
“ಹೆಸರು, ದಿಕ್ಸೂಚಿ ಅಥವಾ ನಿರ್ದಿಷ್ಟ ಲಾಂಛನ ಒಳಗೊಂಡ ಶೈಕ್ಷಣಿಕ ಸಂಸ್ಥೆಯ ಹೆಸರು ಪ್ರದರ್ಶಿಸಿದ ಮಾತ್ರಕ್ಕೆ ತೆರಿಗೆ ವಿಧಿಸಬಹುದಾದ ಜಾಹೀರಾತಾಗುವುದಿಲ್ಲ. ಅದಕ್ಕೆ ವಾಣಿಜ್ಯ ಚಟುವಟಿಕೆಯ ಅಂಶ ಇರಬೇಕು ಮತ್ತು ಅಂಥ ಜಾಹೀರಾತಿನಿಂದ ಆದಾಯ ಬರುವಂತಿದ್ದರೆ ಮಾತ್ರ ತೆರಿಗೆ ವಿಧಿಸಬಹುದು” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಬೆಂಗಳೂರಿನ ಹೊಸಕೆರೆ ಹಳ್ಳಿಯ ಗುಪ್ತಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ ಎಸ್ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.
ಶಿಕ್ಷಣ ಸಂಸ್ಥೆಯ ಪ್ರಚಾರಕ್ಕಾಗಿ ಅಳವಡಿಸಿರುವ ಜಾಹೀರಾತಿಗೆ ವಾಣಿಜ್ಯ ತೆರಿಗೆ ಪಾವತಿಸುವಂತೆ ನೀಡಿದ್ದ ಡಿಮ್ಯಾಂಡ್ ನೋಟಿಸ್ ರದ್ದುಪಡಿಸಿ ನ್ಯಾಯಾಲಯ ಆದೇಶಿಸಿದೆ. ಜತೆಗೆ, ಆದೇಶದ ಪ್ರತಿ ಸಿಕ್ಕ ಎಂಟು ವಾರಗಳಲ್ಲಿ ಅರ್ಜಿದಾರರು ಜಾಹೀರಾತು ತೆರಿಗೆ ವಿನಾಯಿತಿ ಕೋರಿ ಸಲ್ಲಿಸಿರುವ ಎರಡು ಮನವಿಗಳನ್ನು ಪರಿಗಣಿಸಿ, ಕಾನೂನು ಪ್ರಕಾರ ಆದೇಶಿಸಬೇಕು ಎಂದು ನಿರ್ದೇಶನ ನೀಡಿದೆ.
ಕರ್ನಾಟಕ ಮಹಾನಗರ ಪಾಲಿಕೆ ಕಾಯಿದೆ 1976ರ ಸೆಕ್ಷನ್ 134ನಲ್ಲಿ ವಾಣಿಜ್ಯ ಲಾಭಕ್ಕಾಗಿ ಪ್ರಚಾರ ಮಾಡುವುದು ಮತ್ತು ಜನ ಸಾಮಾನ್ಯರನ್ನು ಸೆಳೆಯುವಂತಹ ಜಾಹೀರಾತುಗಳಿಗೆ ತೆರಿಗೆ ವಿಧಿಸುವುದಕ್ಕೆ ಅವಕಾಶವಿದೆ. ಆದರೆ, ಈ ಪ್ರಕರಣದಲ್ಲಿ ದತ್ತಿ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದು, ಅದರಲ್ಲಿ ವಾಣಿಜ್ಯ ಉದ್ದೇಶವಿಲ್ಲ. ಹೀಗಾಗಿ, ಶಾಲೆಯ ಪ್ರಚಾರಕ್ಕಿರುವ ಜಾಹೀರಾತಿಗೆ ತೆರಿಗೆ ವಿಧಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರ ಶಿಕ್ಷಣ ಸಂಸ್ಥೆ ಅಳವಡಿಸಿರುವ ಜಾಹೀರಾತುಗಳು, ತಮ್ಮದೇ ಆಸ್ತಿಯ ಕಟ್ಟಡದಲ್ಲಿವೆ. ಈ ಜಾಹೀರಾತು ಶಿಕ್ಷಣ ಸಂಸ್ಥೆಯನ್ನು ಗುರುತಿಸುವ ಉದ್ದೇಶ ಹೊಂದಿದೆ. ಲಾಭ ಗಳಿಕೆ ಹಾಗೂ ವಾಣಿಜ್ಯ ಉದ್ದೇಶ ಹೊಂದಿಲ್ಲ. ಬದಲಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗೆ ನಿರ್ದೇಶನಗಳನ್ನು ನೀಡುವುದಾಗಿದೆ ಎಂದು ಪೀಠ ಹೇಳಿದೆ.
"ಜಾಹೀರಾತು ಫಲಕಕ್ಕೆ ಸಂಬಂಧಿಸಿದಂತೆ 2017ರಲ್ಲಿ ಸಲ್ಲಿಸಿರುವ ಮೆಮೊದಲ್ಲಿ ಒದಗಿಸಿರುವ ಛಾಯಾಚಿತ್ರಗಳು ಕಾಲೇಜಿನ ಕಟ್ಟಡಕ್ಕೆ ಅಂಟಿಸಲಾಗಿದ್ದು, ಸಂಸ್ಥೆಯ ಹೆಸರು ಮತ್ತು ಲಾಂಛವನ್ನು ಮಾತ್ರ ಒಳಗೊಂಡಿದೆ. ಇದು ಶಿಕ್ಷಣ ಸಂಸ್ಥೆಯನ್ನು ಗುರುತಿಸುವ ಉದ್ದೇಶವನ್ನು ಹೊಂದಿದೆ ಎಂಬ ಅಂಶ ಗೊತ್ತಾಗಲಿದೆ. ಈ ರೀತಿಯ ಜಾಹೀರಾತುಗಳು ಬಿಬಿಎಂಪಿ ಜಾಹೀರಾತು ಉಪನಿಯಮಗಳು 2006ರ ನಿಯಮ 2ಎ(1) ಅಡಿಯಲ್ಲಿ ವಿವರಿಸಿರುವಂತೆ ಇಲ್ಲ" ಎಂದು ಪೀಠ ಹೇಳಿದೆ.
“ಶಿಕ್ಷಣ ವಾಣಿಜ್ಯ ವ್ಯವಹಾರವಲ್ಲ. ಅದು ಅತ್ಯಗತ್ಯ ದತ್ತಿ ಚಟುವಟಿಕೆಯಾಗಿದೆ ಎಂಬುದಾಗಿ ಟಿ ಎಂ ಎ ಪೈ ಫೌಂಡೇಷನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ. ಅರ್ಜಿದಾರರ ಶಿಕ್ಷಣ ಸಂಸ್ಥೆಯ ಮೇಲೆ ಅಳವಡಿಸಿರುವ ಹೋರ್ಡಿಂಗ್ಸ್‌ಗಳು ಸಾರ್ವಜನಿಕರನ್ನು ಸೆಳೆಯುವುದು ಮತ್ತು ಸರಕುಗಳನ್ನು ಖರೀದಿಸುವುದನ್ನು ಪ್ರೆರೇಪಿಸುವ ಉದೇಶ ಹೊಂದಿಲ್ಲ. ಹೀಗಾಗಿ ಶಾಲಾ, ಕಾಲೇಜುಗಳ ಪ್ರಚಾರಕ್ಕೆ ಅಳವಡಿಸಿರುವ ಫಲಕಗಳಿಗೆ ಜಾಹೀರಾತು ತೆರಿಗೆಗೆ ಒಳಪಡುವುದಿಲ್ಲ” ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ನಿರ್ದಿಷ್ಟ ಗಾತ್ರ ಇಲ್ಲವೇ ನಿರ್ದಿಷ್ಟ ರೂಪದ ಫಲಕಗಳು ನಗರದ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದಾಗಿ ಬಿಬಿಎಂಪಿ ಅಭಿಪ್ರಾಯಪಟ್ಟಲ್ಲಿ, ಅದಕ್ಕೆ ಸಂಬಂಧಿಸಿದಂತಹ ಏಕರೂಪದ ನಿಯಮ ರೂಪಿಸುವುದಕ್ಕೆ ಸ್ವತಂತ್ರವಾಗಿರಲಿದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಅರ್ಜಿದಾರರ ಪರ ವಕೀಲ ರಾಜೇಂದ್ರ ಕುಮಾರ್ ಸುಂಗೈ ಟಿ ಪಿ ಅವರು “ಅರ್ಜಿದಾರ ಶಿಕ್ಷಣ ಸಂಸ್ಥೆ ಒಂದು ದತ್ತಿ ಚಟುವಟಿಕೆಯಾಗಿದ್ದು, ಲಾಭರಹಿತ ಸಂಸ್ಥೆಯಾಗಿದೆ. ಕಟ್ಟಡದಲ್ಲಿ ಹಾಕಿರುವ ಹೋರ್ಡಿಂಗ್ಸ್ ಸಂಸ್ಥೆಯ ಮಾಹಿತಿಯನ್ನು ಒದಗಿಸುವುದಾಗಿದೆ. ಇದರಲ್ಲಿ ಯಾವುದೇ ವಾಣಿಜ್ಯ ಉದ್ದೇಶ ಹಾಗೂ ಜನರನ್ನು ಸೆಳೆಯುವ ಅಂಶಗಳಿಲ್ಲ. ಅಲ್ಲದೇ, ಬಿಬಿಎಂಪಿ ಜಾರಿ ಮಾಡಿರುವ ಡಿಮ್ಯಾಂಡ್ ನೋಟಿಸ್ ಸಂವಿಧಾನದ 14 ಮತ್ತು 19(1)(ಜಿ)ನೇ ವಿಧಿಯ ಉಲ್ಲಂಘನೆಯಾಗಿದೆ. ಹೀಗಾಗಿ ನೋಟಿಸ್ ರದ್ದುಪಡಿಸಬೇಕು” ಎಂದು ಕೋರಿದರು.
ಬಿಬಿಎಂಪಿ ಪರ ವಕೀಲ ಕೆ ವಿ ಮೋಹನ್ ಕುಮಾರ್ ಅವರು “ಕರ್ನಾಟಕ ಮಹಾನಗರ ಪಾಲಿಕೆ ಕಾಯಿದೆಯ ಸೆಕ್ಷನ್ 134 ಅಡಿ ಜಾಹೀರಾತುಗಳ ಮೇಲೆ ತೆರಿಗೆ ವಿಧಿಸುವುದಕ್ಕೆ ಪಾಲಿಕೆಗೆ ಅಧಿಕಾರವಿದೆ. ಅರ್ಜಿದಾರರ ಪಾಲಿಕೆಯಿಂದ ಯಾವುದೇ ಅನುಮತಿ ಪಡೆಯದೆ ಸಂಸ್ಥೆಯ ಕಟ್ಟದಲ್ಲಿ ಫಲಕಗಳು ಹಾಗೂ ಹೋರ್ಡಿಂಗ್ಸ್ ಅಳವಡಿಸಿದ್ದು, ತೆರಿಗೆ ವಿಧಿಸಿರುವುದು ಸರಿಯಾದ ಕ್ರಮವಾಗಿರುವುದರಿಂದ ಅರ್ಜಿಯನ್ನು ವಜಾಗೊಳಿಸಬೇಕು” ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿಯ ಗುಪ್ತಾ ಶಿಕ್ಷಣ ಟ್ರಸ್ಟ್ ಅಡಿ ಗುಪ್ತಾ ಕಾಲೇಜು ನಡೆಸುತ್ತಿದ್ದಾರೆ. ಈ ಕಟ್ಟಡ ಶಿಕ್ಷಣಕ್ಕೆ ಬಳಕೆ ಮಾಡಲಾಗುತ್ತಿದ್ದು, ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿಲ್ಲ. ಆದರೆ, ಶಿಕ್ಷಣ ಸಂಸ್ಥೆಯ ಕುರಿತಂತೆ ಕಾಲೇಜಿನ ಕಟ್ಟಡಗಳಿಗೆ ಹೋರ್ಡಿಂಗ್ಗಳನ್ನು ಅಳವಡಿಸಿದ್ದರು.
ಈ ಹೋರ್ಡಿಂಗ್ಸ್ ಕುರಿತು ವಾಣಿಜ್ಯ ತೆರಿಗೆ ಪಾವತಿಸುವಂತೆ ಬಿಬಿಎಂಪಿ ಅಧಿಕಾರಿಗಳಿ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಿದ್ದರು. ಇದನ್ನು, ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಡಿಮ್ಯಾಂಡ್ ನೋಟಿಸ್ ಜಾರಿ ಮಾಡಿರುವುದು ಅಸಮಂಜಸ ಹಾಗೂ ಕಾನೂನು ಬಾಹಿರ ಎಂದು ಆಕ್ಷೇಪಿಸಿದ್ದರು.