ಪರಿಸರ ಪರಿಣಾಮ ಮೌಲ್ಯಮಾಪನ ಕರಡು ಅಧಿಸೂಚನೆ:  ನಿರ್ಬಂಧ ಮುಂದುವರೆಸಿದ ಹೈಕೋರ್ಟ್
Draft EIA Notification

ಪರಿಸರ ಪರಿಣಾಮ ಮೌಲ್ಯಮಾಪನ ಕರಡು ಅಧಿಸೂಚನೆ: ನಿರ್ಬಂಧ ಮುಂದುವರೆಸಿದ ಹೈಕೋರ್ಟ್

ಕಳೆದ ತಿಂಗಳು, ನೀಡಿದ್ದ ಮಧ್ಯಂತರ ಆದೇಶದಲ್ಲಿ ಪರಿಸರದ ಮೇಲಿನ ಪರಿಣಾಮ ಮೌಲ್ಯಮಾಪನ ಅಧಿಸೂಚನೆಯ ಅಂತಿಮ ಆವೃತ್ತಿಯನ್ನು ಸೆಪ್ಟೆಂಬರ್ 7ರವರೆಗೆ ಪ್ರಕಟಿಸದಂತೆ ನ್ಯಾಯಾಲಯ ತಡೆಹಿಡಿದಿತ್ತು.

ಕೇಂದ್ರ ಸರ್ಕಾರ ರೂಪಿಸಿದ್ದ 2020ನೇ ಸಾಲಿನ ಪರಿಸರದ ಮೇಲಿನ ಪರಿಣಾಮ ಮೌಲ್ಯಮಾಪನ (ಇಐಎ) ಕರಡು ಅಧಿಸೂಚನೆಯ ಅಂತಿಮ ಆವೃತ್ತಿಯನ್ನು ಪ್ರಕಟಿಸದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ರಾಜ್ಯ ಹೈಕೋರ್ಟ್ ವಿಸ್ತರಿಸಿದೆ.

ಕೊರೊನಾ ಬಿಕ್ಕಟ್ಟಿನ ಮಧ್ಯೆ ಕರಡು ಅಧಿಸೂಚನೆಗೆ ಸಾಕಷ್ಟು ಪ್ರಚಾರ ದೊರೆತಿಲ್ಲ ಎಂದು ಆರೋಪಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಕಳೆದ ತಿಂಗಳು, ನೀಡಿದ್ದ ಮಧ್ಯಂತರ ಆದೇಶದಲ್ಲಿ ಅಧಿಸೂಚನೆಯ ಅಂತಿಮ ಆವೃತ್ತಿಯನ್ನು ಸೆಪ್ಟೆಂಬರ್ 7 ರವರೆಗೆ ಪ್ರಕಟಿಸದಂತೆ ನಿರ್ಬಂಧ ವಿಧಿಸಿತ್ತು.

ವಿಚಾರಣೆಯ ಸಮಯದಲ್ಲಿ, ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ವಕೀಲ ಶಿವಕುಮಾರ್ ಅವರು ‘2020ನೇ ಸಾಲಿನ ಕರಡು ಇಐಎ ಅಧಿಸೂಚನೆಯನ್ನು 22 ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸುವಂತೆ ಕೇಂದ್ರಕ್ಕೆ ನೀಡಿದ್ದ ತನ್ನ ಆದೇಶವನ್ನು ದೆಹಲಿ ಹೈಕೋರ್ಟ್ ಮರುಪರಿಶೀಲಿಸುತ್ತಿದೆ’ ಎಂದು ತಿಳಿಸಿದರು.

ಇಷ್ಟಾದರೂ, ಈ ವಿಷಯದಲ್ಲಿ ಕೇಂದ್ರ ಇನ್ನಷ್ಟೇ ತನ್ನ ಪ್ರತಿಕ್ರಿಯೆ ಸಲ್ಲಿಸಬೇಕಿದೆ ಎಂಬುದನ್ನು ನ್ಯಾಯಾಲಯ ಗಮನಿಸಿತು. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರಿದ್ದ ಪೀಠವು ಸೋಮವಾರ ಜಾರಿಗೊಳಿಸಿರುವ ಆದೇಶದ ವಿವರ ಹೀಗಿದೆ:

"ಆಗಸ್ಟ್ 5 ರ ಆದೇಶದಲ್ಲಿ ಷರತ್ತುಪೂರ್ವಕ ಆದೇಶ (Rule Nisi) ಹೊರಡಿಸಲಾಗಿದ್ದು ಮಧ್ಯಂತರ ಪರಿಹಾರ ನೀಡಲಾಗಿತ್ತು. ಆ ಬಳಿಕ, ಕೇಂದ್ರ ಸರ್ಕಾರದಿಂದ ಸೂಕ್ತ ಪ್ರತಿಕ್ರಿಯೆ ದೊರೆಯಲಿಲ್ಲ. ಆದ್ದರಿಂದ, 2020ರ ಆಗಸ್ಟ್ 5 ರಂದು ಜಾರಿಗೆ ಬಂದಿರುವ ನಿರ್ಬಂಧ ಮುಂದಿನ ಆದೇಶದವರೆಗೆ ಮುಂದುವರೆಯಲಿದೆ"

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, 2020ರ ಇಐಎ ಕರಡು ಅಧಿಸೂಚನೆ ಪ್ರಕಟಿಸಬಾರದು ಎಂದು ಕೋರಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿದ್ದ ಮತ್ತೊಂದು ಮಧ್ಯಂತರ ಪರಿಹಾರ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ. ವಕೀಲ ಪ್ರದೀಪ್ ನಾಯಕ್ ಮೂಲಕ ಈ ಅರ್ಜಿ ಸಲ್ಲಿಸಲಾಗಿದೆ.

ಆಗಸ್ಟ್ 5 ರ ಆದೇಶದಲ್ಲಿಯೇ ಮಧ್ಯಂತರ ಪರಿಹಾರ ನೀಡಲಾಗಿದೆ. ಆದ್ದರಿಂದ ಈ ಅರ್ಜಿಯಲ್ಲಿ ಕೋರಿರುವಂತೆ ಮಧ್ಯಂತರ ಪರಿಹಾರವನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

‘ಅಧಿಸೂಚನೆ ಕುರಿತಂತೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ವ್ಯಾಪಕ ಪ್ರಚಾರ ಆರಂಭಿಸಿದ ದಿನದಿಂದ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಸೂಕ್ತ ಸಮಯ ನೀಡಬೇಕು. ಆಗ ಮಧ್ಯಂತರ ಪರಿಹಾರ ತೆರವುಗೊಳಿಸಲು ಅರ್ಜಿ ಸಲ್ಲಿಸಬಹುದು’ ಎಂದು ಆಗಸ್ಟ್ 5 ರಂದು ನ್ಯಾಯಾಲಯ ನೀಡಿದ್ದ ಮಧ್ಯಂತರ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

No stories found.
Kannada Bar & Bench
kannada.barandbench.com