ಕೇಜ್ರಿವಾಲ್‌ಗೆ ಅಸಾಧಾರಣ ಜಾಮೀನು ಕೋರಿದ್ದ ಪಿಐಎಲ್‌: ಮನವಿ ತಿರಸ್ಕರಿಸಿದ ಹೈಕೋರ್ಟ್‌; ಅರ್ಜಿದಾರನಿಗೆ ದಂಡ

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಹುಲ್ ಮೆಹ್ತಾ ಮನವಿಗೆ ವಿರೋಧ ವ್ಯಕ್ತಪಡಿಸಿದರು.
Arvind Kejriwal and Delhi High Court
Arvind Kejriwal and Delhi High Court

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕಾರಾವಧಿ ಪೂರ್ಣಗೊಳ್ಳುವವರೆಗೆ ಅಥವಾ ಪ್ರಕರಣಗಳ ವಿಚಾರಣೆ ಪೂರ್ಣವಾಗುವವರೆಗೆ ಅವರ ವಿರುದ್ಧದ ಎಲ್ಲಾ ಕ್ರಿಮಿನಲ್ ಪ್ರಕರಣಗಳಲ್ಲಿ ಅಸಾಧಾರಣ ಮಧ್ಯಂತರ ಜಾಮೀನು (ಎಕ್ಸ್‌ಟ್ರಾಆರ್ಡಿನರಿ ಇಂಟೆರೀಮ್‌ ಬೇಲ್‌) ನೀಡುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಸೋಮವಾರ ತಿರಸ್ಕರಿಸಿದೆ [ವಿ, ದ‌ ಪೀಪಲ್ ಆಫ್‌ ಇಂಡಿಯಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಅರ್ಜಿದಾರರಿಗೆ ₹ 75,000 ದಂಡ ವಿಧಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ಯಾವುದೇ ಆಧಾರ ಇಲ್ಲದೆ ಸಲ್ಲಿಸಲಾಗಿದ್ದು ಅಂತಹ ಪಿಐಎಲ್‌ ಸಲ್ಲಿಸಲು ಅರ್ಜಿದಾರರಿಗೆ ಕೇಜ್ರಿವಾಲ್‌ ಅವರು ಯಾವುದೇ ರೀತಿಯ ಅಧಿಕಾರ ಪತ್ರ (ಪವರ್‌ ಆಫ್‌ ಅಟಾರ್ನಿ) ನೀಡಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಾಲಯದ ಆದೇಶದ ಮೇರೆಗೆ ಕೇಜ್ರಿವಾಲ್ ಅವರು ನ್ಯಾಯಾಂಗ ಬಂಧನದಲ್ಲಿದ್ದು ಅದರ ವಿರುದ್ಧ ಸಲ್ಲಿಸುವ ಪಿಐಎಲ್‌ ಅನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.  

ಈ ಹಿಂದೆ ಸಲ್ಲಿಸಲಾದ ಇದೇ ರೀತಿಯ ಅರ್ಜಿಗಳನ್ನು ನ್ಯಾಯಾಲಯ  ವಜಾಗೊಳಿಸಿತ್ತು. ಅಂತಹ ಕೊನೆಯದೊಂದು ಅರ್ಜಿಗೆಯನ್ನು ₹ 50,000 ದಂಡ ವಿಧಿಸಿ ತಿರಸ್ಕರಿಸಲಾಗಿತ್ತು ಎಂದು ನ್ಯಾಯಾಲಯ ಹೇಳಿದೆ.

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಹುಲ್ ಮೆಹ್ತಾ ಕೂಡ ಮನವಿಗೆ ವಿರೋಧ ವ್ಯಕ್ತಪಡಿಸಿದರು.

ಸಂಪೂರ್ಣ ಪುರಸ್ಕರಿಸಲಾಗದಂತಹ ಮನವಿ ಇದಾಗಿದ್ದು ಎಲ್ಲಾ ಪ್ರಕರಣಗಳಲ್ಲಿ ಅಸಾಧಾರಣ ಜಾಮೀನು ನೀಡಿ ಎಂದು ಕೋರಿರುವ ಪ್ರಾರ್ಥನೆಯನ್ನು ಹೇಗೆ ಮನ್ನಿಸಲು ಸಾಧ್ಯ? ಈ ರೀತಿಯ ಪ್ರಕರಣಗಳಲ್ಲಿ ಮಧ್ಯ ಪ್ರವೇಶಿಸಲು ಅರ್ಜಿದಾರ ಯಾರು? ಇದು ಸಂಪೂರ್ಣ ಪ್ರಚಾರ ಹಿತಾಸಕ್ತಿ ಮೊಕದ್ದಮೆಯಾಗಿದ್ದು ತೀರಾ ದುರದೃಷ್ಟಕರ ಸಂಗತಿ” ಎಂದರು.

ತನಗೆ ಪ್ರಚಾರದ ಆಸಕ್ತಿ ಇಲ್ಲದಿರುವುದರಿಂದ ತಾನು ವಿ ದ ಪೀಪಲ್‌ ಆಫ್‌ ಇಂಡಿಯಾ ಎಂಬ ಹೆಸರಿನಲ್ಲಿ ಅರ್ಜಿ ಸಲ್ಲಿಸುತ್ತಿರುವುದಾಗಿ ಅರ್ಜಿದಾರ ಹೇಳಿಕೊಂಡಿದ್ದರು. ತಾನು ದೆಹಲಿ ಜನರ ಪ್ರತಿನಿಧಿಯಾಗಿ ಅರ್ಜಿ ಸಲ್ಲಿಸುತ್ತಿರುವುದಾಗಿ ಅವರು ವಿವರಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುವ ಮೂಲಕ ಅರವಿಂದ್ ಕೇಜ್ರಿವಾಲ್ ಅವರ ಪ್ರತಿಷ್ಠೆಯನ್ನು ಹತ್ತಿಕ್ಕಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರ ಬಂಧನದಿಂದ ದೆಹಲಿ ಸರ್ಕಾರದ ಸಂಪೂರ್ಣ ಕಾರ್ಯನಿರ್ವಹಣೆಯು ಸ್ಥಗಿತಗೊಂಡಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com