ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ, ಹಾಲಿ ವಿಧಾನ ಪರಿಷತ್ ಸದಸ್ಯ ಪಿ ಎಂ ಮುನಿರಾಜುಗೌಡ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಮುನಿರಾಜುಗೌಡ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠವು ರದ್ದುಗೊಳಿಸಿ ಆದೇಶಿಸಿತು.
2014ರ ಲೋಕಸಭಾ ಚುನಾವಣೆ ವೇಳೆ ಮುನಿರಾಜುಗೌಡ ಅವರು ಕನಕಪುರ ತಾಲ್ಲೂಕು ಮರಳವಾಡಿ ಹೋಬಳಿ ಗ್ರಾಮದಲ್ಲಿ 2014ರ ಏಪ್ರಿಲ್ 4ರಂದು ಸಾರ್ವಜನಿಕರಿಗೆ ಕರಪತ್ರ ವಿತರಣೆ ಮಾಡುತ್ತಿದ್ದರು. ಈ ಕರಪತ್ರಗಳಲ್ಲಿ ಹಳೆಯ ದಿನಾಂಕ ನಮೂದು ಮಾಡಲಾಗಿತ್ತು ಎಂದು ಒಟ್ಟು 350 ಕರಪತ್ರ ವಶಪಡಿಸಿಕೊಂಡಿದ್ದ ಸ್ಥಳೀಯ ಚುನಾವಣಾಧಿಕಾರಿ ಚುನಾವಣೆ ನಿಯಮ ಉಲ್ಲಂಘನೆ ಆರೋಪ ಹೊರಿಸಿ ಜನತಾ ಪ್ರಾತಿನಿಧ್ಯ ಕಾಯಿದೆ–1951ರ ಕಲಂ 127ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಮತ್ತೊಂದು ಪ್ರಕರಣ: 2018ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಿ ಎಂ ಮುನಿರಾಜುಗೌಡ ಪರ ಕೆಲ ಯುವಕರು ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನೂ ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇದೇ ವೇಳೆ ಮಂಗಳವಾರ ರದ್ದುಗೊಳಿಸಿದೆ.
ಜೆ ಪಿ ಪಾರ್ಕ್ ವಾರ್ಡ್ ವ್ಯಾಪ್ತಿಯ ಎಚ್‌ಎಂಟಿ ಲೇಔಟ್‌ನ ಚೌಡೇಶ್ವರಿ ದೇವಾಲಯದ ಬಳಿ ಮುನಿರಾಜುಗೌಡ ಪರ ಸಂತೋಷ್, ಮಾರುತಿ, ಚೇತನ್ ಕುಮಾರ್, ಮಂಜುನಾಥ್ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಅಭ್ಯರ್ಥಿ ಪರ ಪ್ರಚಾರ ನಡೆಸುವವರು 2018ರ ಮೇ 26ರಂದೇ ಮತಕ್ಷೇತ್ರ ಬಿಟ್ಟು ತೆರಳುವಂತೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಈ ನಾಲ್ವರು ನೀತಿ ಸಂಹಿತೆ ಉಲ್ಲಂಘನೆ ಮಾಡಿ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಎರಡೂ ಪ್ರಕರಣಗಳಲ್ಲಿ ಮುನಿರಾಜುಗೌಡರ ಪರ ವಕೀಲ ಧರಣೇಶ್ ಅವರು ಈ ಪ್ರಕರಣಗಳನ್ನು ಸಂಪೂರ್ಣ ರಾಜಕೀಯ ಪ್ರೇರಿತವಾಗಿ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದ್ದರು.