ್ದಾರೆ.

ಶಿಕ್ಷಣವು ರಾಜ್ಯ ಅಥವಾ ಸಮವರ್ತಿ ಪಟ್ಟಿಯಲ್ಲಿರಬೇಕೇ ಎಂಬ ಚರ್ಚೆ ಬಂದಾಗ, ಶಿಕ್ಷಣ ಸಂಪನ್ಮೂಲಗಳನ್ನು ದೇಶದಾದ್ಯಂತ ಸಮಾನವಾಗಿ ವಿತರಿಸಬೇಕೆಂಬುದನ್ನು ಪರಿಗಣಿಸುವ ಅಗತ್ಯದ ಬಗ್ಗೆ ನ್ಯಾಯಾಲಯ ಮತ್ತಷ್ಟು ಕಳಕಳಿ ವ್ಯಕ್ತಪಡಿಸಿತು.

ಅರ್ಜಿದಾರರನ್ನು ಉದ್ದೇಶಿಸಿ ನ್ಯಾ. ಬ್ಯಾನರ್ಜಿ ಅವರು, "ನಿಮ್ಮ ಭಾವನೆಗಳು ಗೌರವಾರ್ಹವಾದವು. ಆದರೆ ದಯವಿಟ್ಟು ನೆನಪಿಡಿ, ಈ ದೇಶ ವಿಶಾಲ ಭಾಗಗಳನ್ನು ಒಳಗೊಂಡಿದೆ.. (ಅವು) ಅಭಿವೃದ್ಧಿಯಾಗದೇ ಸಾಗುತ್ತಿವೆ .. ಹೆಚ್ಚಿನ ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆಗಳಿಲ್ಲ. ನೀವು ಅಖಿಲ ಭಾರತ ಕೋಟಾ ತೀರ್ಪನ್ನು ಗಮನಿಸಿದರೆ, ವೈದ್ಯಕೀಯ ಕಾಲೇಜುಗಳಿಲ್ಲದ ಕೆಲವು ಸ್ಥಳಗಳಲ್ಲಿ ವಿದ್ಯಾರ್ಥಿಗಳ ಆಕಾಂಕ್ಷೆ ಏಕೆ ಈಡೇರಬಾರದು? ಶೈಕ್ಷಣಿಕ ಸಂಪನ್ಮೂಲಗಳ ನ್ಯಾಯಯುತ ವಿತರಣೆ ಇರಬೇಕು... ಈಗಲೂ, ದುರದೃಷ್ಟವಶಾತ್, ನಾವು ಈಶಾನ್ಯದ ಜನರನ್ನು ಭಾರತೀಯರಂತೆ ಪರಿಗಣಿಸುವುದಿಲ್ಲ , ಇದೊಂದು ದುರಂತ. ರೂಪದ ಕಾರಣಕ್ಕೆ ಅವರನ್ನು ʼನೇಪಾಳಿʼ ಎಂದು ಕರೆಯಲಾಗುತ್ತದೆ. ಈಶಾನ್ಯ ಭಾಗಗಳಲ್ಲಿ ಹೆಚ್ಚಿನವರು ಶಿಕ್ಷಣ ಸೌಲಭ್ಯ ಪಡೆದಿಲ್ಲ. ಅವರು ನಿಮ್ಮ ಮತ್ತು ನನ್ನಂತೆ ಭಾರತೀಯರು. ಹಾಗಾಗಿ ನಾವು ಅದನ್ನೆಲ್ಲ ಪರಿಗಣಿಸಬೇಕಾಗುತ್ತದೆ” ಎಂದರು.

ನ್ಯಾಯಮೂರ್ತಿ ಪಿ ಡಿ ಆದಿಕೇಶವಲು ಅವರನ್ನೂ ಒಳಗೊಂಡ ಪೀಠ ರಾಜ್ಯ ಸರ್ಕಾರವನ್ನು ಪಕ್ಷಕಾರನ್ನಾಗಿ ಮಾಡಿತು. ಬಳಿಕ ಹತ್ತು ವಾರಗಳ ನಂತರ ವಿಚಾರಣೆ ನಿಗದಿಪಡಿಸಿತು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆರ್ ಶಂಕರನಾರಾಯಣನ್ ಮತ್ತು ರಾಜ್ಯ ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಪಿ ಮುತ್ತುಕುಮಾರ್ ನೋಟಿಸ್ ಸ್ವೀಕರಿಸಿದರು.

ರಾಜ್ಯ ಪಟ್ಟಿಯಿಂದ ವಿಷಯವನ್ನು ವರ್ಗಾಯಿಸುವ ವಿಚಾರದಲ್ಲಿ ತಿದ್ದುಪಡಿ ಮಾಡಲು ವಿಶೇಷ ವಿಧಾನವಿದೆ ಎಂದು ಇಂದು ಮಂಡಿಸಿದ ಸಂಕ್ಷಿಪ್ತ ವಾದದ ವೇಳೆ ಎಎಸ್‌ಜಿ ಶಂಕರ ನಾರಾಯಣನ್‌ ಅವರು ತಿಳಿಸಿದರು. ಅಂತಹ ಬದಲಾವಣೆಯನ್ನು ಮಾಡುವ ಮೊದಲು ಅರ್ಧಕ್ಕಿಂತ ಹೆಚ್ಚು ರಾಜ್ಯಗಳು ಅದನ್ನು ಅಂಗೀಕರಿಸಬೇಕು ಎಂದು ಅವರು ವಾದಿಸಿದರು. 1975-76ರ ಅವಧಿಯಲ್ಲಿ ನಡೆದ ಬೆಳವಣಿಗೆಗಳನ್ನು ಅಧ್ಯಯನ ಮಾಡಬೇಕಿರುವುದರಿಂದ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸಲು ಆರು ವಾರಗಳ ಕಾಲಾವಕಾಶ ಕೋರಿದರು. ಎಲ್ಲಾ ಪ್ರತಿವಾದಿಗಳು ಪ್ರತಿಕ್ರಿಯೆ ಸಲ್ಲಿಸುವ ಸಲುವಾಗಿ ನ್ಯಾಯಾಲಯ ಎಂಟು ವಾರಗಳ ಕಾಲಾವಕಾಶ ನೀಡಿತು. ಆರಮ್ ಸೆಯ್ಯ ವಿರುಂಬು ಟ್ರಸ್ಟ್ ಪರವಾಗಿ ಡಿಎಂಕೆ ಶಾಸಕ ಡಾ. ಇಳೀಳನ್ ನಾಗನಾಥನ್‌ ಅವರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು 1976ರ ಸಂವಿಧಾನದ ಸೆಕ್ಷನ್ 57 (ನಲವತ್ತೆರಡನೇ ತಿದ್ದುಪಡಿ) ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com