ಎಸ್‌ಐಆರ್‌ ಸಂಬಂಧಿತ ಕೆಲ ವಿಚಾರದಲ್ಲಿ ಚುನಾವಣಾ ಆಯೋಗ ಸ್ಪಷ್ಟತೆ ನೀಡುತ್ತಿಲ್ಲ: ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ವಾದ

ತಾರ್ಕಿಕ ವ್ಯತ್ಯಾಸಗಳ ಬಗ್ಗೆ ಒಂದಿಷ್ಟು ಗೊಂದಲಗಳಿವೆ, ಎಎಸ್‌ಡಿಡಿಒ ಅಡಿ ಗುರುತಿಲಾಗುವ ಮತದಾರರಿಗೆ ನೋಟಿಸ್ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಅಂತವರ ಸಂಖ್ಯೆ ರಾಜ್ಯದಲ್ಲಿ 80 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ ಎಂದ ವಿಕ್ರಮ್.‌
Karnataka High Court
Karnataka High Court
Published on

ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಎದುರಾಗುವ ‘ತಾರ್ಕಿಕ ವ್ಯತ್ಯಾಸ‘ಗಳು (ಲಾಜಿಕಲ್ ಡಿಸ್ಕ್ರಿಪೆನ್ಸಿ) ಇದರ ನಿರ್ವಹಣೆ ಹಾಗೂ ಗೈರು, ಸ್ಥಳಾಂತರ, ಮರಣ, ನಕಲಿ, ಇತರೆ (ಎಎಸ್‌ಡಿಡಿಒ) ಎಂದು ಗುರುತಿಸಲಾಗುವ ಮತದಾರರಿಗೆ ನೋಟಿಸ್ ನೀಡುವ ವಿಚಾರದಲ್ಲಿ ಚುನಾವಣಾ ಆಯೋಗ ಸ್ಷಷ್ಟತೆ ನೀಡುತ್ತಿಲ್ಲ ಎಂದು ಸಾಹಿತಿ ದೇವನೂರು ಮಹಾದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಸೋಮವಾರ ವಾದಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ‘ (ಎಸ್ಐಆರ್) ಅವಧಿಯನ್ನು ಒಂದರಿಂದ ಮೂರು ತಿಂಗಳವರೆಗೆ ವಿಸ್ತರಿಸುವಂತೆ ಕೋರಿ ಸಾಹಿತಿ ದೇವನೂರು ಮಹಾದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಿವೃತ್ತ ಮೇಜರ್ ಜನರಲ್ ಎಸ್ ಜಿ ವಂಬಟ್ಕೆರೆ, ಲೇಖಕಿ ಸಬೀಹಾ ಭೂಮಿಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Vikram Huilgol, Senior Advocate
Vikram Huilgol, Senior Advocate

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ್ ಅವರು “ಎಸ್ಐಆರ್‌ನ ಕಾನೂನು ಮಾನ್ಯತೆ ಪ್ರಶ್ನಿಸುತ್ತಿಲ್ಲ. ಈಗಾಗಲೇ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ತಾರ್ಕಿಕ ವ್ಯತ್ಯಾಸಗಳ ಬಗ್ಗೆ ಒಂದಿಷ್ಟು ಗೊಂದಲಗಳಿವೆ, ಎಎಸ್‌ಡಿಡಿಒ ಅಡಿ ಗುರುತಿಲಾಗುವ ಮತದಾರರಿಗೆ ನೋಟಿಸ್ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಅಂತವರ ಸಂಖ್ಯೆ ರಾಜ್ಯದಲ್ಲಿ 80 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ರಾ‍ಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದೆ. ಈವರೆಗೆ ಉತ್ತರ ಬಂದಿಲ್ಲ ಎಂದರು.

ಇದರ ಬಗ್ಗೆ ಸುಪ್ರೀಂಕೋರ್ಟ್ ನ ಮಾರ್ಗಸೂಚಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ವಕೀಲರಿಗೆ ಸೂಚಿಸಿದ ಪೀಠ ವಿಚಾರಣೆಯನ್ನು ಮಂಗಳವಾರಕ್ಕೆ (ಜುಲೈ 28) ಮುಂದೂಡಿತು.

Kannada Bar & Bench
kannada.barandbench.com