ಚುನಾವಣಾ ಅಕ್ರಮ ಪ್ರಕರಣ: ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ, ಶ್ರೇಯಸ್‌ ಪಟೇಲ್‌ಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಅರ್ಜಿದಾರರ ಪರ ವಕೀಲರು, ವಿಧಾನಸಭಾ ಚುನಾವಣೆಯಲ್ಲಿ ಎಚ್ ಡಿ ರೇವಣ್ಣ ಅವರು ಅಕ್ರಮ ಎಸಗಿ ಜಯಗಳಿಸಿದ್ದಾರೆ. ಅವರು ಜತೆಗೆ ಮತಗಳಿಕೆಯಲ್ಲಿ 2ನೇ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ ಕೂಡ ಮತದಾರರಿಗೆ ಆಮಿಷ ಒಡ್ಡಿದ್ದಾರೆ ಎಂದು ಆಕ್ಷೇಪ.
H D Revanna and Karnataka HC
H D Revanna and Karnataka HC

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮಗಳನ್ನು ನಡೆಸಿ ಹೊಳೆನರಸೀಪುರದಿಂದ ಜೆಡಿಎಸ್ ಅಭ್ಯರ್ಥಿ ಎಚ್ ಡಿ ರೇವಣ್ಣ ಜಯಗಳಿಸಿದ್ದು, ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ಬುಧವಾರ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಪರಾಜಿತ ಬಿಜೆಪಿ ಅಭ್ಯರ್ಥಿ ಹಾಗೂ ವಕೀಲ ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯವು ಶಾಸಕ ಎಚ್ ಡಿ ರೇವಣ್ಣ, ಶ್ರೇಯಸ್ ಎಂ ಪಟೇಲ್, ಗೀತಾ ಶಿವಸ್ವಾಮಿ, ಬಿ ಕೆ ನಾಗರಾಜ, ಎಚ್ ಎಸ್ ತಾರೇಶ್, ಡಿ ಆರ್ ರಂಗಸ್ವಾಮಿ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್‌ 4ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲರು, ವಿಧಾನಸಭಾ ಚುನಾವಣೆಯಲ್ಲಿ ಎಚ್ ಡಿ ರೇವಣ್ಣ ಅವರು ಅಕ್ರಮ ಎಸಗಿ ಜಯಗಳಿಸಿದ್ದಾರೆ. ಅವರಲ್ಲದೆ ಮತಗಳಿಕೆಯಲ್ಲಿ 2ನೇ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ ಕೂಡ ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಹೀಗಾಗಿ, ಇವರಿಬ್ಬರ ಮತಗಳಿಕೆಯನ್ನು ಅಸಿಂಧುಗೊಳಿಸಬೇಕೆಂದು ನ್ಯಾಯಾಲಯವನ್ನು ಕೋರಿದರು.

ಚುನಾವಣೆಯಲ್ಲಿ ಎಚ್ ಡಿ ರೇವಣ್ಣ 88,103, ಎರಡನೇ ಅಭ್ಯರ್ಥಿ ಶ್ರೇಯಸ್‌ ಎಂ.ಪಟೇಲ್ 84,951 ಹಾಗೂ ಅರ್ಜಿದಾರರು 4,850 ಮತಗಳನ್ನು ಪಡೆದಿದ್ದಾರೆ. ಉಳಿದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ರೇವಣ್ಣ ವ್ಯಾಪಕ ಚುನಾವಣಾ ಅಕ್ರಮಗಳನ್ನು ಎಸಗಿದ್ದಾರೆ. ಆ ರೀತಿ ಅಕ್ರಮ ಎಸಗಿ ಗಳಸಿದ ಮತಗಳನ್ನು ಸಿಂಧು ಎಂದು ಪರಿಗಣಿಸಲು ಪ್ರಜಾಪ್ರತಿನಿಧಿ ಕಾಯಿದೆ 1951, ನೀತಿ ಸಂಹಿತೆ ಮತ್ತು ನಿಯಮ 1961 ಹಾಗೂ 2006ರ ಮಾರ್ಗಸೂಚಿಯಲ್ಲಿ ಅವಕಾಶವಿಲ್ಲ. ಹೀಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ಅರ್ಜಿದಾರರನ್ನು ಆಯ್ಕೆಯಾಗಿದ್ದಾರೆ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಮನವಿಯಲ್ಲಿ ಕೋರಿದ್ದಾರೆ.

ಅಲ್ಲದೆ, ಪ್ರತಿವಾದಿ ರೇವಣ್ಣ ಅವರು ಪ್ರಜಾಪ್ರತಿನಿಧಿ ಕಾಯಿದೆ 1951ರ ಹಲವು ಸೆಕ್ಷನ್‌ಗಳಡಿ ಅಕ್ರಮಗಳನ್ನು ಎಸಗಿದ್ದಾರೆ. ರೇವಣ್ಣ ಅವರ ಬೆಂಬಲಿಗರು ಅಣ್ಣೆಹಳ್ಳಿಯಲ್ಲಿ ಪ್ರತಿಯೊಬ್ಬ ಮತದಾರರಿಗೆ ಎರಡು ಕೋಳಿ ಮತ್ತು 2,000 ರೂಪಾಯಿ ನಗದನ್ನು  ಹಂಚಿದ್ದಾರೆ.  ಶಾಂತಿಗ್ರಾಮದ ಬಳಿ ಜನರಿಗೆ ಅಮಿಷವೊಡ್ಡುತ್ತಿದ್ದುದನ್ನು ತಡೆಯಲು ಹೋದಾಗ ರೇವಣ್ಣ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಿಥುನ್, ಮೋಹನ್, ಮಂಜು ಮತ್ತು ಶಂಕರ್ ಸೇರಿ 30 ಮಂದಿ ವಿರುದ್ಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಜೊತೆಗೆ ರೇವಣ್ಣ ಅವರು ಸಲ್ಲಿಸಿರುವ ನಾಮಪತ್ರವೇ ದೋಷಪೂರಿತವಾಗಿದೆ, ಅವರು ತಮ್ಮ ಆಸ್ತಿ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ. ಹಲವು ಮಾಹಿತಿಯನ್ನು ಮರೆ ಮಾಚಿದ್ದಾರೆ.  ಆದರೂ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಸಿಂಧು ಎಂದು ಘೋಷಿಸಿದ್ದಾರೆ. ಭವಾನಿ ರೇವಣ್ಣ ಅವರ ಆಸ್ತಿಯ ವಿವರಗಳೂ ಸಹ ಸುಳ್ಳಿನಿಂದ ಕೂಡಿವೆ ಎಂದೂ ಸಹ ಆರೋಪಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com