ಶಿವಸೇನೆ ಹೆಸರು, ಚಿಹ್ನೆ ನಿರ್ಬಂಧಿಸಿದ ಇಸಿಐ: ಠಾಕ್ರೆ- ಶಿಂಧೆ ಬಣಗಳೆರಡೂ ಸದ್ಯಕ್ಕೆ ಅವುಗಳನ್ನು ಬಳಸುವಂತಿಲ್ಲ

ಮಾತೃಪಕ್ಷದೊಂದಿಗೆ ನಂಟು ಹೊಂದಿರುವ ಹೆಸರೂ ಒಳಗೊಂಡಂತೆ ತಮಗೆ ಬೇಕಾದ ಹೆಸರುಗಳನ್ನು ಎರಡೂ ಬಣಗಳು ಆಯ್ಕೆ ಮಾಡಬಹುದು ಎಂದು ಆದೇಶ ವಿವರಿಸಿದೆ.
Maharashtra Crises
Maharashtra Crises

ಯಾವುದು ಶಿವಸೇನೆಯ ನಿಜವಾದ ಬಣ ಎಂದು ನಿರ್ಧರಿಸುವವರೆಗೆ ಪಕ್ಷದ ಚಿಹ್ನೆಯಾಗಿದ್ದ ಬಿಲ್ಲು ಮತ್ತು ಬಾಣವನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಗಳು ಬಳಸದಂತೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಶನಿವಾರ ಮಧ್ಯಂತರ ಆದೇಶ ನೀಡಿದೆ.

ರಾಜ್ಯದಲ್ಲಿ ಮುಂಬರುವ ಉಪಚುನಾವಣೆಗಳಿಗೆ ಈ ನಿರ್ಬಂಧ ಅನ್ವಯವಾಗಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಅವರು ಆದೇಶ ಹೊರಡಿಸಿದ್ದಾರೆ.

ಏಕನಾಥರಾವ್ ಸಂಭಾಜಿ ಶಿಂಧೆ (ಅರ್ಜಿದಾರ) ಮತ್ತು ಉದ್ಧವ್ ಠಾಕ್ರೆ (ಪ್ರತಿವಾದಿ) ನೇತೃತ್ವದ ಬಣಗಳು ಶಿವಸೇನಾ ಪಕ್ಷದ ಹೆಸರನ್ನು ಮತ್ತು ಬಿಲ್ಲು ಬಾಣ ಚಿಹ್ನೆಯನ್ನು ಬಳಸಲು ಅನುಮತಿಸುವುದಿಲ್ಲ. ಎರಡೂ ಗುಂಪುಗಳು ತಮ್ಮ ಮಾತೃ ಪಕ್ಷ 'ಶಿವಸೇನಾ' ದೊಂದಿಗೆ ಸಂಪರ್ಕ ಹೊಂದಿರುವ ಹೆಸರುಗಳನ್ನು ಒಳಗೊಂಡಂತೆ  ಮಧ್ಯಂತರ ಕ್ರಮವಾಗಿ ತಮಗೆ ಬೇಕಾದ ಹೆಸರುಗಳನ್ನು ಆಯ್ಕೆ ಮಾಡಬಹುದು ಎಂದು ಆದೇಶ ವಿವರಿಸಿದೆ.

ಮುಂಬರುವ ಉಪ ಚುನಾವಣೆಗಾಗಿ ಎರಡೂ ಬಣಗಳಿಗೆ ಪ್ರತ್ಯೇಕ ಚಿಹ್ನೆ ನೀಡುವ ಸಲುವಾಗಿ ಅವು ಚುನಾವಣಾ ಆಯೋಗ ಸೂಚಿಸಿದ ಮುಕ್ತ ಚಿಹ್ನೆಗಳ ಪಟ್ಟಿಯಿಂದ ತಮಗೆ ಬೇಕಾದ ಚಿಹ್ನೆಯನ್ನು ಆಯ್ಕೆ ಮಾಡಬಹುದು ಎಂದು ಅದು ಹೇಳಿದೆ. ಶಿಂಧೆ ಅಥವಾ ಠಾಕ್ರೆ ಬಣದಲ್ಲಿ ಯಾವುದು ನಿಜವಾದ ಶಿವಸೇನೆ ಎಂದು ನಿರ್ಧರಿಸುವಂತೆ ಶಿಂಧೆ ಬಣ ಮಾಡಿದ್ದ ಮನವಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

Kannada Bar & Bench
kannada.barandbench.com