ಚುನಾವಣಾ ಅಕ್ರಮ ಪ್ರಕರಣ: ಸಂಸದ ಪ್ರಜ್ವಲ್‌ ರೇವಣ್ಣ ನಡೆಗೆ ಹೈಕೋರ್ಟ್‌ ಅಸಮಾಧಾನ

ಪ್ರಜ್ವಲ್ ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಎ ಮಂಜು ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
Karnataka HC and Loksabha Member Prajwal Revanna
Karnataka HC and Loksabha Member Prajwal Revanna
Published on

ವಿಚಾರಣೆ ವೇಳೆ ಅನುಮತಿ ಇಲ್ಲದೆ, ಶಿಷ್ಟಾಚಾರ ಉಲ್ಲಂಘಿಸಿ ವಕೀಲರ ಜೊತೆ ಮಾತನಾಡಲು ಮುಂದಾದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿತು.

ಪ್ರಜ್ವಲ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಬಿಜೆಪಿಯ ಪರಾಜಿತಗೊಂಡ ಅಭ್ಯರ್ಥಿ ಎ ಮಂಜು ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ವಕೀಲ ಕೇಶವ ರೆಡ್ಡಿ ಅವರ ಪ್ರಶ್ನೆಗಳಿಗೆ ನಿಖರ ಉತ್ತರ ನೀಡುವ ಬದಲಿಗೆ ಹೆಚ್ಚಿನ ವಿವರಣೆ ನೀಡಲು ಪ್ರಜ್ವಲ್‌ ಮುಂದಾಗುತ್ತಿದ್ದುದನ್ನು ಮತ್ತು ವಿಚಾರಣೆ ಮುಗಿದ ನಂತರ ವಕೀಲರ ಜೊತೆ ಮಾತನಾಡಲು ಮುಂದಾದ್ದಕ್ಕೆ ಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಚುನಾವಣೆಯಲ್ಲಿ ನಿಮ್ಮ ಪರ ಪ್ರಚಾರ ಮಾಡಲು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್‌ನಲ್ಲಿ ಕಡೂರಿಗೆ ಬಂದಿದ್ದು ನಿಜವೇ, ಈ ಪ್ರಯಾಣದ ಖರ್ಚು ವೆಚ್ಚವನ್ನು ನೀವು ಆಯೋಗದ ಮುಂದೆ ವಿವರಿಸಿದ್ದೀರಾ ಎಂಬ ಪ್ರಶ್ನೆಗೆ, “ಹೌದು, ಅವರು ಹೆಲಿಕಾಪ್ಟರ್‌ನಲ್ಲಿ ಬಂದದ್ದು ನಿಜ. ಅವರಿಬ್ಬರೂ ತಾರಾ ಪ್ರಚಾರಕರು. ಆಯೋಗದ ನಿಯಮಗಳ ಪ್ರಕಾರ ತಾರಾ ಪ್ರಚಾರಕರ ಖರ್ಚು ವೆಚ್ಚಗಳನ್ನು ನಮೂದು ಮಾಡಬೇಕಾಗಿಲ್ಲ” ಎಂದು ಉತ್ತರಿಸಿದರು.

ಲಕ್ಸುರಿ ಕಾರುಗಳು, ಆಟೊ ರಿಕ್ಷಾಗಳು ಹಾಗೂ ಇತರೆ ವಾಹನಗಳಲ್ಲಿ ಜನರನ್ನು ಕಟ್ಟಿಕೊಂಡು ಭಾರಿ ಮೊತ್ತ ವ್ಯಯಿಸಿ ಭರ್ಜರಿ ಪ್ರಚಾರ ನಡೆಸಿದ್ದೀರಿ. ಈ ಪ್ರಚಾರ ಕಾರ್ಯಗಳ ಖರ್ಚು ವೆಚ್ಚವನ್ನು ತೋರಿಸಿಲ್ಲ ಎಂದು ಅರ್ಜಿದಾರು ಆಪಾದಿಸಿದ್ದಾರೆ. ಇದು ನಿಜವೇ ಎಂಬ ಪ್ರಶ್ನೆಗೆ, “ಇಲ್ಲಾ, ಇದು ಸುಳ್ಳು. ನಾನು ಈ ಕುರಿತ ಖರ್ಚು ವೆಚ್ಚಗಳನ್ನೆಲ್ಲಾ ಆಯೋಗಕ್ಕೆ ವಿವರಿಸಿದ್ದೇನೆ. ಅಂತೆಯೇ, ಆಯೋಗವು ನಾನು ನೀಡಿದ ವಿವರಣೆಯನ್ನು ಒಪ್ಪಿಕೊಂಡಿದೆ” ಎಂದರು.

ಟಿವಿ ಚಾನೆಲ್, ಮುದ್ರಣ ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ಜಾಹೀರಾತುಗಳನ್ನು ಪ್ರಕಟಿಸಿದ್ದೀರಿ. ಇದರ ಖರ್ಚು ವೆಚ್ಚ ತೋರಿಸಿಲ್ಲ ಎಂದು ಆಪಾದಿಸಲಾಗಿದೆ ನಿಜವೇ ಎಂಬ ಪ್ರಶ್ನೆಗೆ, “ಜಾಹೀರಾತು ನೀಡುವಂತೆ ನಾನು ಯಾರಿಗೂ ಮೌಖಿಕವಾಗಿ ಅಥವಾ ಲಿಖಿತವಾಗಿ ಅಧಿಕಾರ ಕೊಟ್ಟಿರಲಿಲ್ಲ” ಎಂದರು.

ನೀವು ಕಾನೂನು ಬಾಹಿರವಾಗಿ ಮತಪಡೆದು ಆಯ್ಕೆಯಾಗಿದ್ದೀರಿ. ಆದ್ದರಿಂದ, ನಿಮ್ಮ ಗೆಲುವನ್ನು ಅನೂರ್ಜಿತಗೊಳಿಸಿ ನನ್ನನ್ನೇ ಗೆದ್ದ ಅಭ್ಯರ್ಥಿ ಎಂದು ಘೋಷಿಸುವಂತೆ ಅರ್ಜಿದಾರರು ಕೋರಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ, “ನಾನು 1.45 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇನೆ. ಆಯೋಗವು ನನಗೆ ಜಯಶಾಲಿ ಅಭ್ಯರ್ಥಿ ಎಂದು ಪ್ರಮಾಣ ಪತ್ರ ನೀಡಿದೆ” ಎಂದರು.

Also Read
ಆದಾಯ ಮರೆಮಾಚಿದ ಪ್ರಕರಣ: ಹೈಕೋರ್ಟ್‌ನಲ್ಲಿ ವಿಚಾರಣೆ ಎದುರಿಸಿದ ಸಂಸದ ಪ್ರಜ್ವಲ್‌ ರೇವಣ್ಣ

ಈ ಅರ್ಜಿಯಲ್ಲಿ ನಿಮ್ಮ ಮನವಿ ಏನು ಎಂಬ ಪೀಠದ ಪ್ರಶ್ನೆಗೆ ಉತ್ತರಿಸಲು ಪ್ರಜ್ವಲ್‌ ರೇವಣ್ಣ ತಡವರಿಸಿದರು. ನಂತರ ಅವರ ಹೇಳಿಕೆ ದಾಖಲಿಸಿಕೊಂಡು, ವಿಚಾರಣೆಯನ್ನು ನವೆಂಬರ್ 4ಕ್ಕೆ ನ್ಯಾಯಾಲಯ ಮುಂದೂಡಿತು.

Kannada Bar & Bench
kannada.barandbench.com