ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಕೋವಿಡ್‌ ನಿಯಮಗಳ ಉಲ್ಲಂಘನೆಗೆ ಮದ್ರಾಸ್‌ ಹೈಕೋರ್ಟ್‌ ಕೆಂಡಾಮಂಡಲ

“ಇಂದಿನ ಪರಿಸ್ಥಿತಿಗೆ ನಿಮ್ಮ ಒಂದೇ ಸಂಸ್ಥೆ ಕಾರಣ… ನ್ಯಾಯಾಲಯದ ಆದೇಶಗಳ ಹೊರತಾಗಿಯೂ ಕೋವಿಡ್‌ ಶಿಷ್ಟಾಚಾರ ಉಲ್ಲಂಘಿಸಿ ಸಮಾವೇಶ ನಡೆಸುವ ರಾಜಕೀಯ ಪಕ್ಷಗಳ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ” ಎಂದು ಸಿಜೆ ಸಂಜೀಬ್‌ ಬ್ಯಾನರ್ಜಿ ಹೇಳಿದ್ದಾರೆ.
Madras HC election commission
Madras HC election commission
Published on

ರಾಜಕೀಯ ಪಕ್ಷಗಳ ಸಮಾವೇಶದಲ್ಲಿ ಕೋವಿಡ್‌ ಶಿಷ್ಟಾಚಾರ ಪಾಲಿಸದಿರುವುದರಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿದ್ದು, ಇದನ್ನು ನಿಯಂತ್ರಿಸಲು ವಿಫಲವಾದ ಚುನಾವಣಾ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಸೋಮವಾರ ಮೌಖಿಕವಾಗಿ ನುಡಿದಿದೆ.

ಕರೂರ್‌ ಕ್ಷೇತ್ರದಲ್ಲಿ 77 ಅಭ್ಯರ್ಥಿಗಳು ಕಣದಲ್ಲಿದ್ದು, ಮತದಾನದ ಸಂದರ್ಭದಲ್ಲಿ ಕೋವಿಡ್‌ ಶಿಷ್ಟಾಚಾರ ಪಾಲಿಸುವುದಕ್ಕೆ ಸರಿಯಾದ ವ್ಯವಸ್ಥೆ ಕಲ್ಪಿಸದಿರುವ ಸಂಬಂಧ ಆತಂಕ ವ್ಯಕ್ತಪಡಿಸಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್‌ ರಾಮಮೂರ್ತಿ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಚುನಾವಣೆಯ ಸಂದರ್ಭದಲ್ಲಿ ಕೋವಿಡ್‌ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ ರಾಜಕೀಯ ಪಕ್ಷಗಳ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾಗಿರುವ ಚುನಾವಣಾ ಆಯೋಗದ ವಿರುದ್ಧ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಇಂದಿನ ಪರಿಸ್ಥಿತಿಗೆ ನಿಮ್ಮ ಸಂಸ್ಥೆ ಮಾತ್ರವೇ ಕಾರಣ. ಚುನಾವಣಾ ಸಮಾವೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳ ಹೊರತಾಗಿಯೂ ರಾಜಕೀಯ ಪಕ್ಷಗಳ ವಿರುದ್ಧ ನೀವು ಯಾವುದೇ ಕ್ರಮ ಕೈಗೊಂಡಿಲ್ಲ. ಬಹುಶಃ ನಿಮ್ಮ ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣಗಳನ್ನು ದಾಖಲಿಸಬೇಕು!” ಎಂದಿದ್ದಾರೆ.

“ನ್ಯಾಯಾಲಯವು ಪುನರಾವರ್ತಿತವಾಗಿ ಹಲವು ಆದೇಶಗಳನ್ನು ಮಾಡಿದರೂ ಅದನ್ನು ಸರಿಯಾಗಿ ಪಾಲಿಸಲಾಗಿಲ್ಲ. ಪ್ರತಿ ಚುನಾವಣಾ ಸಂಬಂಧಿತ ಮನವಿಯಲ್ಲಿ ಕೋವಿಡ್‌ ಶಿಷ್ಟಾಚಾರ ಅನುಸರಿಸುವುದರ ಮಹತ್ವವನ್ನು ತಿಳಿಸಲಾಗಿದ್ದರೂ ಚುನಾವಣಾ ಆಯೋಗವು ದಿವ್ಯ ಮೌನಕ್ಕೆ ಶರಣಾಗಿದೆ. ಪ್ರಚಾರ ಮತ್ತು ಸಮಾವೇಶಗಳ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿಲ್ಲ ಮತ್ತು ಇತರೆ ಶಿಷ್ಟಾಚಾರಗಳನ್ನೂ ಪಾಲಿಸಲಾಗಿಲ್ಲ” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.

ಮತ ಎಣಿಕೆಯ ಸಂದರ್ಭದಲ್ಲಿ ಕೋವಿಡ್‌ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಪರ ವಕೀಲ ನಿರಂಜನ್‌ ರಾಜಗೋಪಾಲನ್‌ ಹೇಳುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಬ್ಯಾನರ್ಜಿ ಅವರು “ಚುನಾವಣಾ ಸಮಾವೇಶಗಳನ್ನು ನಡೆಸುತ್ತಿದ್ದಾಗ ನೀವು ಅನ್ಯ ಗ್ರಹದಲ್ಲಿದ್ದರೇ?” ಎಂದು ಪ್ರಶ್ನಿಸಿದರು.

ಮೇ 2ರ ಮತ ಎಣಿಕೆಯ ಸಂದರ್ಭದಲ್ಲಿ ಕೋವಿಡ್‌ ಶಿಷ್ಟಾಚಾರಗಳನ್ನು ಅನುಸರಿಸಲು ವ್ಯವಸ್ಥೆ ಮಾಡಲಾಗಿದೆಯೇ ಎಂದು ಪೀಠವು ಪ್ರಶ್ನಿಸಿತು. ತಮಿಳುನಾಡಿನಲ್ಲಿ ಕೋವಿಡ್‌ ಸಾಂಕ್ರಾಮಿಕತೆ ನಿಭಾಯಿಸುವುದರ ಮೇಲೆ ನಿಗಾ ಇಡುವ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡುವ ಸಂದರ್ಭದಲ್ಲಿ ಪೀಠವು ಮೇಲಿನ ಆತಂಕ ವ್ಯಕ್ತಪಡಿಸಿದೆ.

Also Read
ಮತದಾನಕ್ಕಾಗಿ ಹಿರಿಯ ನಾಗರಿಕರಿಗೆ ಸರತಿ ಸಾಲಿನಿಂದ ವಿನಾಯತಿ ನೀಡಲು ಕ್ರಮಕ್ಕೆ ಸೂಚಿಸಿದ ಕೇಂದ್ರ ಚುನಾವಣಾ ಆಯೋಗ

“ಮತ ಎಣಿಕೆಯು ಮತ್ತಷ್ಟು ಕೋವಿಡ್‌ ಹೆಚ್ಚಳಕ್ಕೆ ಕಾರಣವಾಗಬಾರದು. ಮತ ಎಣಿಕೆಯು ಕುಂಟುತ್ತಾ ಸಾಗುತ್ತದೆಯೋ ಅಥವಾ ಮುಂದೂಡಲ್ಪಡುತ್ತದೆಯೋ ಎನ್ನುವುದು ಮುಖ್ಯವಲ್ಲ, ಸಾವರ್ಜನಿಕ ಆರೋಗ್ಯ ಬಹುಮುಖ್ಯ. ಇದನ್ನು ಸಾಂವಿಧಾನಿಕ ಪ್ರಾಧಿಕಾರಗಳಿಗೆ ನೆನಪಿಸಬೇಕಿರುವುದು ವಿಷಾದನೀಯ. ಮತ ಎಣಿಕೆ ಕೋವಿಡ್‌ ಹೆಚ್ಚಳಕ್ಕೆ ನಾಂದಿಯಾಗಬಾರದು” ಎಂದು ಆದೇಶದಲ್ಲಿ ಹೇಳಲಾಗಿದೆ.

ಮೇ 30ಕ್ಕೆ ವಿಚಾರಣೆ ಮುಂದೂಡಲಾಗಿದ್ದು, ಅಂದು ಪರಿಸ್ಥಿತಿಯ ಅವಲೋಕವನ್ನು ಪೀಠ ನಡೆಸಲಿದೆ.

Kannada Bar & Bench
kannada.barandbench.com