ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ರಿಜ್ವಾನ್ ಅರ್ಷದ್ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಚುನಾವಣಾ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ.
ಬೆಂಗಳೂರು ಸಂಪಂಗಿ ರಾಮನಗರದ ನಿವಾಸಿ ಬಿ ಲಕ್ಷ್ಮಿದೇವಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಮಾರ್ಚ್ 13ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ಇಂದು ಪ್ರಕಟಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪ್ರಜಾ ಪ್ರತಿನಿಧಿ ಕಾಯಿದೆ ಸೆಕ್ಷನ್‌ಗಳಾದ 123(1), 123(2), 123(4), 1236(6) ಅಡಿ ರಿಜ್ವಾನ್ ಅರ್ಷದ್ ಅವರು ಅಕ್ರಮ ಎಸಗಿದ್ದು, ಕಾಯಿದೆಯ 100(1)(ಬಿ), (1)(ಡಿ)(iv) ಅಡಿ ಆಯ್ಕೆಯಾಗಲು ಅವರು ಅರ್ಹರಲ್ಲ. ಅವರನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಕಾಂಗ್ರೆಸ್ ಪ್ರಕಟಿಸಿರುವ ಗ್ಯಾರಂಟಿ ಯೋಜನೆಗಳು ಆಮಿಷ ಹಾಗೂ ಆಶ್ವಾಸನೆ ಸ್ವರೂಪದ್ದಾಗಿವೆ. ಗ್ಯಾರಂಟಿ ಯೋಜನೆಗಳನ್ನು ಪಕ್ಷದ ಅಭ್ಯರ್ಥಿಗಳ ಸಮ್ಮತಿಯೊಂದಿಗೆ ಪ್ರಕಟಿಸಲಾಗಿದೆ. ಅವು ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತಹಾಕಲು ಮತದಾರರನ್ನು ಪ್ರೇರೇಪಿಸಿವೆ. ಆ ಮೂಲಕ ರಿಜ್ವಾನ್ ಅರ್ಷದ್ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಮತದಾರರಿಗೆ ಆಮಿಷವೊಡುವುದು ಲಂಚ ಮತ್ತು ಭ್ರಷ್ಟಚಾರಕ್ಕೆ ಸಮವಾಗಿದೆ. ಕಾಂಗ್ರೆಸ್ ವತಿಯಿಂದ ಗ್ಯಾರಂಟಿ ಕಾರ್ಡ್ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಿರುವುದು ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 123 (1) ಪ್ರಕಾರ ಮತ್ತು ಸೆಕ್ಷನ್ 123 (2) ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರುವ ಯತ್ನವಾಗಿದೆ. ಸೆಕ್ಷನ್ 123 (4)ರ ಪ್ರಕಾರ ಆಮಿಷವೊಡ್ಡಿ ಪ್ರಚಾರ ಮಾಡುವುದೂ ಅಪರಾಧವಾಗಿದೆ. ಹೀಗಾಗಿ, ಶಿವಾಜಿನಗರ ಕ್ಷೇತ್ರದಿಂದ ರಿಜ್ವಾನ್ ಅರ್ಷದ್ ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.