ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ತಮ್‌ಲುಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರು 24 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಮಂಗಳವಾರ ನಿಷೇಧ ಹೇರಿದೆ.
ಇಂದು (ಮೇ 21) ಸಂಜೆ 5ರಿಂದ 24 ಗಂಟೆಗಳ ಕಾಲ ಗಂಗೋಪಾಧ್ಯಾಯ ಅವರು ಪ್ರಚಾರ ನಡೆಸುವಂತಿಲ್ಲ ಎಂದು ಇಸಿಐನ ಆದೇಶ ವಿವರಿಸಿದೆ.
ಮಹಿಳೆಯರನ್ನು ಗೌರವಿಸುವ ಸಂಸ್ಕೃತಿ ಹೊಂದಿರುವ ರಾಜ್ಯಕ್ಕೆ ಗಂಗೋಪಾಧ್ಯಾಯ ಅವರ ಹೇಳಿಕೆ ಅಪಖ್ಯಾತಿ ತಂದಿದೆ ಎಂದು ಇಸಿಐ ಹೇಳಿದೆ.
ಮೇ 15 ರಂದು ಹಲ್ದಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಗಂಗೋಪಾಧ್ಯಾಯ ಅವರು ನೀಡಿದ್ದ ಹೇಳಿಕೆ ಪ್ರಶ್ನಿಸಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಇಸಿಐಗೆ ದೂರು ನೀಡಿತ್ತು.
ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಬಂಗಾಳಿಯಲ್ಲಿ "ಮಮತಾ ಬ್ಯಾನರ್ಜಿ, ನೀವು ಎಷ್ಟಕ್ಕೆ ಮಾರಾಟವಾಗಿದ್ದೀರಿ? ನಿಮ್ಮ ಬೆಲೆ 10 ಲಕ್ಷ, ಯಾಕೆ ಹೇಳಿ? ಯಾಕೆಂದರೆ ನೀವು ನಿಮ್ಮ ಮೇಕಪ್ ಅನ್ನು ಕೀಯಾ ಸೇಠ್ ಬಳಿ ಮಾಡಿಸಿಕೊಳ್ಳುತ್ತೀರಿ... ಮಮತಾ ಬ್ಯಾನರ್ಜಿ, ಅವರೊಬ್ಬ ಮಹಿಳೆಯೇ? ನನಗಂತೂ ಕೆಲವೊಮ್ಮೆ ಆಶ್ಚರ್ಯ ಹುಟ್ಟಿಸುತ್ತದೆ" ಎಂದಿದ್ದರು ಎಂದು ತಿಳಿದುಬಂದಿತ್ತು.
ಶೋಕಾಸ್ ನೋಟಿಸ್‌ಗೆ ಗಂಗೋಪಾಧ್ಯಾಯ ಅವರು ನೀಡಿದ್ದ ಉತ್ತರ ಪರಾಮರ್ಶಿಸಿದ ಇಸಿಐ ಕೀಳುಮಟ್ಟದ ವೈಯಕ್ತಿ ದಾಳಿ ಮಾಡಿರುವುದರಿಂದ ಗಂಗೋಪಾಧ್ಯಾಯ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ತಿಳಿಸಿದೆ. ಜೊತೆಗೆ ಭವಿಷ್ಯದಲ್ಲಿ ಸಾರ್ವಜನಿಕ ಹೇಳಿಕೆ ನೀಡುವಾಗ ಎಚ್ಚರ ವಹಿಸುವಂತೆಯೂ ತಾಕೀತು ಮಾಡಿದೆ.
ಗಂಗೋಪಾಧ್ಯಾಯ ಅವರ ಹೇಳಿಕೆ ಖಂಡನೀಯ. ಹಿರಿಯ ರಾಜಕಾರಣಿ ಮತ್ತು ಸಾಂವಿಧಾನಿಕ ಸ್ಥಾನ ಹೊಂದಿರುವ ವ್ಯಕ್ತಿಯನ್ನು ಅವರು ಗುರಿಯಾಗಿಸಿಕೊಂಡಿದ್ದಾರೆ ಎಂದು ಇಸಿಐ ತನ್ನ ಆದೇಶದಲ್ಲಿ ತಿಳಿಸಿದೆ.
ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ವಿವಾದಾತ್ಮಕ ತೀರ್ಪುಗಳಿಂದಾಗಿ ಚರ್ಚೆಗೆ ಗ್ರಾಸವಾಗಿದ್ದ ನ್ಯಾ. ಗಂಗೋಪಾಧ್ಯಾಯ ಅವರು ಕಳೆದ ಮಾರ್ಚ್‌ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೂ ತಲುಪಿಸುವಂತೆ ಸೂಚಿಸಲಾಗಿರುವ ಆದೇಶದ ಪ್ರತಿಯಲ್ಲಿ ಮಹಿಳೆಯರ ವಿರುದ್ಧ ಹೇಳಿಕೆ ನೀಡದಂತೆ ಪಕ್ಷದ ಸದಸ್ಯರಿಗೆ ಸಲಹೆ ನೀಡಬೇಕು ಎಂದು ಇಸಿಐ ಹೇಳಿದೆ. ಏಪ್ರಿಲ್‌ನಲ್ಲಿಯೇ ಇಂತಹ ಸಲಹೆ ನೀಡಲು ತಾನು ತಿಳಿಸಿದ್ದಾಗಿ ಅದು ನೆನಪಿಸಿದೆ.