ಸಿಎ ನಿವೇಶನದಲ್ಲಿ ಎರಡು ದಶಕ ಕಳೆದರೂ ಕಟ್ಟಡ ನಿರ್ಮಿಸದ ಶಿಕ್ಷಣ ಸೊಸೈಟಿ: ಮಂಜೂರಾತಿ ರದ್ದುಪಡಿಸಿದ ಹೈಕೋರ್ಟ್‌

ಅರ್ಜಿದಾರ ಸಂಸ್ಥೆಯು ನಿವೇಶನದ ಸ್ವಾಧೀನಾನುಭವನ್ನು ನಾಲ್ಕು ವಾರದಲ್ಲಿ ಕೆಎಚ್‌ಬಿ ವಶಕ್ಕೆ ನೀಡಬೇಕು. ಹಾಗೆಯೇ, ಕೆಎಚ್‌ಬಿ ಸಹ ಸಂಸ್ಥೆ ಪಾವತಿಸಿರುವ ಹಣವನ್ನು ಹಿಂದಿರುಗಿಸಬೇಕು ಎಂದಿರುವ ಹೈಕೋರ್ಟ್‌.
Chief Justice P B Varale and Justice Krishna S. Dixit
Chief Justice P B Varale and Justice Krishna S. Dixit

ಶೈಕ್ಷಣಿಕ ಕಟ್ಟಡ ನಿರ್ಮಿಸುವ ಉದ್ದೇಶಕ್ಕೆ ಎಂದು ನಾಗರಿಕ ಸೌಲಭ್ಯ ನಿವೇಶನ (ಸಿಎ) ಪಡೆದು 20 ವರ್ಷಗಳ ಕಳೆದರೂ ಕಟ್ಟಡ ನಿರ್ಮಾಣ ಮಾಡದ್ದಕ್ಕೆ ದಿವ್ಯಜ್ಯೋತಿ ವಿದ್ಯಾ ಕೇಂದ್ರ ಸೊಸೈಟಿಗೆ ಬೆಂಗಳೂರಿನ ಯಲಹಂಕ ಉಪನಗರದಲ್ಲಿ ಮಂಜೂರು ಮಾಡಿದ್ದ ಸಿಎ ನಿವೇಶನವನ್ನು ರದ್ದುಪಡಿಸಿದ್ದ ಕರ್ನಾಟಕ ವಸತಿ ಮಂಡಳಿ (ಕೆಎಚ್‌ಬಿ) ಕ್ರಮವನ್ನು ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠ ಸಹ ಪುರಸ್ಕರಿಸಿದೆ.

ಕೆಎಚ್‌ಬಿ ಹೊರಡಿಸಿದ್ದ ನಿವೇಶನ ಮಂಜೂರಾತಿ ರದ್ದತಿ ಆದೇಶ ಪುರಸ್ಕರಿಸಿದ್ದ ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ದಿವ್ಯಜ್ಯೋತಿ ವಿದ್ಯಾ ಕೇಂದ್ರ ಸೊಸೈಟಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

ಶೈಕ್ಷಣಿಕ ಕಟ್ಟಡ ನಿರ್ಮಾಣಕ್ಕೆ ಮಾಡಬೇಕು ಎಂಬ ನಿರ್ದಿಷ್ಟ ಉದ್ದೇಶಕ್ಕೆ ಸಾರ್ವಜನಿಕ ಸ್ವತ್ತನ್ನು (ಸಿಎ ನಿವೇಶನ) ಮಂಜೂರು ಮಾಡಿದರೆ, ಆ ಆದೇಶವನ್ನು ಅರ್ಜಿದಾರ ಸಂಸ್ಥೆ ಪೂರೈಸಿಲ್ಲ. ಇಂತಹ ಸಂದರ್ಭದಲ್ಲಿ ನಿವೇಶನ ಮಂಜೂರಾತಿ ಆದೇಶವನ್ನು ಉಳಿಸುವುದು ಸಾರ್ವಜನಿಕ ಹಿತಾಸಕ್ತಿಯ ವಿರೋಧಿ ಕ್ರಮವಾಗಲಿದೆ. ಸಮಾಜದ ಶೈಕ್ಷಣಿಕ ಅಗತ್ಯತೆ ಪೂರೈಸುವುದು ಸಂವಿಧಾನದ ಆಶಯವಾಗಿದೆ. ಶೈಕ್ಷಣಿಕ ಕಟ್ಟಡ ನಿರ್ಮಾಣ ಮಾಡದೆ ನಿವೇಶನ ಮಂಜೂರಾತಿಯ ಷರತ್ತನ್ನು ಉಲ್ಲಂಘನೆ ಮಾಡಿದಾಗ ಉದಾರತೆ ಪ್ರದರ್ಶಿಸವುದು ತಪ್ಪಾದ ಸಹಾನೂಭತಿಗೆ ಉದಾಹರಣೆಯಾಗಲಿದೆ. ಜೊತೆಗೆ, ನಿವೇಶನ ಮಂಜೂರಾತಿ ಷರತ್ತುಗಳ ದುರುಪಯೋಗವಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಅರ್ಜಿದಾರ ಸಂಸ್ಥೆಯು ನಿವೇಶನದ ಸ್ವಾಧೀನಾನುಭವನ್ನು ನಾಲ್ಕು ವಾರದಲ್ಲಿ ಕೆಎಚ್‌ಬಿ ವಶಕ್ಕೆ ನೀಡಬೇಕು. ಹಾಗೆಯೇ, ಕೆಎಚ್‌ಬಿ ಸಹ ಸಂಸ್ಥೆ ಪಾವತಿಸಿರುವ ಹಣವನ್ನು ಹಿಂದಿರುಗಿಸಬೇಕು ಎಂದು ಆದೇಶದಲ್ಲಿ ವಿಭಾಗೀಯ ಪೀಠ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಶಾಲಾ ಕಟ್ಟಡ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಲು ಕೋರಿ ದಿವ್ಯಜ್ಯೋತಿ ವಿದ್ಯಾ ಕೇಂದ್ರ ಸೊಸೈಟಿ 2003ರಲ್ಲಿ ಅರ್ಜಿ ಸಲ್ಲಿಸಿತ್ತು. 2013ರ ಡಿಸೆಂಬರ್‌ 16ರಂದು 79,75,705 ರೂಪಾಯಿಗೆ ಸಿಎ ನಿವೇಶನವನ್ನು ಮಂಜೂರು ಮಾಡಿತ್ತು.  ಅದರಂತೆ 53,10,293 ರೂಪಾಯಿಯನ್ನು ಪಾವತಿ ಮಾಡಿದ್ದರಿಂದ ಸಂಸ್ಥೆಗೆ ಷರತ್ತುಬದ್ಧ ಕ್ರಯ ನೀಡಿ,  2005ರ ಅಕ್ಟೋಬರ್‌ 20ರಂದು ನಿವೇಶನವನ್ನು ಸ್ವಾಧೀನಾನುಭವಕ್ಕೆ ನೀಡಲಾಗಿತ್ತು. 2014ರ ಮಾರ್ಚ್‌ 12ರಂದು ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲು ಬಿಬಿಎಂಪಿಗೆ ಅರ್ಜಿ ಸಲ್ಲಿಸಲಾಗಿತ್ತು. ಬಿಬಿಎಂಪಿ ನಕ್ಷೆ ಮಂಜೂರಾತಿ ನೀಡಿತ್ತು. 2018ರಲ್ಲಿ ಕೆಎಚ್‌ಬಿಗೆ ಮನವಿ ಪತ್ರ ಸಲ್ಲಿಸಿ, ಪಿಲ್ಲರ್‌ ಮಟ್ಟಕ್ಕೆ ಕಟ್ಟಡ ನಿರ್ಮಾಣವು ತಲುಪಿದ್ದು, ಕಾಮಗಾರಿ ಪೂರ್ಣಗೊಳಿಸಲು ಸ್ವಲ್ಪ ಸಮಯ ವಿಸ್ತರಣೆ ಮಾಡಬೇಕು ಎಂದು ಕೋರಿದ್ದರು.

ಆದರೆ, 2018ರ ಅಕ್ಟೋಬರ್‌ 17ರಂದು ನಿವೇಶನ ಮಂಜೂರಾತಿಯನ್ನು ರದ್ದುಪಡಿಸಿ ಕೆಎಚ್‌ಬಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ 2018ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವಿದ್ಯಾ ಕೇಂದ್ರವು, ಯಾವುದೇ ನೊಟಿಸ್‌ ನೀಡದೆ ಏಕಾಏಕಿ ನಿವೇಶನ ಮಂಜೂರಾತಿ ಆದೇಶ ರದ್ದುಪಡಿಸಲಾಗಿದೆ ಎಂದು ಆಕ್ಷೇಪಿಸಿತ್ತು. ನಿವೇಶನವನ್ನು ಸ್ವಾಧೀನಾನುಭವಕ್ಕೆ ನೀಡಿದ ನಂತರ ಎರಡು ವರ್ಷದಲ್ಲಿ ಶೈಕ್ಷಣಿಕ ಸಂಸ್ಥೆಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು. ಆದರೆ, 18 ವರ್ಷ ಕಳೆದರೂ ಕಟ್ಟಡ ನಿರ್ಮಾಣ ಪೂರ್ಣಗೊಳಿಸದೆ ನಿವೇಶನ ಮಂಜೂರಾತಿಯ ಷರತ್ತು ಉಲ್ಲಂಘಿಸಲಾಗಿದೆ ಎಂದಿದ್ದ ಏಕ ಸದಸ್ಯ ಪೀಠ, ಅರ್ಜಿ ವಜಾಗೊಳಿಸಿ 2023ರ ಜುಲೈ 4ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ದಿವ್ಯಜ್ಯೋತಿ ವಿದ್ಯಾ ಕೇಂದ್ರವು ಮೇಲ್ಮನವಿ ಸಲ್ಲಿಸಿತ್ತು.

Attachment
PDF
Divya Jyothi Vidya Kendra Vs KHB.pdf
Preview

Related Stories

No stories found.
Kannada Bar & Bench
kannada.barandbench.com