ಕೇಜ್ರಿವಾಲ್ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿಲ್ಲ ಎಂಬುದನ್ನು ಅವರ ಚುನಾವಣಾ ಪ್ರಚಾರ ತೋರಿಸಿದೆ: ದೆಹಲಿ ನ್ಯಾಯಾಲಯ

ಅರವಿಂದ್ ಕೇಜ್ರಿವಾಲ್ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುವಂತೆ ಏಮ್ಸ್ ವೈದ್ಯಕೀಯ ಮಂಡಳಿಗೆ ನ್ಯಾಯಾಲಯ ಸೂಚಿಸಿದೆ.
Arvind Kejriwal
Arvind Kejriwal Facebook
Published on

ಈಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಡೆಸಿದ ವ್ಯಾಪಕ ಚುನಾವಣಾ ಪ್ರಚಾರ ಮತ್ತು ಸಭೆಗಳು ಅವರು ಯಾವುದೇ ಗಂಭೀರ ಇಲ್ಲವೇ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿಲ್ಲ. ಹಾಗಾಗಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿ ಅವರು ಮಧ್ಯಂತರ ಜಾಮೀನಿಗೆ ಅರ್ಹರಲ್ಲ ಎಂದು ದೆಹಲಿ ನ್ಯಾಯಾಲಯ ಬುಧವಾರ ಹೇಳಿದೆ.

ಮಧ್ಯಂತರ ಜಾಮೀನಿಗೆ ಅವರನ್ನು ಅರ್ಹರನ್ನಾಗಿಸಲು ಮಧುಮೇಹ ಅಥವಾ ಟೈಪ್-2 ಸಕ್ಕರೆ ಕಾಯಿಲೆ ಗಂಬೀರ ರೋಗವಲ್ಲ ಎಂದು ರೌಸ್‌ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅಭಿಪ್ರಾಯಪಟ್ಟಿದ್ದಾರೆ.

“ಮಧ್ಯಂತರ ಜಾಮೀನು ಪರಿಹಾರಕ್ಕೆ ಕೇಜ್ರಿವಾಲ್‌ ಅವರನ್ನು ಅರ್ಹರನ್ನಾಗಿಸಲು ಮಧುಮೇಹ ಅಥವಾ ಟೈಪ್-2 ಸಕ್ಕರೆ ಕಾಯಿಲೆಯನ್ನು ಗಂಭೀರ ಕಾಯಿಲೆ ಎನ್ನಲಾಗದು. ಅಲ್ಲದೆ ವಾದದ ವೇಳೆ ಎತ್ತಿ ತೋರಿಸಿರುವಂತೆ ಅರವಿಂದ್‌ ಕೇಜ್ರಿವಾಲ್‌ ಅವರು ಕೈಗೊಂಡ ವ್ಯಾಪಕ ಪ್ರಚಾರ ಯಾತ್ರೆಗಳು ಮತ್ತು ಅದಕ್ಕೆ ಸಂಬಂಧಿಸಿದ ಸಭೆ ಇಲ್ಲವೇ ಕಾರ್ಯಕ್ರಮಗಳು ಅವರು ಯಾವುದೇ ಗಂಭೀರ ಇಲ್ಲವೇ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವಂತೆ ತೋರುತ್ತಿಲ್ಲ ಎಂಬುದನ್ನು ಸೂಚಿಸಿದೆ. ಇದರಿಂದಾಗಿ ಪಿಎಂಎಲ್‌ಎ ಸೆಕ್ಷನ್‌ 45ರ ಅಡಿಯ ಪ್ರಯೋಜನಕಾರಿ ನಿಬಂಧನೆಗಳಿಗೆ ಅವರು ಅರ್ಹರಾಗುವುದಿಲ್ಲ” ಎಂದು ತಿಳಿಸಿದ ನ್ಯಾಯಾಲಯ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನಿರಾಕರಿಸಿತು.

"ನಿರೀಕ್ಷಿತ ಕಾಯಿಲೆ" ರೋಗನಿರ್ಣಯಕ್ಕಾಗಿ ಮತ್ತು ಹೆಚ್ಚಿನ ಕೀಟೋನ್ ಮಟ್ಟ ಅಥವಾ ತೂಕ ನಷ್ಟ ಡಯಾಬಿಟಿಕ್ ಕೀಟೋಆಸಿಡೋಸಿಸ್‌ಗೆ ಕಾರಣವಾಗಬಹುದೆ ಎಂಬುದನ್ನು ನಿರ್ಧರಿಸಲು ಪರೀಕ್ಷೆ ನಡೆಸಲು ದೆಹಲಿ ಮುಖ್ಯಮಂತ್ರಿ ಜಾಮೀನು ಕೋರಿದ್ದಾರೆ. ಅವರು ಬಂಧನದಲ್ಲಿರುವಾಗಲೂ ಈ ಪರೀಕ್ಷೆಗಳನ್ನು ನಡೆಸಬಹುದು" ಎಂದು ನ್ಯಾಯಾಧೀಶೆ ನುಡಿದಿದ್ದಾರೆ.

ಮೂರು ದಿನಗಳೊಳಗೆ ಕೇಜ್ರಿವಾಲ್ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಈ ಹಿಂದೆ ರಚಿಸಲಾದ ಏಮ್ಸ್‌ ವೈದ್ಯಕೀಯ ಮಂಡಳಿಗೆ ಸೂಚಿಸಿತು.

ಕೇಜ್ರಿವಾಲ್ ಪರ ಹಿರಿಯ ವಕೀಲ ಎನ್ ಹರಿಹರನ್ ಮತ್ತು ವಕೀಲ ವಿವೇಕ್ ಜೈನ್ ವಾದ ಮಂಡಿಸಿದ್ದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಮತ್ತು ವಿಶೇಷ ವಕೀಲ ಜೊಹೆಬ್ ಹೊಸೈನ್ ಇ ಡಿಯನ್ನು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com