ನ್ಯಾಯಿಕ ಲೋಕದ ಮೇಲೆ ಬಜೆಟ್ ಪರಿಣಾಮ: ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗಳು ಕಾಗದ ರಹಿತ, ಇ- ಕೋರ್ಟ್‌ ಅನುದಾನ ಇಳಿಮುಖ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಕಾನೂನು ಮತ್ತು ನ್ಯಾಯಕ್ಷೇತ್ರಕ್ಕೆ ಮೀಸಲಿಟ್ಟ ಆರ್ಥಿಕ ಸಂಪನ್ಮೂಲಗಳ ವಿಶ್ಲೇಷಣೆ ಈ ಲೇಖನದಲ್ಲಿದೆ.
ನ್ಯಾಯಿಕ ಲೋಕದ ಮೇಲೆ ಬಜೆಟ್ ಪರಿಣಾಮ: ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗಳು ಕಾಗದ ರಹಿತ, ಇ- ಕೋರ್ಟ್‌ ಅನುದಾನ ಇಳಿಮುಖ
Published on

2021ರ ಬಜೆಟ್‌ನಲ್ಲಿ ಒಟ್ಟು ರೂ. 3,229.94 ಕೋಟಿಯಷ್ಟು ಹಣವನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಮೀಸಲಿಡಲಾಗಿದೆ. ಇದರಲ್ಲಿ ಕಾನೂನು ಮತ್ತು ನ್ಯಾಯ ಕ್ಷೇತ್ರಕ್ಕೆ 2,645.82 ಕೋಟಿ ರೂ, ಸುಪ್ರೀಂ ಕೋರ್ಟ್‌ಗೆ 334.96 ರೂ ಹಾಗೂ ಚುನಾವಣಾ ಆಯೋಗಕ್ಕೆ 249.16 ಕೋಟಿ ರೂ ಹಂಚಿಕೆ ಮಾಡಲಾಗಿದೆ.

ಕಾನೂನು ಮತ್ತು ನ್ಯಾಯ

ಈ ವರ್ಷ ನ್ಯಾಯಾಂಗಕ್ಕೆ ಮೂಲಸೌಕರ್ಯ ಒದಗಿಸಲು ಅಂದಾಜು ರೂ. 784 ಕೋಟಿ ರೂ ಮೀಸಲಿಡಲಾಗಿದ್ದು ಕಳೆದ ವರ್ಷದ ಬಜೆಟ್‌ನಲ್ಲಿ ರೂ. 762 ಕೋಟಿ ಮೀಸಲಿಡಲಾಗಿತ್ತು. ನ್ಯಾಯ ವಿತರಣೆ ಮತ್ತು ಕಾನೂನು ಸುಧಾರಣೆಗಳ ರಾಷ್ಟ್ರೀಯ ಮಿಷನ್‌ಗೆ ಕಳೆದ ವರ್ಷಕ್ಕಿಂತ ಕಡಿಮೆ ಮೊತ್ತದ ಬಜೆಟ್ ಹಂಚಿಕೆ ಮಾಡಲಾಗಿದೆ. ದೇಶಾದ್ಯಂತ ನ್ಯಾಯಾಲಯಗಳ ಡಿಜಿಟಲೀಕರಣವನ್ನು ಸಾಧಿಸುವ ಗುರಿಯನ್ನು ಹೊಂದಿರುವ ಇ- ನ್ಯಾಯಾಲಯ ಎರಡನೇ ಹಂತದ ಯೋಜನೆಗೆ ಕೇವಲ 98.82 ಕೋಟಿ ರೂ ಮೀಸಲಿಡಲಾಗಿದೆ. ಕಳೆದ ವರ್ಷ ಈ ಪ್ರಮಾಣ 250 ಕೋಟಿ ರೂಪಾಯಿಯಷ್ಟಿತ್ತು.

ನ್ಯಾಷನಲ್ ಮಿಷನ್ ಅಡಿಯಲ್ಲಿ ನ್ಯಾಯಾಂಗ ಸುಧಾರಣೆಗಳ ಕುರಿತ ಕ್ರಿಯಾ ಸಂಶೋಧನೆ ಮತ್ತು ಅಧ್ಯಯನಗಳಿಗೆ ಈ ವರ್ಷ ಯಾವುದೇ ಹಣ ಹಂಚಿಕೆ ಮಾಡಿಲ್ಲ. ನ್ಯಾಯ ವಿತರಣೆ, ಕಾನೂನು ಶಿಕ್ಷಣ ಸಂಶೋಧನೆ ಮತ್ತು ಕ್ರಿಯಾ ಸಂಶೋಧನೆ / ಮೌಲ್ಯಮಾಪನ / ಮೇಲ್ವಿಚಾರಣಾ ಅಧ್ಯಯನಗಳನ್ನು ಕೈಗೊಳ್ಳಲು ನ್ಯಾಯಾಂಗ ಸುಧಾರಣೆಗಳು, ಸೆಮಿನಾರ್‌ಗಳು / ಸಮ್ಮೇಳನಗಳನ್ನು ಆಯೋಜಿಸುವುದು ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡಲು ಈ ಯೋಜನೆ ರೂಪುಗೊಂಡಿತ್ತು.

ಬೆಂಗಳೂರಿನ ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು), ಹೈದರಾಬಾದ್‌ನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿ (ಎನ್‌ಎಎಲ್‌ಎಸ್‌ಎಆರ್‌), ವಿವಿಧ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು (ಎನ್‌ಎಲ್‌ಯುಗಳು) ಮತ್ತು ದಕ್ಷ್‌ ಮತ್ತು ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯಂಥ ನಾಗರಿಕ ಸಮಾಜ ಸಂಸ್ಥೆಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ.

ಬದಲಾ ಗಿ ದಿಶಾ ಯೋಜನೆಗೆ (ಡಿಸೈನಿಂಗ್ ಇನ್ನೋವೇಟಿವ್ ಸೊಲ್ಯೂಷನ್ಸ್ ಫಾರ್‌ ಹೋಲಿಸ್ಟಿಕ್‌ ಜಸ್ಟೀಸ್‌ ಟು ಇಂಡಿಯಾ)ಗೆ ರೂ. 40 ಕೋಟಿ ಹಣವನ್ನು ವಿನಿಯೋಗಿಸಲಾಗಿದೆ. . ಈ ಯೋಜನೆ ಈಶಾನ್ಯ, ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಇತರ ಪ್ರದೇಶಗಳಲ್ಲಿ ನ್ಯಾಯ ಲಭ್ಯತೆ ವೃದ್ಧಿಸುವ ಗುರಿ ಹೊಂದಿದ್ದು ಟೆಲಿ ಕಾನೂನು, ನ್ಯಾಯಬಂಧು ಹಾಗೂ ನ್ಯಾಯಮಿತ್ರ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಅಲ್ಲದೆ ಇದರ ನೇತೃತ್ವದಲ್ಲಿ ಸಂಸತ್ತು ಮತ್ತು ಶಾಸಕಾಂಗ ಸಭೆಗಳ ಸದಸ್ಯರಿಗಾಗಿನ ವಿಶೇಷ ನ್ಯಾಯಾಲಯಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ.

ಮತ್ತೊಂದು ಗಮನಾರ್ಹ ಬದಲಾವಣೆಯೆಂದರೆ ತೆರಿಗೆ ನ್ಯಾಯಮಂಡಳಿಗಳಿಗೆ ಬಜೆಟ್ ಹಂಚಿಕೆಯನ್ನು ಹೆಚ್ಚಳ ಮಾಡಿರುವುದು. ಕಳೆದ ವರ್ಷ 172.9 ಕೋಟಿ ರೂಪಾಯಿಗಳಷ್ಟಿದ್ದ ಬಜೆಟ್ಟನ್ನು ಈ ಬಾರಿ 219.3 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ.

ಇತರ ಸ್ವಾಯತ್ತ ಸಂಸ್ಥೆಗಳಾದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ), ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ (ಎನ್‌ಜೆಎ) ಮತ್ತು ಭಾರತೀಯ ಕಾನೂನು ಸಂಸ್ಥೆ (ಐಎಲ್‌ಐ) ಕಳೆದ ವರ್ಷದಷ್ಟೇ ಅನುದಾನವನ್ನು ಈ ವರ್ಷವೂ ಪಡೆದಿವೆ. (ಕ್ರಮವಾಗಿ ರೂ. 100 ಕೋಟಿ, 11 ಕೋಟಿ, ಮತ್ತು 3 ಕೋಟಿ ರೂ.). ಅಲ್ಲದೆ ಹರಿಯಾಣ ವಿಧಾನಸಭೆಯೊಂದಿಗೆ ಸಂಯೋಜನೆಗೊಂಡಿರುವ ಸಾಂವಿಧಾನಿಕ ಮತ್ತು ಸಂಸದೀಯ ಅಧ್ಯಯನ ಸಂಸ್ಥೆಗೆ ರೂ. 1.5 ಕೋಟಿ ಮೀಸಲಿಡಲಾಗಿದೆ.

ಸರ್ವೋಚ್ಚ ನ್ಯಾಯಾಲಯ

ಈ ವರ್ಷ ಸುಪ್ರೀಂ ಕೋರ್ಟ್‌ಗೆ ಬಜೆಟ್ ಹಂಚಿಕೆಯಲ್ಲಿ ತುಸು ಏರಿಕೆಯಾಗಿದೆ. ಕಳೆದ ವರ್ಷ 308.61 ಕೋಟಿ ರೂಪಾಯಿಯಷ್ಟಿದ್ದ ಅನುದಾನ ಈ ಬಾರಿ 334.96 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ಈ ಹಣವನ್ನು ಸುಪ್ರೀಂಕೋರ್ಟ್‌ ಆಡಳಿತ ಮತ್ತಿತರ ಖರ್ಚುವೆಚ್ಚಗಳಿಗೆ ಬಳಸಲಾಗುತ್ತದೆ. ನ್ಯಾಯಾಧೀಶರು ಮತ್ತು ರೆಜಿಸ್ಟ್ರಿ ಹಾಗೂ ಕ್ಯಾಂಟೀನ್‌ಗಳು, ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳ ವೇತನ, ಸಾರಿಗೆ ವೆಚ್ಚ,, ಲೇಖನ ಸಾಮಗ್ರಿ,, ಕಚೇರಿ ಉಪಕರಣಗಳು, ಭದ್ರತಾ ಸಲಕರಣೆಗಳು, ಸಿಸಿಟಿವಿ ನಿರ್ವಹಣೆ ಹಾಗೂ ಸುಪ್ರೀಂಕೋರ್ಟ್‌ ವಾರ್ಷಿಕ ವರದಿಗಳ ಮುದ್ರಣದಂತಹ ಖರ್ಚುಗಳನ್ನು ಈ ಹಣದಲ್ಲಿ ಸರಿದೂಗಿಸಲಾಗುತ್ತದೆ.

ಆದಾಯ ತೆರಿಗೆಗೆ ಸಂಬಂಧಿಸಿದ ನಿಬಂಧನೆಗಳು

ಕೇಂದ್ರದ ಬಜೆಟ್ ಜೊತೆಗೆ ಪರಿಚಯಿಸಲಾದ 2021ರ ಹಣಕಾಸು ಮಸೂದೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗಳ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ಕಲ್ಪಿಸಿದೆ. ನ್ಯಾಯಮಂಡಳಿ ಮತ್ತು ಮೇಲ್ಮನವಿಗಳ ನಡುವಿನ ಎಲ್ಲಾ ಸಂವಹನವು ವಿದ್ಯುನ್ಮಾನವಾಗಿರಬೇಕು ಎಂದು ನಿರ್ಮಲಾ ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದು ಹೀಗಾಗಿ ಈ ವಿಧಾನವನ್ನು "ಮುಖರಹಿತ" ಎಂದು ನಿರೂಪಿಸಲಾಗಿದೆ.

ಆದಾಯ ತೆರಿಗೆ ಕ್ಷೇತ್ರದಲ್ಲಿ ಇತರೆ ಬದಲಾವಣೆಗಳು:

ಪಿಂಚಣಿ ಮತ್ತು ಠೇವಣಿ ಮೇಲಿನ ಬಡ್ಡಿ ಮಾತ್ರ ಹೊಂದಿರುವ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗಿದೆ.

ಆದಾಯ ತೆರಿಗೆ ಮೌಲ್ಯಮಾಪನ ಪುನಃ ತೆರೆಯುವ ಕಾಲಮಿತಿಯನ್ನು ಕಡಿಮೆ ಮಾಡುವುದು.

ಸಣ್ಣ ತೆರಿಗೆ ಪಾವತಿದಾರರಿಗೆ ವ್ಯಾಜ್ಯ ಪರಿಹಾರ ಸಮಿತಿ ರಚನೆ.

95% ವಹಿವಾಟುಗಳನ್ನು ಡಿಜಿಟಲ್‌ ರೂಪದಲ್ಲಿ ನಡೆಸುವ ವ್ಯಕ್ತಿಗಳಿಗೆ ತೆರಿಗೆ ಲೆಕ್ಕ ಪರಿಶೋಧನೆ ಮಿತಿಯಲ್ಲಿ ಹೆಚ್ಚಳ

Kannada Bar & Bench
kannada.barandbench.com